ವಯಸ್ಸಾದ ಪೋಷಕರನ್ನು ನೋಡಿಕೊಳ್ಳದಿದ್ದರೆ ಆಸ್ತಿ ಕಳೆದು ಕೊಳ್ಳಬೇಕಾಗುತ್ತೆ ಎಚ್ಚರಿಕೆ..!!
ಮಗಳಿಂದ ಪೋಷಕರಿಗೆ ಆಸ್ತಿ ವಾಪಸ್ ಕೊಡಿಸಿದ ಕೊಡಗು ಎ. ಸಿ ಕೋರ್ಟ್
ವರದಿ: ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.21): ಒಂಭತ್ತು ತಿಂಗಳು ಹೊತ್ತು, ಹೆತ್ತು ಸಾಕಿ, ಸಲುಹಿದ ತಂದೆ ತಾಯಿಗಳನ್ನು ಹೊರಗೆ ಹಾಕಿ ಅವರ ಆಸ್ತಿಯನ್ನು ಅನುಭವಿಸುತ್ತಿದ್ದ ಮಕ್ಕಳಿಗೆ ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ನ್ಯಾಯಾಲಯ ತಕ್ಕ ಶಾಸ್ತಿಯನ್ನು ಮಾಡಿದೆ. ವೃದ್ಧ ಪೋಷಕರನ್ನು ನೋಡಿಕೊಳ್ಳದ ನಿಮಗೆ ಅವರ ಆಸ್ತಿ ಅನುಭವಿಸುವ ಹಕ್ಕೂ ಇಲ್ಲವೆಂದು ಛೀಮಾರಿ ಹಾಕಿದೆ.
ತಂದೆ ತಾಯಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಮಕ್ಕಳನ್ನು ಹೆತ್ತು, ಹೊತ್ತು ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಜೊತೆಗೆ ಉತ್ತಮ ಶಿಕ್ಷಣ ಕೊಡಿಸಿ ತಮ್ಮ ಕೈಯಲ್ಲಾದಷ್ಟು ಆಸ್ತಿ ಪಾಸ್ತಿಯನ್ನು ಸಂಪಾದಿಸಿ ಕೊಡುತ್ತಾರೆ. ಹಾಗೆ ತಂದೆ ತಾಯಿಗಳಿಗೆ ವಯಸ್ಸಾದ ಮೇಲೆ ಅವರನ್ನು ನೋಡಿಕೊಳ್ಳಬೇಕಾದದ್ದು ಮಕ್ಕಳ ಕರ್ತವ್ಯ ಅಲ್ಲವೇ.? ಆದರೆ ಇಲ್ಲೊಬ್ಬ ಹೆಣ್ಣು ಮಗಳು ವೃದ್ದ ತಂದೆ ತಾಯಿಯಿಂದ ಆಸ್ತಿ ಪಡೆದು ಬಳಿಕ ಅವರನ್ನು ಕಡೆಗಣಿಸಿ ಉಪವಿಭಾಗಧಿಕಾರಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಂದೆ ತಾಯಿಗಳಿಂದ ಪಡೆದ ಆಸ್ತಿಯನ್ನು ಅಪರ ಜಿಲ್ಲಾಧಿಕಾರಿ ಕೋರ್ಟ್ ಮಗಳಿಂದ ಪೋಷಕರಿಗೆ ವಾಪಸ್ ಕೊಡಿಸಿ ತಕ್ಕ ಪಾಠ ಕಲಿಸಿದೆ.
undefined
ಸಂರಕ್ಷಿತ ಅರಣ್ಯದಲ್ಲಿ ಅಕ್ರಮ ರಸ್ತೆ ನಿರ್ಮಾಣ, ಕೊಡಗು ಶಾಸಕರ ಮೇಲೆ ಶಿಕ್ಷೆ ತೂಗುಗತ್ತಿ!
ಆಸ್ತಿ ಕೊಟ್ಟರೂ ಚೆನ್ನಾಗಿ ನೋಡಿಕೊಳ್ಳದ ಮಗಳು: ಹೌದು ತಂದೆ ತಾಯಿಯರ ಯೋಗಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಕೊಡಗು ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ ಬಿ.ಎಸ್.ಜಾನಕಿ 0.15 ಎಕರೆ ಆಸ್ತಿಯನ್ನು ಹೊಂದಿದ್ದರು. ಮುಪ್ಪಿನ ದಿನಗಳನ್ನು ಕಳೆಯುತ್ತಿರುವ ವಯಸ್ಸಾದ ಮೇಲೆ ತಮ್ಮ ಮಗಳೇ ನಮ್ಮನ್ನು ನೋಡಿಕೊಳ್ಳಬೇಕಲ್ಲವೇ.? ಆದ್ದರಿಂದ ತಮ್ಮ ಮಗಳಿಗೆ ತಮ್ಮ ಚಿಕ್ಕ ಆಸ್ತಿಯನ್ನು ನೀಡಿದರೆ ಅವಳು ನಮ್ಮನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಭಾವಿಸಿ ತಮ್ಮ ಎರಡನೇ ಮಗಳಾದ ಜಯಲಕ್ಷ್ಮಿ ಬಿ.ಎಸ್ ಎಂಬಾಕೆಗೆ ದಾನಪತ್ರದ ಮೂಲಕ ಅವಲ ಹೆಸರಿಗೆ ಖಾತೆಯನ್ನು ಮಾಡಿಸಿಕೊಟ್ಟಿದ್ದರು.
ಆಸ್ತಿ ಸಿಕ್ಕ ತಕ್ಷಣ ವರಸೆ ಬದಲಿಸಿದ್ದ ಮಗಳು: ಆಸ್ತಿ ತಮ್ಮ ಹೆಸರಿಗೆ ವರ್ಗಾವಣೆ ಆಗುತ್ತಿದ್ದಂತೆ ಹೆಣ್ಣುಮಗಳು ಜಯಲಕ್ಷ್ಮಿ ಪೋಷಕರ ಯೋಗಕ್ಷೇಮ ನೋಡಿಕೊಳ್ಳದೆ ಸಂಪೂರ್ಣ ನಿರ್ಲಕ್ಷಿಸಿದ್ದರು. ಇದರಿಂದ ನೊಂದ ಪೋಷಕರು ಕೊಡಗು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರಿಗೆ ಅರ್ಜಿ ಸಲ್ಲಿಸಿ ಮಗಳ ಹೆಸರಿಗೆ ಮಾಡಿರುವ ದಾನಪತ್ರವನ್ನು ರದ್ದುಗೊಳಿಸುವಂತೆ ಕೋರಿದ್ದರು. ಅಲ್ಲದೆ ಆ ಆಸ್ತಿಯನ್ನು ತಮಗೆ ವಾಪಸ್ಸು ಕೊಡಿಸುವಂತೆ ಮನವಿ ಮಾಡಿದ್ದರು. ನಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಆ ಪ್ರಕರಣವನ್ನು ಉಪ ವಿಭಾಗಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಸೂಕ್ತ ಕ್ರಮವಹಿಸಿ ದೃದ್ದ ದಂಪತಿಗಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದರು.
ಬೆಂಗಳೂರಿಗೆ ಹೊರಟಿದ್ದವಳು ನಿಗೂಢವಾಗಿ ಕೊಲೆಯಾದಳು..!
ದಾನಪತ್ರ ರದ್ದುಗೊಳಿಸಿದ ನ್ಯಾಯಾಲಯ: ವಿಚಾರಣೆ ನಡೆಸಿದ ಕೊಡಗು ಉಪವಿಭಾಗಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರು ವೃದ್ಧ ದಂಪತಿಯ ಸ್ಥಿತಿಯನ್ನು ಗಮನಿಸಿ ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡಿ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007 ರ ಅಡಿ ದಾನಪತ್ರ ರದ್ದುಗೊಳಿಸಿದ್ದಾರೆ. ಅಲ್ಲದೆ ಮಗಳು ಜಯಲಕ್ಷ್ಮಿ ಹೆಸರಿನಲ್ಲಿರುವ ಆಸ್ತಿಯನ್ನು ತಾಯಿ ಬಿ.ಎಸ್.ಜಾನಕಿ ಅವರ ಹೆಸರಿಗೆ ವರ್ಗಾಯಿಸುವಂತೆ ಆದೇಶ ನೀಡಿದ್ದಾರೆ. ಆ ಮೂಲಕ ಪೋಷಕರಿಂದ ಆಸ್ತಿ ಪಡೆದು ಬಳಿಕ ಕಡೆಗಣಿಸುವ ಮಕ್ಕಳಿಗೆ ಎಚ್ಚರಿಕೆಯ ಸಂದೇಶ ರವಾಸಿದ್ದಾರೆ.