Bengaluru Airport: ಸಂಕ್ರಾಂತಿಗೆ ಟರ್ಮಿನಲ್‌ 2 ಕಾರ್ಯಾರಂಭ: ಕಲಬುರಗಿಗೆ ಹಾರಲಿದೆ ಮೊದಲ ವಿಮಾನ

Published : Jan 11, 2023, 03:29 PM ISTUpdated : Jan 11, 2023, 03:50 PM IST
Bengaluru Airport: ಸಂಕ್ರಾಂತಿಗೆ ಟರ್ಮಿನಲ್‌ 2 ಕಾರ್ಯಾರಂಭ: ಕಲಬುರಗಿಗೆ ಹಾರಲಿದೆ ಮೊದಲ ವಿಮಾನ

ಸಾರಾಂಶ

ಭಾನುವಾರ, ಅಂದರೆ ಜನವರಿ 15 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಟರ್ಮಿನಲ್‌ 2ನಲ್ಲಿ ಮೊದಲ ವಿಮಾನ ಹಾರಾಟ ನಡೆಸಲಿದೆ. ಬೆಳಗ್ಗೆ 8.40 ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಸ್ಟಾರ್‌ ಏರ್‌ ವಿಮಾನ ಹಾರಾಟ ನಡೆಸಲಿದೆ.

ಬೆಂಗಳೂರು (ಜನವರಿ 11, 2023) - ಪ್ರಧಾನಿ ಮೋದಿ ನವೆಂಬರ್ 2022 ರಲ್ಲಿ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌ 2 ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದರು. ಆದರೆ, ಈವರೆಗೆ ಟರ್ಮಿನಲ್ 2 ನಿಂದ ಯಾವುದೇ ವಿಮಾನ ಹಾರಾಟ ನಡೆಸಿರಲಿಲ್ಲ. ಬರುವ ಸಂಕ್ರಾಂತಿ ಹಬ್ಬದಿಂದ ವಿಮಾನ ಕಾರ್ಯಾಚರಣೆ ನಡೆಸಲಿದೆ. ಹೌದು, ಭಾನುವಾರ, ಅಂದರೆ ಜನವರಿ 15 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಟರ್ಮಿನಲ್‌ 2ನಲ್ಲಿ ಮೊದಲ ವಿಮಾನ ಹಾರಾಟ ನಡೆಸಲಿದೆ. ಬೆಳಗ್ಗೆ 8.40 ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಸ್ಟಾರ್‌ ಏರ್‌ ವಿಮಾನ ಹಾರಾಟ ನಡೆಸಲಿದೆ. ಇದೇ ರೀತಿ, ಏರ್‌ ಏಷ್ಯಾ, ಏರ್‌ ಇಂಡಿಯಾ ಹಾಗೂ ವಿಸ್ತಾರಾ ಸಹ ಶೀಘ್ರದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಟರ್ಮಿನಲ್ 2 ನಿಂದ ವಿಮಾನ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿದುಬಂದಿದೆ. ಟರ್ಮಿನಲ್ 2 ನಲ್ಲಿ ದೇಶೀಯ ವಿಮಾನಗಳು ಮಾತ್ರ ಹಾರಾಟ ನಡೆಸಲಿದೆ ಎಂದು ವರದಿಯಾಗಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಟರ್ಮಿನಲ್ 2 ಅನ್ನು 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ನವೆಂಬರ್ 11, 2022 ರಂದು 2,55,645 ಸ್ಕ್ವೇರ್‌ ಮೀಟರ್‌ ವಿಸ್ತೀರ್ಣದ ಮೊದಲ ಹಂತದ ಟರ್ಮಿನಲ್‌ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಆದರೆ, ಸ್ವಲ್ಪ ಕೆಲಸ ಬಾಕಿ ಇದ್ದ ಕಾರಣ ವಿಮಾನಗಳ ಹಾರಾಟವನ್ನು ಜನವರಿಗೆ ಮುಂದೂಡಲಾಗಿತ್ತು. ಸದ್ಯ, ಸಂಕ್ರಾಂತಿಗೆ ದೇಶೀಯ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು  ವರದಿಯಾಗಿದೆ. 

ಇದನ್ನು ಓದಿ: ಟರ್ಮಿನಲ್‌-2 ಎಂಬ ಹೈಟೆಕ್‌ ಅರಮನೆ: ಅತ್ಯಾಧುನಿಕ ತಂತ್ರಜ್ಞಾನದ ಮಾಯಾಲೋಕ

ಕೆಂಪೇಗೌಡ ಏರ್‌ಪೋರ್ಟ್‌ ಟರ್ಮಿನಲ್ 2 ವಿಶೇಷತೆಗಳೇನು ನೋಡಿ..
ನಗರಕ್ಕೆ ಸಮೀಪ ಇರುವ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಹಲವು ವಿಶೇಷತೆಗಳನ್ನು ಹೊಂದಿದೆ. 5ಜಿ ಸೇವೆ, ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೆಚ್ಚಳ, ಸುಂದರ ಟರ್ಮಿನಲ್‌ ಒಳಾಂಗಣ, ಪ್ರಯಾಣಿಕ ಸ್ನೇಹಿ ಸೇವೆ ಹೀಗೆ ವಿಶ್ವ ದರ್ಜೆಯ ಅನುಕೂಲಗಳನ್ನು ಒಳಗೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್‌ನಲ್ಲಿ ಅಲ್ಟ್ರಾಫಾಸ್ಟ್‌ 5ಜಿ ನೆಟ್‌ವರ್ಕ್ ಸೇವೆ ಆರಂಭಗೊಂಡಿದೆ. ಏರ್‌ಟೆಲ್‌ನ 5ಜಿ ಪ್ಲಸ್‌ ಸೇವೆಯಿಂದ ಈ ಸೇವೆ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಏರ್‌ಪೋರ್ಟ್‌ನ ಸಾಮರ್ಥ್ಯ ಈಗ 2.5 ಕೋಟಿ ಪ್ರಯಾಣಿಕರಿಗೆ ಹೆಚ್ಚಳ
ಆವಿಷ್ಕಾರ, ಸುಸ್ಥಿರತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ನೂತನ ಟರ್ಮಿನಲ್‌ ನಿರ್ಮಾಣದಿಂದ ನಮ್ಮ ವಿಮಾನ ನಿಲ್ದಾಣದ ಸಾಮರ್ಥ್ಯ ವರ್ಷಕ್ಕೆ 2.5 ಕೋಟಿ ಪ್ರಯಾಣಿಕರಿಗೆ ಹೆಚ್ಚಳವಾಗಿದೆ ಎಂದು ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮುರಾರ್‌ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ಉದ್ಘಾಟಿಸಿದ ಪ್ರಧಾನಿ ಮೋದಿ

63 ಎಕರೆ ವಿಶಾಲ ವಿಸ್ತೀರ್ಣ
2ನೇ ಟರ್ಮಿನಲ್‌ನ ಮೊದಲ ಹಂತವು ಬರೋಬ್ಬರಿ 2,55,661 ಚದರ ಮೀಟರ್‌ (63 ಎಕರೆ) ಬೃಹತ್‌ ವಿಸ್ತೀರ್ಣ ಹೊಂದಿದೆ. ಹೊಸ ಟರ್ಮಿನಲ್‌ ಮೊದಲ ಟರ್ಮಿನಲ್‌ನ ಈಶಾನ್ಯ ದಿಕ್ಕಿನಲ್ಲಿದ್ದು, ನ್ಯೂಯಾರ್ಕ್ ಮೂಲದ ವಾಸ್ತು ಶಿಲ್ಪ ಕಂಪನಿಯು ಇದನ್ನು ವಿನ್ಯಾಸಗೊಳಿಸಿದೆ.

ಮುಖವೇ ಬೋರ್ಡಿಂಗ್‌ ಪಾಸ್‌..!
‘ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್‌ ಪಾಸ್‌’ ತಂತ್ರಜ್ಞಾನದಿಂದ ಪ್ರಯಾಣಿಕರು ಯಾವುದೇ ಅಡೆತಡೆಗಳಿಲ್ಲದೆ ಸೆಕ್ಯುರಿಟಿ ಚೆಕ್‌ಗಳನ್ನು ದಾಟಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪ್ರಯಾಣಿಕರ ಮುಖವನ್ನೇ ಬಯೋಮೆಟ್ರಿಕ್‌ ಟೋಕನ್‌ನಂತೆ ಪರಿಗಣಿಸಲಾಗುತ್ತದೆ. 90 ಕೌಂಟರ್‌ಗಳನ್ನು ಹೊಂದಿರುವ 2ನೇ ಟರ್ಮಿನಲ್‌ ವೇಗದ ಚೆಕ್‌-ಇನ್‌ಗಳು, ಸುರಕ್ಷತಾ ತಪಾಸಣೆ (ಸೆಕ್ಯುರಿಟಿ ಚೆಕ್‌) ಪ್ರದೇಶಗಳಿಂದ ವೇಗವಾಗಿ ಮುನ್ನಡೆಯಲು ಅನುವು ಮಾಡಿಕೊಡಲಿದೆ. ಜತೆಗೆ ಡಿಜಿ ಯಾತ್ರೆ, ಸೆಲ್ಟ್‌ ಬ್ಯಾಗೇಜ್‌ ಡ್ರಾಪ್‌ ಆಫ್‌ ವ್ಯವಸ್ಥೆ ಮೂಲಕ ತಡೆರಹಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌, ಕೆಂಪೇಗೌಡರ ಕೊಡುಗೆ ಅಪಾರ: ಪ್ರಧಾನಿ ನರೇಂದ್ರ ಮೋದಿ

PREV
Read more Articles on
click me!

Recommended Stories

ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ
ಹಾವೇರಿ: ಅಕ್ಕಿ ಕಳ್ಳರ ಪಾಲಾಗುತ್ತಿದೆ ಬಡವರ 'ಅನ್ನಭಾಗ್ಯ'; ಸಿಎಂ ಸಿದ್ದರಾಮಯ್ಯ ಅವರೇ ಇಲ್ನೋಡಿ!