ಮಸೀದಿ ಕೆಡವಿದಾಗ ದೇವಸ್ಥಾನ ಪತ್ತೆ; ಮಸೀದಿ ಕಾಮಗಾರಿಗೆ ತಡೆಯಾಜ್ಞೆ ತಂದ ಭಜರಂಗದಳ!

By Suvarna News  |  First Published Apr 22, 2022, 7:38 PM IST

* ಮಂಗಳೂರಿನಲ್ಲಿ ಮಸೀದಿ ಕೆಡವಿದಾಗ ದೇವಸ್ಥಾನ ಪತ್ತೆ
* ಸದ್ಯ ಮಸೀದಿ ನವೀಕರಣ ಕಾಮಗಾರಿಗೆ ತಡೆಯಾಜ್ಞೆ
* ಮಸೀದಿ ಕಾಮಗಾರಿಗೆ ತಡೆಯಾಜ್ಞೆ ತಂದ ಭಜರಂಗದಳ


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು, (ಏ.22):
ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಗುಡಿ ಮಾದರಿ ಪತ್ತೆಯಾದ ವಿವಾದಕ್ಕೆ ಸಂಬಂಧಿಸಿ ವಿಶ್ವಹಿಂದೂ ಪರಿಷತ್-ಬಜರಂಗದಳ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಸದ್ಯ ಮಸೀದಿ ನವೀಕರಣ ಕಾಮಗಾರಿಗೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿದೆ.

ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾ ಆಡಳಿತಕ್ಕೆ ತಡೆಯಾಜ್ಞೆ ನೀಡಲಾಗಿದೆ. ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರೊಬ್ಬರ ಮೂಲಕ ಮಂಗಳೂರಿನ ಮೂರನೇ ಜಿಲ್ಲಾ ನ್ಯಾಯಾಲಯಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸದ್ಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಯಾವುದೇ ಮಾದರಿಯನ್ನು ಕಿತ್ತು ಹಾಕುವುದು ಅಥವಾ ಹಾನಿ ಮಾಡದಂತೆ ತಡೆಯಾಜ್ಞೆ ನೀಡಿದ್ದು, ಯಥಾಸ್ಥಿತಿ ಕಾಪಾಡಲು ಸೂಚಿಸಿ ನ್ಯಾಯಾಲಯ ಆದೇಶಿಸಿದೆ. 

Tap to resize

Latest Videos

ಮಸೀದಿಯಲ್ಲಿ ಹಿಂದೂ ಕುಶಲಕರ್ಮಿಯ ಕೈಚಳಕ, ಕೋಮು ಸೂಕ್ಷ್ಮ ಮಂಗಳೂರಿನ ಸೌಹಾರ್ದತೆಯ ಕಥೆ

ನಿನ್ನೆ(ಗುರುವಾರ) ಮಸೀದಿಯನ್ನ ನವೀಕರಣದ ಸಲುವಾಗಿ ಮುಂಭಾಗ ಕೆಡವಲಾಗಿತ್ತು. ಈ ವೇಳೆ ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಜೈನ ಅಥವಾ ಹಿಂದೂ ಧರ್ಮಕ್ಕೆ ಸೇರಿದ ದೇವಸ್ಥಾನವಿರೋ ಸಾಧ್ಯತೆ ಇದ್ದು, ಹಿಂದೆ ದೇವಸ್ಥಾನ ಕೆಡವಿ ದರ್ಗಾ ನಿರ್ಮಿಸಿರೋ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದು ಮಂಗಳೂರು ತಹಶೀಲ್ದಾರ್ ಪುರಂದರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

 ಅಲ್ಲದೇ ವಿಶ್ವಹಿಂದೂಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಸದ್ಯ ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ್ ಮುಂದಾಗಿದ್ದು, ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೂ ತಹಶಿಲ್ದಾರ್ ಸೂಚನೆ ನೀಡಿದ್ದರು. ‌ಹೀಗಾಗಿ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ದರ್ಗಾ ಆಡಳಿತ ಸಮ್ಮತಿ ಸೂಚಿಸಿತ್ತು. ಇದರ ಬೆನ್ನಲ್ಲೇ ಇದೀಗ ನ್ಯಾಯಾಲಯ ತಡೆಯಾಜ್ಞೆ ನೀಡಿ ಮಸೀದಿ ಆಡಳಿತಕ್ಕೆ ಮುಂದಿನ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಗಂಜಿಮಠ ಮಳಲಿಯ ಮಸೀದಿ ಪುನರ್ ನವೀಕರಣ ಸಂದರ್ಭ ಪತ್ತೆಯಾದ ದೇವಸ್ಥಾನ ಮಾದರಿಯ ಕಟ್ಟಡದ ಸಮಗ್ರ ತನಿಖೆಗೆ ಸೂಚಿಸಿ ,ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಮಸೀದಿ ಇರುವ ಸ್ಥಳ ಸರಕಾರಿ ಜಾಗವಾಗಿದ್ದು, 2001ರಲ್ಲಿ ಮಸೀದಿ ಕಟ್ಟಲು ಮಂಜೂರಾಗಿತ್ತು. ಅನಂತರ ವಕ್ಫ್ ಬೋರ್ಡ್‌ನಲ್ಲಿ ನೋಂದಣಿ ಮಾಡಿ ಮಸೀದಿ ನಿರ್ಮಿಸಲಾಗಿದೆ. ಸದ್ಯ ದೇಗುಲದ ಕುರುಹುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನ ಪತ್ತೆ 
ದೇವಸ್ಥಾನ ಧ್ವಂಸವಾಗಿರುವ ಬಗ್ಗೆ ಅಧ್ಯಯನ ಮಾಡಬೇಕು. ಇದೇ ವಿಚಾರವಾಗಿ ಸಂಘರ್ಷಕ್ಕೆ ಕಾರಣವಾಗುವುದು ಬೇಡ. ಅಲ್ಲಿಯ ತನಕ ಮಸೀದಿ ಕಾಮಗಾರಿ ಕೆಲಸವನ್ನು ನಿಲ್ಲಿಸಬೇಕು ಎಂದು ತಹಶೀಲ್ದಾರ ಪುರಂದರ ಬಳಿ ಶರಣ್ ಪಂಪ್ವೆಲ್ ಮನವಿ ಮಾಡಿದ್ದಾರೆ. ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮ, ಗಂಜಿಮಠ ಪಂಚಾಯಿತಿಯಲ್ಲಿರುವ ಸರ್ವೇ ನಂ. 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ಕಟ್ಟಡ ನವೀಕರಣ ಸಂದರ್ಭದಲ್ಲಿ ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನ ಪತ್ತೆಯಾಗಿದೆ. ಮೇಲ್ನೋಟಕ್ಕೆ ನೋಡಿದಾಗ ಪುರಾತನ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಡ ಕಟ್ಟಿರುವುದು ಕಂಡುಬರುತ್ತದೆ.

ಪುರಾತತ್ವ ಇಲಾಖೆಗೆ ತನಿಖೆ ನಡೆಸಲು ಆದೇಶಿಸಿ
 "ಕಟ್ಟಡದ ಒಳಗೆ ಮತ್ತು ಹೊರಗಡೆ ನೋಡುವಾಗ ಪ್ರಾಚೀನ ದೇವಸ್ಥಾನದ ಕಟ್ಟಡದ ಶೈಲಿಯಲ್ಲಿ ಕಂಡು ಬರುತ್ತಿದೆ. ಆದುದರಿಂದ ಗಂಜಿಮಠ ಗ್ರಾಮ ಪಂಚಾಯತಿ ನೀಡಿದ ಕಟ್ಟಡ ಪರವಾನಿಗೆ ನಂ. 11/2021/22ರ ಪ್ರಕಾರ ನೀಡಿರುವ ಮಸೀದಿ ನವೀಕರಣದ ಅನುಮತಿಯನ್ನು ರದ್ದುಗೊಳಿಸಿ ಇದನ್ನು ಪರಿಶೀಲಿಸಿ ಪುರಾತತ್ವ ಇಲಾಖೆಗೆ ತನಿಖೆ ನಡೆಸಲು ಆದೇಶಿಸಬೇಕು ಮತ್ತು ಆ ಸ್ಥಳದಲ್ಲಿರುವ ಕಟ್ಟಡವನ್ನು ಯಥಾಸ್ಥಿತಿಯಲ್ಲಿರುವಂತೆ ಕಾಪಾಡಿಕೊಳ್ಳಲು ಕ್ರಮಕೈಗೊಳ್ಳಬೇಕೆಂದು," ಶರಣ್ ಪಂಪ್ವೆಲ್ ಜಿಲ್ಲಾಧಿಕಾರಿಗಳಿಗೆ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಮತ್ತು ತಹಶೀಲ್ದಾರಗೆ ಮನವಿ ನೀಡಿದ್ದಾರೆ.
 

click me!