ಮಾಗಿ ಚಳಿಗೆ ಗಡಗಡ ನಡುಗುತ್ತಿರುವ ಜನತೆ
ಭತ್ತದ ಒಕ್ಕಣಿಕೆ ಮತ್ತು ಕಾಫಿ ಕೊಯ್ಲಿಗೆ ಎದುರಾದ ಕಾರ್ಮಿಕರ ಕೊರತೆ
ಇಂದು ಬೆಳಗ್ಗೆ 10 ಡಿಗ್ರಿಸೆಲ್ಸಿಯಸ್ ಗೆ ಇಳಿದ ತಾಪಮಾನ
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.14): ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ತಾಪಮಾನದ ಏರಿಳಿತ ಉಂಟಾಗಿದ್ದು, ಥಂಡಿಗಾಳಿ ಬೀಸಲಾರಂಭಿಸಿದೆ.ಇದೇ ವಾತಾವರಣ ಕೆಲವು ದಿನಗಳು ಮುಂದುವರೆಯುವ ಸಾಧ್ಯತೆಗಳಿದ್ದು, ಬೆಳಿಗ್ಗೆ ಮತ್ತು ಸಂಜೆ ವೇಳೆ ಚಳಿಗೆ ಜಿಲ್ಲೆಯ ಜನರು ಗಡಗಡ ನಡುಗುತ್ತಿದ್ದಾರೆ. ಜಿಲ್ಲೆಯ ಜನರು ಮಾಗಿ ಚಳಿಗೆ ಬೆಚ್ಚನೆಯ ಉಡುಪುಗಳ ಮೊರೆಹೋಗುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲೀಗ ವಿಪರೀತ ಚಳಿ. ಮುಂಜಾನೆ ಆರಂಭ ಆಗುವ ಚಳಿಗೆ ಮನೆಯಿಂದ ಹೊರಬರಲು ಜನತೆ ಹಿಂಜರಿಯುತ್ತಿದ್ದಾರೆ. ಇನ್ನು ವಾಕಿಂಗ್, ಜಾಗಿಂಗ್ ಮಾಡೋರೆಲ್ಲಾ ಸ್ವಟರ್, ಟೋಫಿ ತೊಡಲೇ ಬೇಕಾಗಿದೆ. ವಯಸ್ಸಾದವರು ಮಾತ್ರ ವಾಕಿಂಗ್ ಗೆ ವಿದಾಯ ಹೇಳಿದ್ದಾರೆ. ಮಲೆನಾಡು ಭಾಗದಲ್ಲಿ ಸೌದೆ ಒಲೆಯ ಮುಂದೆ ಕುಳಿತುಕೊಂಡು ಬೆಂಕಿಕಾಯಿಸಿಕೊಳ್ಳುತ್ತಿದ್ದರೆ, ಇತರೆಡೆ ಗ್ರಾಮದ ಹೊರಗೆ ಬೆಂಕಿಹಾಕಿಕೊಂಡು ಮೈ, ಕೈ ಬೆಚ್ಚಗಿಟ್ಟುಕೊಳ್ಳಲು ಯುವಕರು ಮುಂದಾಗುತ್ತಿದ್ದಾರೆ.
ಮಂಡ್ಯದಲ್ಲಿ 9.6 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲು: 2011ರಲ್ಲಿ ದಾಖಲಾಗಿದ್ದಕ್ಕಿಂತ ಕಡಿಮೆ
ತಾಪಮಾನ 10 ಡಿಗ್ರಿಸೆಲ್ಸಿಯಸ್ ಗೆ ಇಳಿಕೆ: ಇಂದು ಮುಂಜಾನೆ ತಾಪಮಾನ 10 ಡಿಗ್ರಿಸೆಲ್ಸಿಯಸ್ ಗೆ ಇಳಿದಿತ್ತು. ಬೆಳಿಗ್ಗೆ 11ಕ್ಕೆ ಏರಿಕೆಯಾಯಿತು. ಬೆಳಿಗ್ಗೆ 10 ಗಂಟೆಯಾದರೂ ಚಳಿ ಮುಂದುವರೆಯುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಮಲೆನಾಡು ಭಾಗದ ಕೆಲವೆಡೆ ಭತ್ತದ ಒಕ್ಕಣೆ ಕಾರ್ಯ ಆರಂಭವಾಗಿದ್ದು, ಭತ್ತದ ಹೊಟ್ಟಿಗೆ ಬೆಂಕಿಹಾಕಿ ಚಳಿಕಾಯಿಸಿಕೊಂಡು ಒಕ್ಕಣೆ ಕಾರ್ಯ ಮುಂದುವರೆಸುತ್ತಿದ್ದಾರೆ. ಬೆಳಿಗ್ಗಿನ ಜಾವ ಎದ್ದು ಭತ್ತದ ರಾಶಿ ಕಾರ್ಯ ಮಾಡಲು ಸಾಧ್ಯವಾಗದೆ ರಾತ್ರಿಯಲ್ಲೆ ರಾಶಿ ಕೆಲಸ ಪೂರ್ಣಗೊಳಿಸುತ್ತಿದ್ದು, ಬೆಳಿಗ್ಗೆ 9 ಗಂಟೆ ಮೇಲೆ ಭತ್ತವನ್ನು ಕಣದಿಂದ ಮನೆಗೆ ತುಂಬಿಕೊಂಡು ಬರುತ್ತಿದ್ದಾರೆ. ಮಲೆನಾಡಿನ ಚಿಕ್ಕಮಗಳೂರಲ್ಲಿ ಜನವರಿ ತಿಂಗಳು ಬಂತೆಂದರೆ ಸಾಕು ವಿಪರೀತ ಚಳಿ. ಹೆಚ್ಚಾಗಿ ಕಾಫಿತೋಟವನ್ನೇ ಹೊಂದಿರೋ ಕಾಫಿನಾಡಲ್ಲಿ ಈ ಬಾರಿಯಂತೂ ವಿಪರೀತ ಚಳಿಯಿರುವುದರಿಂದ ಜನರಿಗೆ ಸ್ವಟರ್, ಜರ್ಕಿನ್ ಇಲ್ಲದೇ ಮನೆಯಿಂದ ಹೊರಬರಲು ಆಗುತ್ತಿಲ್ಲ.
ಶಿವರಾತ್ರಿಯವರೆಗೂ ಚಳಿ : ಕಾಫಿಯನ್ನು ಹೆಚ್ಚಾಗಿ ಬೆಳೆಯೋ ಚಿಕ್ಕಮಗಳೂರಿನ ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಮುಂತಾದ ಕಡೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಸಾಮಾನ್ಯವಾಗಿ ಮುಂಜಾನೆ 5 ಗಂಟೆಯಿಂದಲೇ ಜಾಗಿಂಗ್, ವಾಕಿಂಗ್ ತೆರಳುತ್ತಿದ್ದವರೆಲ್ಲರೂ ಸೂರ್ಯ ಮೂಡಿದ ನಂತರವೇ ವಾಕಿಂಗ್ಗೆ ತೆರಳುತ್ತಿದ್ದಾರೆ. ಇನ್ನು ವಯಸ್ಸಾದವರು ಮಾತ್ರ ವಾಕಿಂಗ್, ಜಾಗಿಂಗ್ ಗೆ ತಿಲಾಂಜಲಿ ಹೇಳಲೇ ಬೇಕಾಗಿದೆ. ಮನೆಯಲ್ಲಿದ್ದರೂ ಕೂಡ ದಪ್ಪನೆಯ ಬೆಡ್ಶೀಟ್ ಹೊದ್ದು ಮಲಗಲೇ ಬೇಕು. ಚಿಕ್ಕಮಗಳೂರಿನ ಮಟ್ಟಿಗೆ ಸ್ವಟರ್, ಗ್ಲೌಸ್, ಕ್ಯಾಪ್ನ್ನು ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ತೊಡಲೇಬೇಕಾಗಿದೆ.
Womens Health: ಚಳಿಗಾಲದಲ್ಲಿ ಪೀರಿಯೆಡ್ಸ್ ಲೇಟ್, ಯಾಕಿಷ್ಟು ಯಾತನೆ?
ಕಾಫಿ ಕೊಯ್ಲಿಗೆ ಸಮಸ್ಯೆ: ಇನ್ನು ಚಳಿಯನ್ನು ನಿವಾರಿಸಿಕೊಳ್ಳೋಕೆ ರಸ್ತೆಯ ಬದಿಯಲ್ಲಿ ಬೆಂಕಿಯನ್ನು ಹಾಕಿಕೊಳ್ಳುತ್ತಿರುವುದು ಎಲ್ಲೆಡೆಯಲ್ಲಿಯೂ ಕಂಡುಬರುತ್ತಿದೆ. ಇನ್ನು ಮನೆಯಲ್ಲಿದ್ದರೂ ಕೂಡ ಸ್ವಟರ್ ತೊಟ್ಟುಕೊಂಡೇ ಇರಬೇಕು. ಚಿಕ್ಕಮಗಳೂರಲ್ಲಿ ಸಾಮಾನ್ಯವಾಗಿ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಆರಂಭವಾಗೋ ಚಳಿ ಶಿವರಾತ್ರಿಯವರೆಗೂ ಇರುತ್ತದೆ. ಇದರಲ್ಲಿ ಜನವರಿ ತಿಂಗಳಿನಲ್ಲಿಯೇ ಚಳಿಯ ಪ್ರಮಾಣದಲ್ಲಿ ಹೆಚ್ಚಿರುತ್ತದೆ. ಒಟ್ಟಾರೆಯಾಗಿ ಕಾಫಿನಾಡಿನಲ್ಲಿ ತಾಪಮಾನದ ಏರಿಳಿತ ಉಂಟಾಗುತ್ತಿರುವುದರಿಂದ ಕಾಫಿ ಕೊಯ್ಲಿಗೆ ಬೇಗನೆ ತೆರಳುತ್ತಿದ್ದ ಕಾರ್ಮಿಕರು ಕಳೆದೆರಡು ದಿನಗಳಿಂದ ಬಿಸಿಲು ಬಿದ್ದ ಮೇಲೆ ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದ್ದಾರೆ.