ಹುಬ್ಬಳ್ಳಿ-ಧಾರವಾಡಕ್ಕೆ ರಾಷ್ಟ್ರೀಯ ವಿಧಿ-ವಿಜ್ಞಾನ ವಿಶ್ವವಿದ್ಯಾಲಯ: ಕೇಂದ್ರ ಸಚಿವ ಜೋಶಿ

By Kannadaprabha NewsFirst Published Jan 14, 2023, 1:24 PM IST
Highlights

ಕೇಂದ್ರ ಗೃಹ ಇಲಾಖೆಯ ಮಂಜೂರಾತಿ ಪ್ರತಿ ರಾಜ್ಯ ಸರ್ಕಾರಕ್ಕೆ ಬಂದಿದೆ. ಅದರ ಪ್ರತಿ ತಮಗೂ ತಲುಪಿದೆ. ಕಳೆದ 2-3 ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ ಈ ಕುರಿತು ವಿವರವಾಗಿ ಪತ್ರ ಬರೆದು ಈ ಭಾಗದಲ್ಲಿ ಈ ವಿಶ್ವವಿದ್ಯಾಲಯ ಕ್ಯಾಂಪಸ್‌ ಸ್ಥಾಪನೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಲಾಗಿತ್ತು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

ಹುಬ್ಬಳ್ಳಿ(ಜ.14): ಈ ಭಾಗಕ್ಕೆ ಬಹುದಿನಗಳ ಅತ್ಯಾವಶ್ಯಕತೆಯಾಗಿದ್ದ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರದ ವಿಶ್ವವಿದ್ಯಾಲಯದ ಕ್ಯಾಂಪಸ್‌ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಇದರಿಂದಾಗಿ ದಕ್ಷಿಣ ಭಾರತದ ಪ್ರಥಮ ವಿಧಿವಿಜ್ಞಾನ ವಿವಿ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪನೆಯಾಗುವುದು ಖಚಿತವಾದಂತಾಗಿದೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಕೇಂದ್ರ ಗೃಹ ಇಲಾಖೆಯ ಮಂಜೂರಾತಿ ಪ್ರತಿ ರಾಜ್ಯ ಸರ್ಕಾರಕ್ಕೆ ಬಂದಿದೆ. ಅದರ ಪ್ರತಿ ತಮಗೂ ತಲುಪಿದೆ. ಕಳೆದ 2-3 ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ ಈ ಕುರಿತು ವಿವರವಾಗಿ ಪತ್ರ ಬರೆದು ಈ ಭಾಗದಲ್ಲಿ ಈ ವಿಶ್ವವಿದ್ಯಾಲಯ ಕ್ಯಾಂಪಸ್‌ ಸ್ಥಾಪನೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಲಾಗಿತ್ತು. ನಂತರ ನಿರಂತರವಾಗಿ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದು ಚರ್ಚೆ ನಡೆಸಿದ್ದೆ. ಇದರ ಪರಿಣಾಮವಾಗಿ ಮಹಾನಗರಕ್ಕೆ ಇಂತಹ ಉನ್ನತ ಶೈಕ್ಷಣಿಕ ಸಂಸ್ಥೆ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.

Union Budget Session: ಜನವರಿ 31 ರಿಂದ 66 ದಿನಗಳ ಸಂಸತ್ ಬಜೆಟ್ ಅಧಿವೇಶನ: ಪ್ರಲ್ಹಾದ್ ಜೋಶಿ

ಇಡೀ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅದರಲ್ಲೂ ಹುಬ್ಬಳ್ಳಿ- ಧಾರವಾಡ ನಗರಕ್ಕೆ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿರುವುದು ಸಂತಸದ ಸಂಗತಿ ಎಂದು ತಿಳಿಸಿದ್ದಾರೆ.
ಸಂಸ್ಥೆಯ ಸ್ಥಾಪನೆಯಿಂದ ಅಪರಾಧಗಳ ತನಿಖಾ ವಿಷಯದಲ್ಲಿ ತನಿಖಾ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಸೌಲಭ್ಯ ದೊರೆಯಲಿದ್ದು, ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ತನಿಖಾ ಪ್ರಕ್ರಿಯೆಗೆ ಚುರುಕು ದೊರೆಯಲಿದೆ. ಡಿಎನ್‌ಎ ತಾಂತ್ರಿಕತೆ ಹಾಗೂ ಸೈಬರ್‌ ಅಪರಾಧಗಳ ತನಿಖೆಯಲ್ಲಾಗುವ ವಿಳಂಬ ತಪ್ಪಿಸಬಹುದಾಗಿದೆ. ಅಲ್ಲದೇ, ಈ ಭಾಗದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಅಪರಾಧ ಶಾಸ್ತ್ರ ಹಾಗೂ ಮಾನವ ಶಾಸ್ತ್ರ, ಲೈಫ್‌ಸೈನ್ಸ್‌, ಜಿನೆಟಿಕ್ಸ್‌, ಬಯೋಟೆಕ್ನಾಲಜಿ, ಪ್ರಾಣಿಶಾಸ್ತ್ರ ಸೇರಿದಂತೆ ಮತ್ತಿತರ ಶಾಸ್ತ್ರ ಆಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಹಾಗೂ ಸಂಶೋಧನೆಗೆ ಬಹಳಷ್ಟುಅನುಕೂಲವಾಗಲಿದೆ. ಎಲ್ಲ ಆಧುನಿಕ ಮತ್ತು ಉನ್ನತೀಕರಿಸಿದ ಸೌಲಭ್ಯಗಳೊಂದಿಗೆ ಇದನ್ನು ಪ್ರಾರಂಭಿಸಲಾಗುವುದು, ಇದರಿಂದ ವಿದ್ಯಾರ್ಥಿ ಸಮುದಾಯಕ್ಕೆ ವರದಾನವಾಗಲಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ.

ಅಪರಾಧಿಗಳನ್ನು ಕಂಡು ಹಿಡಿಯಲು ಅವಶ್ಯವಾಗಿದ್ದ ವಿಧಿವಿಜ್ಞಾನ ಪ್ರಕ್ರಿಯೆಗಳಿಗಾಗಿ ಬೇರೆ ರಾಜ್ಯಗಳ ಸಂಸ್ಥೆಗಳನ್ನು ಅವಲಂಬಿಸುವುದನ್ನು ತಪ್ಪಿಸಲು ರಾಜ್ಯಕ್ಕೆ ಅನುಕೂಲವಾಗಲಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ಧನ್ಯವಾದಗಳನ್ನು ಜೋಶಿ ತಿಳಿಸಿದ್ದಾರೆ.

click me!