ನ್ಯಾಯಾಲಯಕ್ಕೆ ನೀಡಿರುವ ವಾಗ್ದಾನದಂತೆ ಇಶಾ ಯೋಗ ಕೇಂದ್ರವು ಕಾರ್ಯಕ್ರಮಕ್ಕೆ ಅಗತ್ಯ ಇರುವ ವ್ಯವಸ್ಥೆ ಮಾಡಬೇಕು. ಅದನ್ನು ಹೊರತುಪಡಿಸಿ ಯಾವುದೇ ತೆರನಾದ ಅರಣ್ಯ ಹಾನಿ ಅಥವಾ ನಿರ್ಮಾಣ ಕಾಮಗಾರಿ ನಡೆಸಬಾರದು ಎಂದು ತಿಳಿಸಿದ ನ್ಯಾಯಪೀಠ.
ಬೆಂಗಳೂರು(ಜ.14): ಚಿಕ್ಕಬಳ್ಳಾಪುರದ ಆವಲಗುರ್ಕಿ ಗ್ರಾಮ ಹಾಗೂ ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಈಶ ಯೋಗ ಕೇಂದ್ರವು ಜ.15ರಂದು ಹಮ್ಮಿಕೊಂಡಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಪೂರ್ವನಿಗದಿಯಂತೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಗಿರಿಧಾಮ ಹಾಗೂ ವೃಕ್ಷ ಸಂಪತ್ತಿನಿಂದ ಕೂಡಿರುವ ಆವಲಗುರ್ಕಿ ಗ್ರಾಮದ ವ್ಯಾಪ್ತಿಯಲ್ಲಿ ಆದಿಯೋಗಿ ಪ್ರತಿಮೆ ಸ್ಥಾಪನೆ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್.ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜ.11ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರತಿಮೆ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಇಶಾ ಯೋಗ ಕೇಂದ್ರಕ್ಕೆ ನಿರ್ದೇಶಿಸಿತ್ತು.
ಇದರಿಂದ ಹೈಕೋರ್ಟ್ ಮೊರೆ ಹೋಗಿದ್ದ ಈಶ ಕೇಂದ್ರ, ‘ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಜ.15ರಂದು ಹಮ್ಮಿಕೊಳ್ಳಲಾಗಿದೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಯಥಾಸ್ಥಿತಿ ಆದೇಶದಿಂದ ಪೂರ್ವಯೋಜಿತವಾದ ಈ ಕಾರ್ಯಕ್ರಮಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಯಥಾಸ್ಥಿತಿ ಆದೇಶವನ್ನು ತೆರವುಗೊಳಿಸಬೇಕು’ ಎಂದು ಕೋರಿತ್ತು.
ಶುಕ್ರವಾರ ಈ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ‘ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ಆಹ್ವಾನ ಪತ್ರಿಕೆ ತಿಳಿಸುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎಂಬುದು ಈಶ ಕೇಂದ್ರದ ಕಳಕಳಿಯಾಗಿದೆ. ಆದ್ದರಿಂದ ಪೂರ್ವನಿಗದಿಯಂತೆ ಕಾರ್ಯಕ್ರಮ ನಡೆಯುವುದಕ್ಕೆ ನ್ಯಾಯಾಲಯ ಅನುಮತಿಸುತ್ತದೆ. ಜ.11ರ ಯಥಾಸ್ಥಿತಿ ಕಾಪಾಡುವ ಆದೇಶವು ಕಾರ್ಯಕ್ರಮ ನಡೆಸುವುದಕ್ಕೆ ಅನ್ವಯಿಸುವುದಿಲ್ಲ. ಉಳಿದಂತೆ (ಯಥಾಸ್ಥಿತಿಗೆ ಸೂಚಿಸಿದ್ದ) ಮಧ್ಯಂತರ ಆದೇಶ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿತು.
‘ಅಲ್ಲದೆ, ನ್ಯಾಯಾಲಯಕ್ಕೆ ನೀಡಿರುವ ವಾಗ್ದಾನದಂತೆ ಇಶಾ ಯೋಗ ಕೇಂದ್ರವು ಕಾರ್ಯಕ್ರಮಕ್ಕೆ ಅಗತ್ಯ ಇರುವ ವ್ಯವಸ್ಥೆ ಮಾಡಬೇಕು. ಅದನ್ನು ಹೊರತುಪಡಿಸಿ ಯಾವುದೇ ತೆರನಾದ ಅರಣ್ಯ ಹಾನಿ ಅಥವಾ ನಿರ್ಮಾಣ ಕಾಮಗಾರಿ ನಡೆಸಬಾರದು’ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.
ಚಿಕ್ಕಬಳ್ಳಾಪುರ: ಆದಿಯೋಗಿ ಪ್ರತಿಮೆ ಸ್ಥಳ, ಯಥಾಸ್ಥಿತಿಗೆ ಹೈಕೋರ್ಟ್ ಆದೇಶ
ಅರ್ಜಿದಾರರ ಆಕ್ಷೇಪವೇನು?:
ಆವಲಗುರ್ಕಿ ಸುತ್ತಮುತ್ತಲಿನ ನೂರಾರು ಎಕರೆ ಜಮೀನನ್ನು ಸರ್ಕಾರವು ಇಶಾ ಯೋಗ ಕೇಂದ್ರಕ್ಕೆ ಮಂಜೂರು ಮಾಡಿದೆ. ಕೇಂದ್ರವು ಇಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ. ಈ ಜಾಗದ ಸಮೀಪವೇ ಐತಿಹಾಸಿಕ ನಂದಿಬೆಟ್ಟ, ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿ ಹಾಗೂ ಸ್ಕಂದಗಿರಿ ಬೆಟ್ಟಗಳಿವೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಅಮೂಲ್ಯ ವೃಕ್ಷ ಸಂಪತ್ತು ಇದೆ. ಯೋಗ ಕೇಂದ್ರದ ವಾಣಿಜ್ಯ ಚುಟುವಟಿಕೆ ಆರಂಭಿಸಿದರೆ, ಆವಲಗುರ್ಕಿ ಗ್ರಾಮ ವ್ಯಾಪ್ತಿಯ ಪರಿಸರ ವ್ಯವಸ್ಥೆ, ಸ್ವಾಭಾವಿಕವಾಗಿ ಮಳೆ ನೀರು ಹರಿಯುವ ಪ್ರದೇಶ, ಜಲಮೂಲಗಳ ಮೇಲೆ ಹಾನಿಯುಂಟಾಗಲಿದೆ. ಈ ಪ್ರದೇಶದ ಜನ ಜೀವನ, ಪರಿಸರ, ಪ್ರಾಣಿ-ಪಕ್ಷಿಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಹಾಗಾಗಿ, ಕೇಂದ್ರದ ಯಾವುದೇ ಚಟುವಟಿಕೆಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.