* ಕಲ್ಯಾಣ ಕರ್ನಾಟಕ ಭಾಗದ ರೋಗಿಗಳಿಗೆ ಸಂಕಷ್ಟ
* ಚಿಕಿತ್ಸೆಗೆ ಅನುಮತಿ ಇದ್ದವರಿಗಷ್ಟೇ ಪ್ರವೇಶ
* ರಾಜ್ಯ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ
ಅಪ್ಪಾರಾವ್ ಸೌದಿ
ಬೀದರ್(ಮೇ.15): ನಿತ್ಯ ನೂರಾರು ರೋಗಿಗಳಿಗೆ ಆಸರೆಯಾಗಿ ಜೀವ ಉಳಿಸಿದ್ದ ಅತ್ಯಾಧುನಿಕ ಸೌಲಭ್ಯಗಳುಳ್ಳ ನೆರೆಯ ತೆಲಂಗಾಣದ ಹೈದರಾಬಾದ್ ಆಸ್ಪತ್ರೆಗಳಿಗೆ ಇನ್ನು ಕರ್ನಾಟಕದ ರೋಗಿಗಳು ಕಾಲಿಡುವುದು ಕಷ್ಟ ಸಾಧ್ಯ. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ತೆಲಂಗಾಣ ಸರ್ಕಾರದಿಂದ ಅನುಮತಿ ಪಡೆದವರಿಗಷ್ಟೇ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಂಥದ್ದೇ ತುರ್ತು ಚಿಕಿತ್ಸೆಯಿದ್ದರೂ ತೆಲಂಗಾಣದ ಪ್ರವೇಶ ಬಹು ಕಠಿಣವಾಗಿದೆ. ಇಂಥದ್ದೊಂದು ಕಟ್ಟುನಿಟ್ಟಾದ ಆದೇಶವನ್ನು ತೆಲಂಗಾಣ ಸರ್ಕಾರ ಮೇ 11ರಿಂದಲೇ ಜಾರಿಗೊಳಿಸಿದ್ದು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಸಂಕಷ್ಟ ಎದುರಾಗಿದೆ.
undefined
ಕಟ್ಟುನಿಟ್ಟಿನ ಕ್ರಮ:
ಸರ್ಕಾರದ ಅನುಮತಿ ಇಲ್ಲದಿದ್ದರೂ ತೆಲಂಗಾಣದ ಕೆಲವು ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಾಹಿತಿ ಸಿಕ್ಕ ಬಳಿಕ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಇಂತಹ ಆಸ್ಪತ್ರೆಗಳಿಗೆ ಹೊರ ರಾಜ್ಯದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಇದರಿಂದ ಸೋಂಕು ಹಬ್ಬುವ ಸಾಧ್ಯತೆ ದಟ್ಟವಾಗಿದೆ. ಜತೆಗೆ ರೋಗಿಯ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ.
ಬೀದರ್‌ನಲ್ಲಿ ವೈದ್ಯರಿಂದಲೇ ರೆಮ್‌ಡಿಸಿವಿರ್ ದುಪ್ಪಟ್ಟು ದರಕ್ಕೆ ಮಾರಾಟ?
ಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ:
ತುರ್ತು ಸಂದರ್ಭದಲ್ಲಿ ಅನುಮತಿಗೆ ಕಾಯುತ್ತಾ ಕುಳಿತರೆ ರೋಗಿಗಳ ಜೀವಕ್ಕೆ ಅಪಾಯ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ಪ್ರಧಾನ ಕಾರ್ಯದರ್ಶಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕೆಂದು ಕಲ್ಯಾಣ ಕರ್ನಾಟಕದ ಮಂದಿ ಆಗ್ರಹಿಸಿದ್ದಾರೆ.
ವಾಪಸ್ಸಾದ ಅರಣ್ಯಾಧಿಕಾರಿ
ಅನುಮತಿ ಇಲ್ಲದ ಕಾರಣ ತುರ್ತು ಚಿಕಿತ್ಸೆಗೆಂದು ಹೈದರಾಬಾದ್‌ಗೆ ತೆರಳುತ್ತಿದ್ದ ಬೀದರ್ ಜಿಲ್ಲೆಯ ಅರಣ್ಯಾಧಿಕಾರಿಯೊಬ್ಬರಿದ್ದ ಆ್ಯಂಬುಲೆನ್ಸ್ ಅನ್ನು ತೆಲಂಗಾಣದ ಗಡಿಯಲ್ಲಿ ತಡೆದಿರುವ ಘಟನೆ ಶುಕ್ರವಾರ ನಡೆದಿದೆ. ಕೊನೆಗೆ ಅಧಿಕಾರಿಯನ್ನು ಬ್ರಿಮ್ಸ್‌ಗೆ ದಾಖಲಿಸಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona