*ಸೋಂಕಿತರಿಗೆ ನೀಡುವ ಅನ್ನದಾಸೋಹ ಪರಿಶೀಲಿಸಿದ ಡಿಸಿಎಂ ಕಾರಜೋಳ
* ಕೊರೋನಾ ಸೋಂಕಿತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡುತ್ತಿರುವ ಮುಧೋಳದ ಜನಹಿತ ಟ್ರಸ್ಟ್
* ಜನಹಿತ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಗೋವಿಂದ ಕಾರಜೋಳ
ಮುಧೋಳ(ಮೇ.15): ಮುಧೋಳದ ಜನಹಿತ ಟ್ರಸ್ಟ್ ಸದಸ್ಯರು ಕೊರೋನಾ ಸೋಂಕಿತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡುತ್ತಿರುವುದನ್ನು ಡಿಸಿಎಂ ಗೋವಿಂದ ಕಾರಜೋಳ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಸ್ಥಳೀಯ ಕೋಲ್ಹಾರ ಯಾತ್ರಿ ನಿವಾಸದಲ್ಲಿ ಜನಹಿತ ಟ್ರಸ್ಟ್‌ನವರು ಆರಂಭಿಸಿರುವ ಅನ್ನದಾಸೋಹ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಹಿತ ಟ್ರಸ್ಟ್ ಸದಸ್ಯರು ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಕೊರೋನಾ ಸೋಂಕಿತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡುತ್ತಿರುವುದು ನಿಜವಾಗಲು ಮೆಚ್ಚುವಂತಹ ಕೆಲಸವಾಗಿದೆ. ಕೊರೋನಾ ಸೋಂಕಿತರು ಯಾವುದೇ ಕಾರಣಕ್ಕೂ ಭಯ ಪಡಬಾರದು, ಧೈರ್ಯದಿಂದ ಇರಬೇಕೆಂದರು.
ಕಳೆದ 14 ದಿನಗಳಿಂದ ಮುಧೋಳದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ಕೊರೋನಾ ಸೋಂಕಿತರ ಹಸಿವಿಗೆ ಮತ್ತು ಆರೋಗ್ಯ ಚೇತರಿಕೆಗೆ ಬಿಸಿ ಬಿಸಿಯಾದ, ರುಚಿಕಟ್ಟಾದ, ಪೌಷ್ಟಿಕಾಂಶ ಆಹಾರ ವಿತರಣೆ ಕಾರ್ಯರಂಭ ಮಾಡಿರುವುದು ಮೆಚ್ಚುವಂತಹದು. ಆರಂಭದಲ್ಲಿ ಕೇವಲ 25 ಜನ ಸೋಂಕಿತರಿಗೆ ಆಹಾರದ ಪೊಟ್ಟಣ ನೀಡಲಾಗುತ್ತಿತ್ತು. ಈಗ 350 ರಿಂದ 400 ಜನ ಸೋಂಕಿತರಿಗೆ ಆಹಾರದ ಪೊಟ್ಟಣ ನೀಡಲಾಗುತ್ತಿದೆ ಎಂದು ಜನಹಿತ ಟ್ರಸ್ಟ್ ಸದಸ್ಯರು ಡಿಸಿಎಂ ಅವರ ಗಮನಕ್ಕೆ ತಂದರು.
ಗುಳೇದಗುಡ್ಡ: ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗರ್ಭಿಣಿಯರಿಗೆ ಕೊರೋನಾ ತಂದ ಸಂಕಷ್ಟ
ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದಲ್ಲಿ ಕೋವಿಡ್ ಕಾರಣದಿಂದಾಗಿ ಇಡೀ ಗಲ್ಲಿಯನ್ನೇ ಲಾಕ್‌ಡೌನ್ ಮಾಡಲಾಗಿದೆ. ಇದನ್ನು ಗಮನಿಸಿದ ಜನಹಿತ ಟ್ರಸ್ಟ್ ಸದಸ್ಯರು ಅಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿ ಯಾರಿಗೆ ಪಾಜಿಟಿವ್ ಬಂದಿದೆ ಅಂತಹವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿರುವುದನ್ನು ಡಿಸಿಎಂ ಅವರಿಗೆ ಸಂಘಟಕರು ತಿಳಿಸಿದರು.
ವಾಕ್ ಇನ್ ಇಂಟರ್‌ವ್ಯೂವ್ ಮೂಲಕ ಡಾಕ್ಟರ್, ನರ್ಸ್ ಮತ್ತು ಆಶಾ ಕಾರ್ಯಕರ್ತೆಯರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರ, ನರ್ಸ್‌ಗಳ ಮತ್ತು ಆಶಾ ಕಾರ್ಯಕರ್ತೆಯರ ತೀರಾ ಅವಶ್ಯಕತೆ ಇರುವುದನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೇಮಕಗೊಂಡ ವೈದ್ಯರಿಗೆ, ನರ್ಸಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ನಿಯಮಾವಳಿ ಪ್ರಕಾರ ಗೌರವ ಸಂಭಾವನೆ ನೀಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona