* ಬಂಡೇಬಸಾಪುರದಲ್ಲಿ 44 ಸೋಂಕಿತರು ಪತ್ತೆ
* ಮನೆಯಿಂದ ಆಚೆ ಬರುತ್ತಿರುವ ಸೋಂಕಿತರು
* ತಾಂಡಾಕ್ಕೆ ಪ್ರತ್ಯೇಕವಾಗಿ ಕೋವಿಡ್ ವಾರ್ಡ್ ತೆರೆಯಲು ಸಾಧ್ಯವಿಲ್ಲ
ಭೀಮಣ್ಣ ಗಜಾಪುರ
ಕೂಡ್ಲಿಗಿ(ಮೇ.15): ಒಂದೆಡೆ ಉಲ್ಬಣಗೊಂಡ ಸೋಂಕು. ಮತ್ತೊಂದೆಡೆ ಅದೇ ಸೋಂಕಿತರು ಸರತಿಯಲ್ಲಿ ನಿಂತು ಕುಡಿಯುವ ನೀರು ಸಂಗ್ರಹಿಸಬೇಕಾದ ದುಸ್ಥಿತಿ. ಇದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಈ ತಾಂಡಾ ಜನತೆಯಲ್ಲಿ ಮನೆ ಮಾಡಿದೆ.
undefined
ಇದು ತಾಲೂಕಿನ ಬಂಡೇಬಸಾಪುರ ತಾಂಡಾದಲ್ಲಿ ಕಂಡು ಬರುತ್ತಿರುವ ದೃಶ್ಯ. ತಾಂಡಾದಲ್ಲಿ 4500ಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಶುಕ್ರವಾರದ ವರೆಗೆ 44 ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ಇಬ್ಬರು ಮೃತರಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಪ್ರತಿ ಮನೆಗೂ ನಳದ ಸಂಪರ್ಕವಿಲ್ಲದೆ ಬೀದಿ ನಳದಲ್ಲಿ ನೀರು ಸಂಗ್ರಹಿಸಬೇಕು. ಸೋಂಕಿತರು ಹಾಗೂ ಅವರ ಸಂಪರ್ಕಿತರು ಸಹ ಮನೆಯಿಂದ ಆಚೆ ಬಂದು ನೀರಿಡಿಯಲು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಉಳಿದವರು ನಳದತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಸೋಂಕಿತರು ಮನೆಯಿಂದ ಆಚೆ ಬರದಂತೆ ನೋಡಿಕೊಳ್ಳಲು ಯಾವ ಅಧಿಕಾರಿಯನ್ನು ನೇಮಿಸಿಲ್ಲ. ಸೋಂಕು ಹೆಚ್ಚಾಗುವ ಆತಂಕ ತಾಂಡಾ ಜನತೆಯಲ್ಲಿ ಮೂಡಿದೆ.
ಸೋಂಕಿತರನ್ನು ಸ್ಥಳಾಂತರಿಸಿ:
ಸೋಂಕಿತರು ಹಾಗೂ ಅವರ ಸಂಪರ್ಕಿತರು ಬೇಕಾಬಿಟ್ಟಿಯಾಗಿ ಮನೆಯಿಂದ ಆಚೆ ಬರುತ್ತಿದ್ದಾರೆ. ಇದರಿಂದ ಭಯಗೊಂಡಿರುವ ತಾಂಡಾ ಜನತೆ ಸೋಂಕಿತರನ್ನು ಹೋಂ ಐಸೋಲೇಷನ್‌ನಲ್ಲಿ ಇರಿಸದೆ ಚೌಡಮ್ಮ ದೇವಸ್ಥಾನದ ಸಮೀಪದ ಸಮುದಾಯ ಭವನಕ್ಕೆ ಸ್ಥಳಾಂತರಿಸಿ, ಅಲ್ಲಿ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
ವೈರಸ್ ರಣಕೇಕೆ: ಮದುವೆಗೆ ಕೊಟ್ಟ ಪರವಾನಗಿ ರದ್ದು
ಇಬ್ಬರ ಸಾವು:
ತಾಂಡಾದಲ್ಲಿ ಈ ವರೆಗೂ ಇಬ್ಬರು ಕೊರೋನಾಕ್ಕೆ ಬಲಿಯಾದರೆ, ಇಬ್ಬರನ್ನು ಕೂಡ್ಲಗಿ ಹಾಗೂ ಹೊಸಪೇಟೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 40ಕ್ಕೂ ಹೆಚ್ಚು ಜನರು ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಹೀಗಾಗಿ ತಾಂಡಾ ಜನತೆ ಭಯದಲ್ಲಿ ಬದುಕು ಸಾಗಿಸುವಂತೆ ಆಗಿದೆ.
ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಿರುವುದು ಗ್ರಾಪಂ ಅಲ್ಲ. ಸ್ಥಳೀಯರೇ ರಾಸಾಯನಿಕ ದ್ರಾವಣ ಹಾಗೂ ಸ್ಯಾನಿಟೈಸ್ ಮಾಡಿದ್ದಾರೆ. ಪಿಡಿಒ ಮಂಗಳಗೌರಿ ಅವರು ಕೇವಲ ಕೋವಿಡ್ ಬ್ಯಾನರ್ ಕಟ್ಟಿ ಹೋಗಿದ್ದಾರೆ. ಆರೋಗ್ಯ ಇಲಾಖೆ ಸೋಂಕಿತರಿಗೆ ಮಾತ್ರೆ ನೀಡಿ ಹೋಗಿದೆ. ಸೋಂಕು ನಿಯಂತ್ರಿಸಲು ಸ್ಥಳೀಯ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ಲಕ್ಷ್ಮಪತಿ ಪಾಲ್ತಿ ತಿಳಿಸಿದ್ದಾರೆ.
ತಾಂಡಾದಲ್ಲಿ ವಾರಕ್ಕೊಮ್ಮೆ ಸ್ಯಾನಿಟೈಸ್ ಹಾಗೂ ದ್ರಾವಣ ಸಿಂಪಡಣೆ ಮಾಡುತ್ತಿದ್ದೇವೆ. ಸೋಂಕಿತರಿಗೆ ಪ್ರತ್ಯೇಕ ಬೆಡ್‌ವ್ಯವಸ್ಥೆ ಕಲ್ಪಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಿವಪುರ ಗ್ರಾಪಂ ಪಿಡಿಒ ಮಂಗಳಗೌರಿ ಹೇಳಿದ್ದಾರೆ.
ಬಂಡೇಬಸಾಪುರ ತಾಂಡಾಕ್ಕೆ ಪ್ರತ್ಯೇಕವಾಗಿ ಕೋವಿಡ್ ವಾರ್ಡ್ ತೆರೆಯಲು ಸಾಧ್ಯವಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ ಇದೆ. ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರು ಮನೆಯಿಂದ ಆಚೆ ಬರದಂತೆ ಕ್ರಮಕೈಗೊಳ್ಳಲಾಗಿದೆ. ಈ ಕುರಿತು ಸ್ಥಳೀಯ ಆಡಳಿತಕ್ಕೂ ಸೂಚಿಸಲಾಗಿದೆ ಎಂದು ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ತಿಳಿಸಿದ್ದಾರೆ.
ಸೋಂಕಿತರು ಹೊರಬರಲು ಸಾಧ್ಯವಿಲ್ಲ. ಒಂದು ವೇಳೆ ತಾಂಡಾ ಜನತೆಯೇ ಮಾಹಿತಿ ಕೊಡುತ್ತಾರೆ. ಸೋಂಕಿತರ ಮನೆಯವರು ನೀರಿಡಿಯಲು ಬರುತ್ತಿರಬಹುದು. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಷಣ್ಮುಖ ನಾಯ್ಕ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona