* ರೆಬೆಲ್ ರಾಜೂಗೌಡರಿಗಿಲ್ಲ ‘ಅದೃಷ್ಟದ ಮಂತ್ರಿಗಿರಿ’
* ಸಿಎಂ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಿಗದ ಸ್ಥಾನ
* ಕಲ್ಯಾಣ ಕರ್ನಾಟಕದ ಭಾಗಕ್ಕೆ ಅನ್ಯಾಯ ಪ್ರಶ್ನಿಸಿದ್ದೇ ಮುಳುವಾಯ್ತೇ?
ಯಾದಗಿರಿ(ಆ.05): ಭಿಕ್ಷೆ ಬೇಡಿ ಮಂತ್ರಿ ಆಗುವಂತಹ ಪರಿಸ್ಥಿತಿ ನನಗೆ ಬಂದಿಲ್ಲ, ಬಕೆಟ್ ಹಿಡಿದು ಮಂತ್ರಿಯಾಗೋಲ್ಲ. ಅಲ್ಲದೆ, ನಾನು ಯಾವುದೇ ಭ್ರಷ್ಟಾಚಾರದಲ್ಲಿಯೂ ಇಲ್ಲ, ಸೀಡಿಯೂ ಇಲ್ಲ ಅನ್ನೋ ಮೂಲಕ ಸಚಿವ ಸಂಪುಟ ಸ್ಥಾನ ವಂಚಿತ, ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಬಿಜೆಪಿ ಹೈಕಮಾಂಡ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಬೊಮ್ಮಾಯಿ ಸಚಿವ ಸಂಪುಟದಲ್ಲಿ ಪ್ರಬಲ ಆಕಾಂಕ್ಷಿಯೆಂದೇ ರಾಜೂಗೌಡರನ್ನು ಪರಿಗಣಿಸಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಇವರ ಹೆಸರು ಪ್ರಸ್ತಾಪವಾಗಲೇ ಇಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲೆಂದು ವಿವಿಧೆಡೆಯಿಂದ ಬೆಂಗಳೂರಿಗೆ ತೆರಳಿದ್ದ ರಾಜೂಗೌಡರ ಸಾವಿರಾರು ಬೆಂಬಲಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ರಸ್ತೆಗಿಳಿದರು. ಬೆಂಗಳೂರಿನ ರಸ್ತೆಯಲ್ಲೇ ಪ್ರತಿಭಟನೆ ನಡೆಸಿ, ಬಿಜೆಪಿ ಹೈಕಮಾಂಡ್ ವಿರುದ್ಧ ಕಿಡಿ ಕಾರಿದರು. ತಮ್ಮ ನಾಯಕನ ಪರ ಬೆಂಬಲಿಗರ ಘೋಷಣೆ ಹಾಗೂ ಸಿಎಂ ವಿರುದ್ಧ ಆಕ್ರೋಶದ ಕೂಗುಗಳು ಹೊರಹೊಮ್ಮಿದವು. ಬೆಂಬಲಿಗರ ಪ್ರತಿಭಟನೆಯನ್ನು ತಣ್ಣಗಾಗಿಸಲು ಅಲ್ಲಿಗೆ ಖುದ್ದು ತೆರಳಿದ ರಾಜೂಗೌಡ, ಎಲ್ಲರನ್ನು ಸಮಾಧಾನ ಪಡಿಸಿದರು.
undefined
ಸಿಪಾಯಿ ದಂಗೆಯ ಮೊದಲ ಹೋರಾಟಕ್ಕೆ ಕಾರಣವಾದ ಊರಿಂದ ಬಂದಿದ್ದೇನೆ. ಭಿಕ್ಷೆ ಬೇಡಿ ಮಂತ್ರಿ ಆಗುವಂತಹ ಪರಿಸ್ಥಿತಿ ನನಗೆ ಬೇಡ, ಮಂತ್ರಿಗಿರಿಗಾಗಿ ಬಕೆಟ್ ಹಿಡಿಯುವುದೂ ಬೇಡ ಎಂದು ಪರೋಕ್ಷವಾಗಿ ತಮಗಾದ ನೋವನ್ನು ಹೊರಹಾಕಿದರು. ನನ್ನ ಮೇಲೆ ಯಾವುದೇ ಭ್ರಷ್ಟಾಚಾರವಿಲ್ಲ, ಸೀಡಿಯೂ ಇಲ್ಲ ಎಂದು ಸ್ವಪಕ್ಷೀಯರ ವಿರುದ್ಧವೇ ಟಾಂಗ್ ನೀಡಿದ ರಾಜೂಗೌಡ, ಇನ್ನೂ ನಾಲ್ಕು ಸ್ಥಾನಗಳಿವೆ ಎಂದು ಹೇಳಿದ ಸಿಎಂ ಎದುರು ಗಂಡು ಮಗನಂತೆ ಮಾತನಾಡಿ ಬಂದಿದ್ದೇನೆ. ನೀನು ಕರೆದು ಮಂತ್ರಿ ಕೊಟ್ಟರೂ ಬೇಡ, ಲಾಬಿ ಮಾಡಿ ಬಕೆಟ್ ಹಿಡಿಯುವ ಅವಶ್ಯಕತೆ ಇಲ್ಲ ಎಂದಿದ್ದೇನೆ ಎಂದು ಬೆಂಬಲಿಗರೆದುರು ಹೇಳಿದರು.
ಕಾವೇರಿಗೆ ಕೊಟ್ಟಷ್ಟು ಆದ್ಯತೆ ತುಂಗಾ, ಕೃಷ್ಣಾಕ್ಕಿಲ್ಲ: ರಾಜೂಗೌಡ
2023 ರಲ್ಲಿ ಪಕ್ಷ ಕಟ್ಟಿ ನನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸುತ್ತೇನೆ, ಆಗ ಮಂತ್ರಿಗಿರಿ ಅಲ್ಲಿಗೇ ಬರಬೇಕು. ಈಗಿನ ಮಂತ್ರಿಮಂಡಳದಲ್ಲಿ ಸಚಿವನಾದರೆ ಅವಮಾನವಾದಂತೆ. ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ಕೊಟ್ಟರೂ ಕಾಟಾಚಾರಕ್ಕೆಂಬಂತೆ ಇರುತ್ತದೆ, ಅಗಸರ ನಾಯಿ ಹಳ್ಳಾನೂ ಕಾಯ್ಲಿಲ್ಲ, ಮನೆನೂ ಕಾಯ್ಲಿಲ್ಲ ಅನ್ನೋ ತರಹ ಆಗಬಾರದು. ನಂತರದಲ್ಲಿ ಮಂತ್ರಿ ಮಾಡುತ್ತೇವೆಂದರೂ ಎಂಜಲು ತಿನ್ನೋದು ಆಗಲ್ಲ ಎಂದು ಒಂದು ರೀತಿಯ ಭಾವೋದ್ವೇಗದ ಮಾತುಗಳನ್ನಾಡಿದ ರಾಜೂಗೌಡ, ನಾನು ಜನರ ಸೇವೆಗೆಂದೇ ಬಂದಿರುವೆ. ಮಂತ್ರಿ ಸ್ಥಾನ ಇರಲಿ, ಬಿಡಲಿ ನಿಮ್ಮ ಜೊತೆಯೇ ಇರುವೆ. ಬೆಂಬಲಿಗರು ಯಾರೂ ಪ್ರತಿಭಟನೆ ಅಥವಾ ಗಲಾಟೆ ಮಾಡಬಾರದು ಎಂದು ಕೈಮುಗಿದು ಕೇಳಿದ ಅವರು, ಎಲ್ಲರೂ ಶಾಂತರಾಗಿಯೇ ಊರಿಗೆ ಹೋಗುವಂತೆ ಮನವಿ ಮಾಡಿದರು.
ಮಂತ್ರಿಗಿರಿ : ರೆಬೆಲ್ ರಾಜೂಗೌಡರಿಗಿಲ್ಲ ‘ಅದೃಷ್ಟದ ಗೆರಿ’
ಕಾವೇರಿಗೆ ಕೊಟ್ಟಷ್ಟು ಆದ್ಯತೆ, ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಿಗೆ ಸಿಗುತ್ತಿಲ್ಲ. ಈ ಸರ್ಕಾರದಲ್ಲಿ (ಬಿಎಸ್ವೈ) ಕಲ್ಯಾಣ ಕರ್ನಾಟಕ ಭಾಗಕ್ಕೆ ಮಹತ್ವ ಇಲ್ಲ ಎಂದು ಸ್ವಪಕ್ಷೀಯ ಸರ್ಕಾರದ ವಿರುದ್ಧ 10-15 ದಿನಗಳ ಹಿಂದಷ್ಟೇ ಟೀಕಿಸಿದ್ದ, ಸಿಎಂ ಕುರ್ಚಿಗಾಗಿನ ಕಚ್ಚಾಟದ ವೇಳೆ ತಮ್ಮದೇ ಪಕ್ಷ ಬಿಜೆಪಿಯಲ್ಲಿನ ಬೆಳವಣಿಗೆಗಳ ಕುರಿತು ಮಾತಿನ ಚಾಟಿ ಬೀಸಿದ್ದ, ರಾಜಕೀಯ ಜೀವನದ ಬಹುತೇಕ ಪ್ರಮುಖ ಸಂದರ್ಭಗಳಲ್ಲಿ ಪಕ್ಷಾಂತರ ಪರ್ವದ ಹಿಸ್ಟರಿ ಹೊಂದಿದ್ದರಿಂದ ಈಗಲೂ ಬಿಜೆಪಿ ಹೈಕಮಾಂಡಿನಂಗಳದಲ್ಲಿ ಶಂಕಾಸ್ಪದವಾಗಿಯೇ ಕಂಡು ಬರುತ್ತಿರುವ ಮಾಜಿ ಸಚಿವ, ಸುರಪುರ ಶಾಸಕ ನರಸಿಂಹನಾಯಕ್ (ರಾಜೂಗೌಡ) ರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದು ಅವರ ಖಾಸಾ ಪಡೆಯಲ್ಲಿ ಅಸಮಾಧಾನದ ಭುಗಿಲೆಬ್ಬಿಸಿದೆ
ಬುಧವಾರ ಸಚಿವ ಸಂಪುಟ ರಚನೆಯ ವೇಳೆ ರಾಜೂಗೌಡರದ್ದು ಹೆಸರು ಪಕ್ಕಾ ಎಂದೇ ನಂಬಿದ್ದವರಿಗೆ ಶಾಕ್ ನೀಡಿದಂತಾಗಿದೆ. ಹಾಗೆ ನೋಡಿದರೆ, ಬಿಎಸ್ವೈ ಅವಽಯಲ್ಲೇ ಎರಡು ಬಾರಿ ಸಚಿವ ಸ್ಥಾನಕ್ಕಾಗಿ ಇವರ ಹೆಸರು ತೇಲಿಬಂದಿತ್ತಾದರೂ, ಕೊನೆಗಳಿಗೆಯಲ್ಲಿನ ಲೆಕ್ಕಾಚಾರಗಳಿಂದಾಗಿ ಮಂತ್ರಿಗಿರಿ ಕೈತಪ್ಪಿತ್ತು. ಆದರೆ, ಈ ಬಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆಂಬ ಆಸೆ-ಭರವಸೆಯೊಂದಿಗೆ ಬೆಂಗಳೂರಿಗೆ ತೆರಳಿದ್ದ ರಾಜೂಗೌಡರಿಗೆ ಮತ್ತೇ ಕೊನೆಯ ಕ್ಷಣದಲ್ಲಿ ಹೆಸರು ಕೈತಪ್ಪಿದೆ. ಪ್ರಮಾಣ ವಚನ ಸ್ವೀಕರಿಸಲು ಬರುವಂತೆ ಸಿಎಂ ಫೋನಾಯಿಸುತ್ತಾರೆ ಎಂದು ಕಾದಿದ್ದ ಇವರಿಗೆ ‘ಮುಂದಿನ ಬಾರಿ’ ಎಂಬುದಾಗಿನ ಸಮಜಾಯಿಷಿ ಮಾತುಗಳು ಈ ಹಿಂದೆಂದಿಗಿಂತಲೂ ಆಘಾತ ಮೂಡಿಸಿದೆ. ಇನ್ಮುಂದೆ, ಮಂತ್ರಗಿರಿ ಬಗ್ಗೆ ಮಾತೇ ಆಡಬಾರದು ಎನ್ನುವಷ್ಟರ ಮಟ್ಟಿಗೆ ರಾಜೂಗೌಡರು ತಮ್ಮೆದುರು ಬೇಸರ ವ್ಯಕ್ತಪಡಿಸಿದ್ದಾರೆಂಬುದು ಅವರ ನಿಕಟವರ್ತಿಗಳ ಅಂಬೋಣ.
ಪ್ರವಾಹ ಹಾಗೂ ಕೋವಿಡ್ ಸಂದರ್ಭಗಳಲ್ಲಿ ಜನಜೀವನ ಜೊತೆಯೇ ಹೆಚ್ಚು ಬೆರೆತಿದ್ದ, ಸಂತ್ರಸ್ತರ ಹಾಗೂ ರೋಗಿಗಳ ಸೇವೆಗೆಂದು ಪಾದರಸದಂತೆ ಓಡಾಡಿ ಜನಮಾನಸದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದ ರಾಜೂಗೌಡ ಆಂಡ್ ಟೀಂ, ರಾಷ್ಟ್ರಮಟ್ಟದಲ್ಲೂ ಖ್ಯಾತಿ ಪಡೆದಿತ್ತು. ಗಿರಿಜಿಲ್ಲೆಗೆ ಮುಂದಿನ ದಿನಗಳಲ್ಲಿ ರಾಜೂಗೌಡರನ್ನೇ ಮಂತ್ರಿ ಮಾಡೋದು ಎಂಬ ಮಾತುಗಳು ಆಗ ಕೇಳಿಬಂದಿದ್ದವು.
BSY ವಿರುದ್ಧ ಯಾವುದೇ ಯಾವುದೇ ಚಟುವಟಿಕೆಗಳು ನಡೆದಿಲ್ಲ: ಶಾಸಕ ರಾಜೂಗೌಡ
ರೆಬೆಲ್ ರಾಜೂಗೌಡ:
ಅಷ್ಟಾದರೂ ಸಹ, ತಮ್ಮದೇ ಸರ್ಕಾರದ ವಿರುದ್ಧ ಚಾಟಿ ಬೀಸಿದಂತೆ ಮಾತನಾಡಿ, ರಾಜಕೀಯ ಬೆಳವಣಿಗೆಗಳು ಹಾಗೂ ಯೋಜನೆಗಳ ಹಂಚಿಕೆ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಆಗುತ್ತದೆ ಎಂದು ಹಲವಾರು ಸಂದರ್ಭಗಳಲ್ಲಿ ಬಿಜೆಪಿ ಸರ್ಕಾರವನ್ನು ಮಜುಗರಕ್ಕೀಡಾಗಿಸುತ್ತಿದ್ದ ರಾಜೂಗೌಡ, ಮಂತ್ರಿಗಿರಿ ಸಿಗಲಿ-ಬಿಡಲಿ ತಮ್ಮ ಅಭಿಪ್ರಾಯಗಳನ್ನು ಮುಲಾಜಿಲ್ಲದೆ ಮಂಡಿಸುವುದಾಗಿ ಹೇಳುತ್ತಿದ್ದರು. ಇದು ಸದ್ಯದ ಸ್ಥಿತಿಗೆ ಒಂದು ಕಾರಣವಾದರೆ, ರಾಜಕೀಯ ಜೀವನದಲ್ಲಿ ಅನೇಕ ಬಾರಿ ಪಕ್ಷಗಳನ್ನು ಬದಲಿಸಿದ್ದುದೂ ಬಿಜೆಪಿ ಹೈಕಮಾಂಡಿಗೆ ಅನುಮಾನಸ್ಪದ ರೀತಿಯಲ್ಲೇ ಕಾಣಿಸುತ್ತಿದ್ದರು.
ರಾಜಕೀಯ ಹಿನ್ನೆಲೆ:
ಉದ್ಯಮಿ ವಿಜಯ ಸಂಕೇಶ್ವರ ಅವರು ಸ್ಥಾಪಿಸಿದ್ದ ಕನ್ನಡನಾಡು ಪಕ್ಷದಿಂದ ಆಯ್ಕೆಯಾದ ಮೊದಲ ಶಾಸಕ ಎಂಬ ಹೆಗ್ಗಳಿಕೆ ಪತ್ರವಾಗಿದ್ದ ರಾಜೂಗೌಡ, ನಂತರದಲ್ಲಿ ಕಾಂಗ್ರೆಸ್, ಜೆಡಿಎಸ್ ಕದ ತಟ್ಟಿ ಬಂದಿದ್ದರು. ಗಣಿಧಣಿಗಳ ಜೊತೆ ಬಿಎಸ್ವೈ ಭಿನ್ನಮತದ ವೇಳೆಯಲ್ಲಿ ಬಳ್ಳಾರಿ ರೆಡ್ಡಿಗಳ ಪಾಳೆಯಕ್ಕೆ ಸೇರಿದ್ದ ಇವರು, ನಂತರದಲ್ಲಿ ಮತ್ತೇ ಬಿಎಸ್ವೈರ ಸನಿಹಕ್ಕೆ ಬಂದಿದ್ದು ಇತಿಹಾಸ. ಸದಾನಂದಗೌಡರ ಸರ್ಕಾರದಲ್ಲಿ ಮಂತ್ರಿ ಪಟ್ಟ ಸಿಕ್ಕಿತ್ತು. ಮುಂಬೈನಲ್ಲಿ ಭಿನ್ನಮತದ ರಾಜಕೀಯ ಪ್ರಹಸನಗಳು ನಡೆದಿದ್ದಾಗ, ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳಿಗೆ ಖುದ್ದಾಗಿ ಕಾಣಿಸಿಕೊಂಡು ಸುಖಾಂತ್ಯವಾಗಿಸಿದ್ದ ರಾಜೂಗೌಡ, ಕಾಂಗ್ರೆಸ್ ಪಕ್ಷದ ಪ್ರಭಾವಿ ಹಿರೀಕರ ಜೊತೆ ಈಗಲೂ ಅವಿನಾಭಾವ ಸಂಬಂಧ ಹೊಂದಿರುವುದು ಬಿಜೆಪಿ ಪಾಲಿಗೆ ಬಿಸಿತುಪ್ಪದಂತಾಗಿರುವುದು ಸತ್ಯ.
ಜಿಲ್ಲೆಗೆ ಮತ್ತೆ ನಿರಾಸೆ
ಬಿಎಸ್ವೈ ಅವಧಿಯಲ್ಲಿ ಸ್ಥಾನ ಸಿಗದಿದ್ದರೂ, ಈಗ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಈ ಬಾರಿಯಾದರೂ ಯಾದಗಿರಿ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಆಶಾಭಾವ ಇಟ್ಟುಕೊಂಡಿದ್ದ ಗಿರಿ ಜಿಲ್ಲೆಯ ಜನರಿಗೆ ಮತ್ತೊಮ್ಮೆ ನಿರಾಸೆಯಾಗಿದೆ.
ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ಕೊಡಿ; ಸಿಎಂಗೆ ಸಚಿವರ ಪತ್ರ
ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿನ ಶಾಸಕರು (ಯಾದಗಿರಿ ಹಾಗೂ ಸುರಪುರ) ಬಿಜೆಪಿಯವರಾಗಿದ್ದು, ಯಾದಗಿರಿ ಜಿಲ್ಲೆಗೆ ಬೇರೆ ಜಿಲ್ಲೆಗಳ ಸಚಿವರು ಉಸ್ತುವಾರಿ ಆಗುವುದಕ್ಕಿಂತ ಇಲ್ಲಿನವರೇ ಆಗೋದು ಉತ್ತಮ ಅನ್ನೋ ಮಾತುಗಳು ಜನರ ಬಾಯಲ್ಲಾಡುತ್ತಿದ್ದವು. ಸಚಿವ ಸ್ಥಾನಕ್ಕೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಹಾಗೂ ಸುರಪುರ ಶಾಸಕ ನರಸಿಂಹನಾಯಕ್ (ರಾಜೂಗೌಡ) ಆಕಾಂಕ್ಷಿಗಳಾಗಿದ್ದರು.
ವಿವಿಧೆಡೆಯ ಅವರವರ ಬೆಂಬಲಿಗರು ಹರಕೆ, ಪೂಜೆ, ಆಗ್ರಹ, ಮನವಿ ಎಲ್ಲವನ್ನೂ ಮಾಡಿಯಾಗಿತ್ತು. ಇಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳೆದುರು ಹಂಚಿಕೊಂಡಿದ್ದರು. ವಯಸ್ಸಿನಲ್ಲಿ ಹಿರಿಯರಾದ ತಮಗೆ ಅಥವಾ ಅನುಭವದಲ್ಲಿ ಹಿರಿಯರಾದ ರಾಜೂಗೌಡರಿಗಾಗಲಿ ಸಚಿವ ಸ್ಥಾನ ಸಿಕ್ಕರೆ ಸಂತೋಷ ಎಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಹೈಕಮಾಂಡ್ ಹೇಗೆ ಹೇಳುತ್ತೋ ಹಾಗೆ ಎಂದು ಪ್ರವಾಹ ಪೀಡಿತರ ನೆರವಿಗೆ ಧುಮುಕಿದ್ದ ಶಾಸಕ ರಾಜೂಗೌಡ ತಮ್ಮ ಮನದಾಳವನ್ನೂ ಹಂಚಿಕೊಂಡಿದ್ದರು. ಅಷ್ಟಕ್ಕೂ, ಸಚಿವ ಸ್ಥಾನದ ‘ಫೇವರೇಟ್’ ಎಂದೇ ಗುರುತಿಸಲ್ಪಟ್ಟ ರಾಜೂಗೌಡರ ಪರ ಹೈಕಮಾಂಡ್ ಆಸಕ್ತಿ ತೋರಿದೆ ಎಂದು ಇಲ್ಲಿನ ಬಿಜೆಪಿ ಪಾಳೆಯದಲ್ಲಿ ಚರ್ಚೆಗಳೂ ಸಾಗಿದ್ದವು.
ಸಚಿವ ಸ್ಥಾನಕ್ಕಾಗಿ ಸಂಭಾವ್ಯರ ಪಟ್ಟಿಯಲ್ಲಿ ಕೊನೆಕ್ಷಣದವರೆಗೂ ರಾಜೂಗೌಡ ಹೆಸರು ಪ್ರಮುಖವಾಗಿ ಕೇಳಿಬರುತ್ತಿತ್ತು. ಮಾಧ್ಯಮಗಳಲ್ಲಿ ರಾಜೂಗೌಡರ ಹೆಸರು ಕಾಣಿಸಿಕೊಂಡು, ಅವರ ಬೆಂಬಲಿಗರಲ್ಲಿ ಹರ್ಷೋತ್ಸಾಹಕ್ಕೂ ಕಾರಣವಾಗಿತ್ತು. ಪದಗ್ರಹಣ ಸಮಾರಂಭದಲ್ಲಿ ಸಾಕ್ಷಿಯಾಗಲು ಅವರ ಸಾವಿರಾರು ಬೆಂಬಲಿಗರು ಬೆಂಗಳೂರಿಗೆ ತೆರಳಿದ್ದರು. ಉಸ್ತುವಾರಿ ರಾಜೂಗೌಡರದ್ದೇ ಎಂಬ ಭಾವ ಜಿಲ್ಲೆಯ ಜನಮಾನಸದಲ್ಲಿ ಆವರಿಸುತ್ತಿತ್ತು.
ಆದರೆ ಈ ಹಿಂದಿನ ಎರಡೂ ಬಾರಿಯಂತೆ, ಸಚಿವ ಸ್ಥಾನ ಗಿಟ್ಟಿಸಿದವರ ಪಟ್ಟಿಯಲ್ಲಿ ರಾಜೂಗೌಡರ ಹೆಸರು ಇಲ್ಲದಿರುವುದು ಆಘಾತ ಮೂಡಿಸಿತ್ತು. ರಾಜಕೀಯ ಪಂಡಿತರನೇಕರ ಲೆಕ್ಕಾಚಾರಗಳು ತಲೆಕೆಳಗಾದವು. ಬಹುಶ: ಈ ಬಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ‘ಹೈಕಮಾಂಡಿನ ಹಿರೀಕರ ಭರವಸೆ’ ಮೇರೆಗೆ ಬೆಂಗಳೂರಿಗೆ ತೆರಳಿದ್ದ ರಾಜೂಗೌಡರಿಗೂ ಇದು ಅರಿಯದಂತಾಯ್ತು. ಅಲ್ಲಿ ಬೆಂಬಲಿಗರ ಆಕ್ರೋಶ ಮುಗಿಲು ಮುಟ್ಟಿತ್ತು. ರಾಜೂಗೌಡರಿಗೂ ಇದು ಅಚ್ಚರಿ ಎಂದೆನಿಸಿದ್ದರೂ, ಪ್ರತಿಭಟನೆಗಿಳಿದ ತಮ್ಮ ಬೆಂಬಲಿಗರ ಸಮಾಧಾನಪಡಿಸುವಲ್ಲಿ ಸಾಕು ಸಾಕಾಗಿತ್ತು.
ಯಾದಗಿರಿ ಜಿಲ್ಲೆಯಾದಾಗಿನಿಂದ ನಂತರದ ಸರ್ಕಾರಗಳಲ್ಲಿ ಬಹುತೇಕ ಹೊರ ಜಿಲ್ಲೆಯವರೇ ಉಸ್ತುವಾರಿ ವಹಿಸಿಕೊಂಡಿದ್ದರು. ಆರಂಭದಲ್ಲಿ ಡಾ. ವಿ. ಎಸ್. ಆಚಾರ್ಯ, ಸಿ. ಸಿ. ಪಾಟೀಲ್, ಪ್ರೊ. ಮೊಮ್ತಾಜ್ ಅಲಿ ಖಾನ್, ಪ್ರಿಯಾಂಕ ಖರ್ಗೆ, ರಾಜಶೇಖರ ಪಾಟೀಲ್ ಹುಮ್ನಾಬಾದ್, ಪ್ರಭು ಚವ್ಹಾಣ್, ಆರ್. ಶಂಕರ್ ಉಸ್ತುವಾರಿ ವಹಿಸಿದ್ದರೆ, ಒಮ್ಮೆ ಜಿಲ್ಲೆಯ ರಾಜೂಗೌಡ ಹಾಗೂ ಬಾಬುರಾವ್ ಚಿಂಚನಸೂರು ಉಸ್ತುವಾರಿ ವಹಿಸಿದ್ದರು. ಮುರುಗೇಶ್ ನಿರಾಣಿ, ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಧ್ವಜಾರೋಹಣದ ಉಸ್ತುವಾರಿ ವಹಿಸಿದ್ದರು.
ಬೇರೆ ಜಿಲ್ಲೆಯವರು ಉಸ್ತುವಾರಿ ವಹಿಸಿದರೆ ಇಲ್ಲಿಗೆ ಭೇಟಿ ವಿರಳ ಹಾಗೂ ಆಸಕ್ತಿಯೂ ಕಮ್ಮಿಯಿರುತ್ತದೆ ಎಂಬ ಮಾತುಗಳು ಮೂಡಿಬಂದಿದ್ದವು. ಇದೇ ಜಿಲ್ಲೆಯವರ ಉಸ್ತುವಾರಿ ನೇಮಿಸಬೇಕೆಂಬ ಕೂಗೂ ಕೇಳಿ ಬಂದಿತ್ತು. ಹೀಗಾಗಿ, ಈ ಬಾರಿ ರಾಜೂಗೌಡರಿಗೆ ಸಚಿವ ಸ್ಥಾನದ ಬಗ್ಗೆ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ, ಬದಲಾದ ಚಿತ್ರಣ ಮತ್ತದೇ ಕೊರಗು ಮೂಡಿಸಲಿದೆಯೆನೋ ಅನ್ನೋ ಭಾವ ಗಿರಿ ಜಿಲ್ಲೆಯ ಜನರನ್ನು ಕಾಡುತ್ತಿದೆ.