* ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಮೂಢನಂಬಿಕೆ ಆಚರಣೆ
* ಗ್ರಾಮದ ನಾಲ್ಕು ದಿಕ್ಕಿಗೂ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು
* ಜಿಲ್ಲಾಡಳಿತದ ವಿರುದ್ಧ ಪ್ರಜ್ಞಾವಂತ ಯುವಕರ ಆಕ್ರೋಶ
ಚಿತ್ರದುರ್ಗ(ಮೇ.23): ಮಹಾಮಾರಿ ಕೊರೋನಾಗೆ ಹೆದರಿ ಗ್ರಾಮದ ನಾಲ್ಕು ದಿಕ್ಕಿಗೂ ಮಂತ್ರಿಸಿದ ತೆಂಗಿನಕಾಯಿಯನ್ನ ಗ್ರಾಮಸ್ಥರು ಕಟ್ಟಿದ ಘಟನೆ ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ನಾವು ಇಂದಿಗೂ ಮೂಢನಂಬಿಕೆ ಆಚರಣೆಯನ್ನ ಕೈಬಿಟ್ಟಿಲ್ಲ ಎಂದು ಗ್ರಾಮಸ್ಥರು ಸಾಭೀತುಪಡಿಸಿದ್ದಾರೆ. ಈ ಮೂಲಕ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಕ್ಷೇತ್ರದ ಗ್ರಾಮದಲ್ಲೇ ಮೂಢನಂಬಿಕೆ ತಾಂಡವವಾಡುತ್ತಿದೆ.
ಎರಡು ಸಾವಿರ ಜನಸಂಖ್ಯೆಯುಳ್ಳ ಅತಿದೊಡ್ಡ ಗ್ರಾಮ ಮನ್ನೆಕೋಟೆಯಲ್ಲಿ ಕೇವಲ ಒಂದು ತಿಂಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. 450ಕ್ಕೂ ಹೆಚ್ಚು ಗ್ರಾಮದ ಜನರಿಗೆ ಶೀತ, ಕೆಮ್ಮು, ನಗಡಿ, ಜ್ವರ ಕಾಣಿಸಿಕೊಂಡಿದೆ. 5 ಮಂದಿ ಕೋವಿಡ್‌ಗೆ ಬಲಿಯಾದರೆ ಉಳಿದ 10 ಮಂದಿ ಇನ್ನಿತರ ರೋಗಗಳಿಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗ: ಒಂದೇ ಹಳ್ಳಿಯ 750ಕ್ಕೂ ಹೆಚ್ಚು ಮಂದಿಗೆ ಜ್ವರ? ವಾರದಲ್ಲಿ 6 ಮರಣ
ಗ್ರಾಮದಲ್ಲಿ ಇಷ್ಟೆಲ್ಲಾ ಸಾವಿನ ಪ್ರಕರಣಗಳು ವರದಿಯಾದರೂ ಕೂಡ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಸೌಜನ್ಯಕ್ಕೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಮೂಢನಂಬಿಕೆಯನ್ನ ತೊಲಗಿಸಲು ಮುಂದಾಗಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗು ಯಾವದೇ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಇಂತಹ ಮಹಾಮಾರಿ ಕೊರೋನಾ ಸಂದರ್ಭದಲ್ಲೂ ಕೂಡ ಇಲ್ಲಿನ ಜನರು ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಮೂಡನಂಬಿಕೆ ಮೊರೆಹೀಗಿರುವುದು ಮಾತ್ರ ವಿಪರ್ಯಾಸವೇ ಸರಿ. ಹೀಗಾಗಿ ಗ್ರಾಮದ ಪ್ರಜ್ಞಾವಂತ ಯುವಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.