
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.29): ಕೊಟ್ಟಿರುವ ಸಾಲ ವಸೂಲಾತಿಗೆ ಜನರಿಗೆ ಕಿರುಕುಳ ನೀಡಿದ್ರೆ ಅಂತಹ ಫೈನಾನ್ಸ್ ಕಂಪನಿಗೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಫೈನಾನ್ಸ್ ಕಂಪೆನಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡುವ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತುಕೊಂಡು ಜಿಲ್ಲಾಡಳಿತ ಕೊಡಗಿನಲ್ಲಿ ಕೆಲಸ ಮಾಡುತ್ತಿರುವ ಮೈಕ್ರೋಫೈನಾನ್ಸ್ ಕಂಪೆನಿಗಳ ಸಿಬ್ಬಂದಿ ಸಭೆ ನಡೆಸಿದರು.
ಸಭೆಯಲ್ಲಿ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ ಜಿಲ್ಲಾಧಿಕಾರಿ ಕಿರುಕುಳ ನೀಡಿದ್ರೆ ಅಂತಹ ಫೈನಾನ್ಸ್ ಕಂಪೆನಿಗಳ ವಿರುದ್ಧ ಆರ್ ಬಿಐ ಗೆ ವರದಿ ನೀಡಲಾಗುವುದು. ಜೊತೆಗೆ ಆ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ವರದಿ ಸಲ್ಲಿಸಲಾಗುವುದು. ಬೆದರಿಕೆ ಒಡ್ಡಿ ಕಿರುಕುಳ ನೀಡಿ ವಸೂಲಿ ಮಾಡಿದ್ರೆ ಸುಮೊಟೋ ಕೇಸ್ ಹಾಕಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಭೆಯಲ್ಲಿ ಖಡಕ್ ಸೂಚನೆ ನೀಡಿದರು. ಆರ್ಬಿಐ ನಿಯಮಗಳ ಪ್ರಕಾರ ಕಾನೂನು ರೀತಿಯಲ್ಲಿ ಸಾಲ ವಸೂಲಿ ಮಾಡಿಕೊಳ್ಳಿ. ಅದು ಬಿಟ್ಟು ದಬ್ಬಾಳಿಕೆ ಮಾಡಿ ವಸೂಲಿ ಮಾಡುವುದನ್ನು ಒಪ್ಪುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದು ಅರ್ಥವಾಗದಿದ್ದರೆ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು. ಸಾಲ ಮರುಪಾವತಿ ಮಾಡುವ ಶಕ್ತಿ ಇಲ್ಲದಿದ್ದರೂ ಸಾಲ ನೀಡಿರುವುದು ಗೊತ್ತಾಗಿದೆ.
ರಾಮುಲು, ರೆಡ್ಡಿ ನಾಯಕರಾಗಲು ಅರ್ಹರಲ್ಲ, ಬಿಜೆಪಿ, ಜೆಡಿಎಸ್‌ನಲ್ಲಿ ಒಳಜಗಳವಿದೆ: ಸಚಿವ ಬೋಸರಾಜು
ಈ ರೀತಿ ಯಾವ ಆಧಾರದಲ್ಲಿ ನೀವು ಸಾಲ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ, ಮುಂದೆ ಪೊಲೀಸ್ ಕೇಸ್ ಆದಲ್ಲಿ ಸಾಲ ಮತ್ತು ಅದರ ಮರುಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಜನರಿಗೆ ನೀಡಿರಬೇಕು. ಇಲ್ಲದಿದ್ದರೆ ಆದ್ದರಿಂದ ಆಗುವ ನಷ್ಟಕ್ಕೆ ಫೈನಾನ್ಸ್ ಕಂಪೆನಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ರು. ನಿಯಮ ಪ್ರಕಾರವೇ ಸಾಲ ಮರುಪಾವತಿಗೆ ಕೇಳುತ್ತಿದ್ದೇವೆ. ನಮಗೆ ಹಣ ಅರೇಂಜ್ ಮಾಡುವವರೆಗೆ ಅಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಫೈನಾನ್ಸ್ ಕಂಪನಿಯೊಂದರ ಸಿಬ್ಬಂದಿ ಹೇಳಿದರು. ಫೈನಾನ್ಸ್ ಕಂಪನಿ ಸಿಬ್ಬಂದಿಯ ಆ ಮಾತಿಗೆ ಗರಂ ಆದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಾಲ ಕಟ್ಟುವವರೆಗೆ ಯಾಕೆ ಅಲ್ಲಿ ಕುಳಿತುಕೊಳ್ಳಬೇಕು. ಹಣ ಕಟ್ಟಿಲ್ಲ ಎಂದರೆ ಮುಂದಿನ ವಾರ ಬರುವುದಾಗಿ ಸಮಯ ಕೊಟ್ಟು ಬರಬಹುದಲ್ಲವೇ ಎಂದು ಗರಂ ಆಗಿ ಚಳಿ ಬಿಡಿಸಿದರು.
ಸಾಲ ವಸೂಲಾತಿಗೆ ಹೋಗುವುದಕ್ಕೆ ಜನರು ಬಿಡುತ್ತಿಲ್ಲ. ಸರ್ಕಾರ ಹೇಳಿದೆ, ಮಾಧ್ಯಮಗಳಲ್ಲಿ ಬಂದಿದೆ ನಾವು ಸಾಲ ಕಟ್ಟಲ್ಲ ಎಂದು ಜನರು ಹೇಳುತ್ತಿದ್ದಾರೆ ಎಂದ ಫೈನಾನ್ಸ್ ಕಂಪೆನಿಗಳ ಸಿಬ್ಬಂದಿ ಮಾತಿಗೂ ಕನಲಿದ ಜಿಲ್ಲಾಧಿಕಾರಿ ನೀವು ಅವರಿಗೆ ಸಾಲ ಮರುಪಾವತಿ ಮಾಡುತ್ತಾರೆ ಎನ್ನುವಂತಹ ಸ್ಥಿತಿ ಇರುವವರಿಗೆ ಮಾತ್ರವೇ ಸಾಲ ಕೊಟ್ಟಿದಿದ್ದರೆ ಇಂತಹ ಸ್ಥಿತಿಯೇ ಆಗುತ್ತಿರಲಿಲ್ಲ ಎಂದರು. ಇದಕ್ಕೆ ಕೆಲವು ಸಿಬ್ಬಂದಿ ಕಳೆದ ಮೂರು ತಿಂಗಳಿನಿಂದ ಸಿಬಿಲ್ ಸ್ಕೋರ್ ನೋಡಿಯೇ ಸಾಲ ನೀಡುತ್ತಿದ್ದೇವೆ. ಕೆಲವರು ಸಾಲ ಮರುಪಾವತಿ ಮಾಡುವುದಕ್ಕೆ ಮುಂದೆ ಬಂದರೂ ಇನ್ನು ಕೆಲವರು ಸಾಲ ಮರುಪಾವತಿ ಮಾಡುವವರನ್ನು ಬಿಡುತ್ತಿಲ್ಲ ಎಂದರು. ಈ ನಡುವೆ ಮಾತನಾಡಿದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕೆಲವು ಹಾಡಿಗಳಲ್ಲಿ ಮಹಿಳೆಯರಿಗೆ 9 ರಿಂದ 10 ಫೈನಾನ್ಸ್ ಗಳಿಂದ ಸಾಲ ನೀಡಲಾಗಿದೆ.
ಅರೆರೆ ಇದೆಂತ ವಿಚಿತ್ರ... ಹೆಲ್ಮೆಟ್ ಧರಿಸದೇ ಚಾಲನೆ ಅಂತ ಆಟೋ, ಕಾರು ಚಾಲಕರಿಗೆ ದಂಡದ ನೋಟಿಸ್!
ಇಷ್ಟು ಫೈನಾನ್ಸ್ ಕಂಪೆನಿಗಳು ಸಾಲ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು. ಇನ್ಸೂರೆನ್ಸ್ ಮತ್ತು ಸರ್ವೀಸ್ ಚಾರ್ಜ್ ಹೆಸರಿನಲ್ಲಿ 35 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳಲಾಗಿದೆ. ಇದರ ವಿರುದ್ಧ ಆರ್ ಬಿಐ ಗೆ ವರದಿ ನೀಡಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ಹಾಡಿಗಳಿಗೆ ಭೇಟಿ ನೀಡಿ ಜನರನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಲಾಗಿದೆ. ಯಾವುದೇ ಸಮಸ್ಯೆಗಳಿಗೆ ಪೊಲೀಸ್ ಇಲಾಖೆಗೆ ಅಥವಾ 112 ಇಲ್ಲವೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆದಿರುವ ಸಹಾಯವಾಣಿ 08272-221077 ಕರೆ ಮಾಡಿ ಎಂದು ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್ಗಳ ಹಾವಳಿಗೆ ಬ್ರೇಕ್ ಹಾಕುವುದಕ್ಕೆ ಕೊಡಗು ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿರುವುದಂತು ಸತ್ಯ.