ಕೊನೆಗೂ ಎಚ್ಚೆತ್ತ ಬಿಬಿಎಂಪಿ, ರಂಧ್ರ ಬಿದ್ದ ಸುಮನಹಳ್ಳಿ ಫ್ಲೈಓವರ್‌ ದುರಸ್ತಿ ಆರಂಭ

Published : Sep 22, 2022, 09:44 PM IST
ಕೊನೆಗೂ ಎಚ್ಚೆತ್ತ ಬಿಬಿಎಂಪಿ, ರಂಧ್ರ ಬಿದ್ದ ಸುಮನಹಳ್ಳಿ ಫ್ಲೈಓವರ್‌ ದುರಸ್ತಿ ಆರಂಭ

ಸಾರಾಂಶ

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಂಧ್ರ ಬಿದ್ದ ಸುಮನಹಳ್ಳಿ ಮೇಲ್ಸೇತುವೆ ದುರಸ್ತಿ ಕಾರ್ಯವನ್ನು  ಆರಂಭಿಸಲಾಗಿದೆ. ರಂಧ್ರದ ಸುತ್ತಲೂ ಶಿಥಿಲಗೊಂಡ ಕಾಂಕ್ರಿಟ್‌ ಸ್ಲಾಬ್ ತೆರವು ಆರಂಭವಾಗಿದೆ. 

ಬೆಂಗಳೂರು (ಸೆ.22): ಸುಮನಹಳ್ಳಿಯ ಫ್ಲೈಓವರ್‌ನಲ್ಲಿ ರಂಧ್ರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ದುರಸ್ತಿ ಕಾಮಗಾರಿ ಆರಂಭಿಸಲಾಗಿದ್ದು, ಬುಧವಾರ ರಂಧ್ರದ ಸುತ್ತಲೂ ಶಿಥಿಲಗೊಂಡ ಕಾಂಕ್ರಿಟ್‌ ತೆಗೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ. ಕಳೆದ 2004-06ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೇಲ್ಸೇತುವೆ ನಿರ್ಮಿಸಿ 2014-15ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಮಾಡಬೇಕಿದ್ದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಂಡಿ ಸೃಷ್ಟಿಯಾಗಿದೆ. ಬುಧವಾರ ಬಿಬಿಎಂಪಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ. ಸಡಿಲಗೊಂಡ ಕಾಂಕ್ರಿಟ್‌ ತೆರವು ಮಾಡುವಂತೆ ತಜ್ಞರು ಸೂಚಿಸಿದ್ದು, ಅದರಂತೆ ಕಾಮಗಾರಿ ಆರಂಭಿಸಲಾಗಿದೆ. ಶಿಥಿಲಗೊಂಡಿರುವ ಕಾಂಕ್ರಿಟ್‌ ಸ್ಲಾಬ್‌ ಅನ್ನು ಐವರು ಕಾರ್ಮಿಕರನ್ನು ಬಳಸಿಕೊಂಡು ಒಡೆದು ತೆರವು ಮಾಡುವ ಕೆಲಸವನ್ನು ಬುಧವಾರ ಮಧ್ಯಾಹ್ನದಿಂದ ಆರಂಭಿಸಲಾಗಿದೆ. ಸಂಜೆಯ ವೇಳೆಗೆ ಸುಮಾರು 8/8 ಅಡಿ (64 ಚದರ ಅಡಿ) ಯಷ್ಟು ಈಗಾಗಲೇ ಸಡಿಲಗೊಂಡ ಕಾಂಕ್ರಿಟ್‌ ಸ್ಲಾಬ್‌ ಅನ್ನು ಕತ್ತರಿಸಿ ತೆಗೆಯಲಾಗಿದೆ. ರಾತ್ರಿಯೂ ಕಾಮಗಾರಿ ಮುಂದುವರೆಯಲಿದೆ. ಬುಧವಾರ ರಾತ್ರಿ ಅಥವಾ ಗುರುವಾರ ಕಾಂಕ್ರಿಟ್‌ ಮರು ಭರ್ತಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಬಾಲಾಜಿ ಮಾಹಿತಿ ನೀಡಿದ್ದಾರೆ.

21 ದಿನ ಟ್ರಾಫಿಕ್‌ ಕಿರಿಕಿರಿ?
ರಂಧ್ರ ಬಿದ್ದ ಕಾಂಕ್ರಿಟ್‌ ಸ್ಲಾಬ್‌ ಅನ್ನು ತೆರವು ಮಾಡಿ ಮರು ಕಾಂಕ್ರಿಟ್‌ ಹಾಕಿದರೆ, ಬಳಿಕ 21 ದಿನ ಈ ಕಾಂಕ್ರಿಟ್‌ ಕ್ಲ್ಯೂರಿಂಗ್‌ ಮಾಡಬೇಕು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಇದರಿಂದ ನಾಗರಬಾವಿಯಿಂದ ರಾಜಕುಮಾರ್‌ ಸಮಾಧಿ ಕಡೆ ಸಾಗುವ ಮಾರ್ಗದಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

2019ರಲ್ಲಿಯೂ ಸ್ಲ್ಯಾಬ್ ಕುಸಿದಿತ್ತು. ಆ ಸಮಯದಲ್ಲಿ ಸುಮ್ಮನಹಳ್ಳಿ ಬ್ರಿಡ್ಜ್‌ನ್ನು 6 ತಿಂಗಳು ಬಂದ್ ಮಾಡಲಾಗಿತ್ತು. ಇದೀಗ ಬ್ರಿಡ್ಜ್‌ನಲ್ಲಿ ಮ್ತತೆ ಗುಂಡಿಬಿದ್ದಿದ್ದು, ಪೊಲೀಸರು ಫ್ಲೈ ಓವರ್‌ನ್ನು ಬಂದ್ ಮಾಡಿ ಬದಲಿ ಮಾರ್ಗದ ವ್ಯವಸ್ಥೆಯನ್ನು ಮಾಡಿದ್ದಾರೆ. 

ಸುಮನಹಳ್ಳಿ ಬ್ರಿಡ್ಜ್‌ನಲ್ಲಿ ಗುಂಡಿ, ಜೀವ ಭಯದಲ್ಲೇ ವಾಹನ ಸವಾರರ ಓಡಾಟ

ತಜ್ಞರು ರಂಧ್ರ ಬಿದ್ದಿರುವ ಪಕ್ಕದಲ್ಲಿ ಸದ್ಯ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ. ಒಂದು ವೇಳೆ ಅಲ್ಲಿಯೂ ವಾಹನ ಸಂಚಾರ ನಿಷೇಧಿಸಿದರೆ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಂದು ವಾಹನವೂ ಮೇಲ್ಸೇತುವೆಯ ಕೆಳಭಾಗದಲ್ಲಿಯೇ ಸಂಚರಿಸಬೇಕಾಗಲಿದೆ. ಆಗ ಸುಮ್ಮನಹಳ್ಳಿ ಜಂಕ್ಷನ್‌ ಹಾಗೂ ಸುತ್ತಮುತ್ತದ ಸ್ಥಳದಲ್ಲಿ ಭಾರೀ ಟ್ರಾಫಿಕ್‌ ಸಮಸ್ಯೆ ಆಗಬಹುದು.

ತಿಂಗಳಾದ್ರೂ ಸರಿಯಾಗದ ಸುಮ್ಮನಹಳ್ಳಿ ಬ್ರಿಡ್ಜ್‌ : ಫುಲ್ ಜಾಮ್

ಪರೀಕ್ಷೆಗೆ 25 ದಿನ ಸಮಯ ಬೇಕು: ತಜ್ಞರು
ಸುಮನಹಳ್ಳಿ ಮೇಲ್ಸೇತುವೆಯ ಸಂಪೂರ್ಣ ತಪಾಸಣೆಗೆ ತಜ್ಞರು 25 ದಿನ ಕಾಲಾವಕಾಶ ಕೇಳಿದ್ದಾರೆ. 2019ರಲ್ಲಿ ಇಡೀ ಫ್ಲೈಓವರ್‌ ಪರೀಕ್ಷೆ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಸ್ಟ್ರಕ್ಚರ್‌, ಪಿಲ್ಲರ್‌, ಭೀಮ್‌ ಮತ್ತು ಗರ್ಡರ್‌ನಲ್ಲಿ ಯಾವುದೇ ನ್ಯೂನ್ಯತೆಗಳಿಲ್ಲ, ಎಲ್ಲವೂ ಸದೃಢವಾಗಿವೆ. ಆದರೆ, ಕಾಂಕ್ರಿಟ್‌ ಸ್ಲಾಬ್‌್‌ನಲ್ಲಿ ದೋಷ ಇರುವುದರಿಂದ ಗುಂಡಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಸದ್ಯ ಗುಂಡಿ ಕಾಣಿಸಿಕೊಂಡಿರುವುದನ್ನು ಸರಿ ಪಡಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಬಹುದು. ಉಳಿದಂತೆ ಪರೀಕ್ಷೆಗೆ 25 ದಿನ ಕಾಲಾವಕಾಶ ಬೇಕಾಗಲಿದೆ ಎಂದು ತಜ್ಞರು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

PREV
Read more Articles on
click me!

Recommended Stories

ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!
Bengaluru: ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ