ಬಾಗ್ಮನೆ ಒತ್ತುವರಿ ತೆರವಿಗೆ ‘ಲೋಕಾ ತಡೆ’ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

By Suvarna NewsFirst Published Sep 22, 2022, 9:12 PM IST
Highlights

ರಾಜಕಾಲುವೆ ತೆರವಿಗೆ ಮುಂದಾಗಿದ್ದ ಬಿಬಿಎಂಪಿ ವಿರುದ್ಧ ಲೋಕಾಕ್ಕೆ ಬಾಗ್ಮನೆ ದೂರು. ಅಧಿಕಾರ ಮೀರಿ ತೆರವು ಕಾರ್ಯಕ್ಕೆ ಲೋಕಾಯುಕ್ತರು ತಡೆ ನೀಡಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ.

ಬೆಂಗಳೂರು (ಸೆ.22): ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ನಗರದ ಬಾಗ್ಮನೆ ಟೆಕ್‌ ಪಾರ್ಕ್ ಸಂಸ್ಥೆ ದೂರು ಆಧರಿಸಿ ಲೋಕಾಯುಕ್ತರು ನಡೆಸಿದ ವಿಚಾರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್‌) ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರು ಅರ್ಜಿ ಸಲ್ಲಿಸಿದ್ದು, ಲೋಕಾಯುಕ್ತ ರಿಜಿಸ್ಟ್ರಾರ್‌, ಬಿಬಿಎಂಪಿ ಆಯುಕ್ತ, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಮೆಸರ್ಸ್‌ ಬಾಗ್ಮನೆ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಬುಧವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲ ಪರ ಗೌತಮ್‌ ರಮೇಶ್‌, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸೆ.26ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ಬಿಬಿಎಂಪಿಯು ಬಾಗ್ಮನೆ ಟೆಕ್‌ಪಾರ್ಕ್ ಬಳಿ ನಡೆಸಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಗುರುತು ಮಾಡಿತ್ತು. ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದ ಬಾಗ್ಮನೆ, ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿ ನೋಟಿಸ್‌ ಜಾರಿ ಮಾಡಿಲ್ಲ.

ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಮತ್ತೊಂದು ರಿಯಲ್‌ ಎಸ್ಟೇಟ್‌ ಕಂಪನಿಗೆ ಬಿಬಿಎಂಪಿ ಸಹಕಾರ ನೀಡಿದೆ. ಬಿಬಿಎಂಪಿಯು ತಾರತಮ್ಯದಿಂದ ಚರಂಡಿ (ಡ್ರೈನ್ಸ್‌) ತೆರವು ಮಾಡಿದರೆ ಬಾಗ್ಮನೆ ಮತ್ತು ಸಮೀಪ ಇರುವ ಕಡೆ ಪ್ರವಾಹದ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿತ್ತು.

ಆ ಮನವಿ ಪರಿಗಣಿಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು, ಪ್ರಾಧಿಕಾರಗಳು ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ಕಾನೂನು ಪ್ರಕಾರ ಮುಂದುವರಿಯಬೇಕು. ಡ್ರೈನ್ಸ್‌ ತೆರೆದರೆ ಪ್ರವಾಹದ ನೀರು ತುಂಬಿಕೊಳ್ಳಬಹುದು ಎಂಬ ಆತಂಕ ದೂರುದಾರರಲ್ಲಿದೆ. ಇದರಿಂದ ಪ್ರಾಧಿಕಾರಗಳು ತಾರತಮ್ಯದಿಂದ ಡ್ರೈನ್‌ ತೆರವುಗೊಳಿಸಬಾರದು. ಪ್ರಕರಣವನ್ನು ಮೂರು ವಾರ ಮುಂದೂಡಲಾಗಿದೆ ಎಂದು ತಿಳಿಸಿ ಸೆ.12ರಂದು ಆದೇಶ ಮಾಡಿದ್ದರು.

ಅಸಂವಿಧಾನಿಕ ಆದೇಶ: ಹಿರೇಮಠ್‌
ಲೋಕಾಯುಕ್ತರ ಆದೇಶವನ್ನು ಪ್ರಶ್ನಿಸಿರುವ ಎಸ್‌.ಆರ್‌.ಹಿರೇಮಠ್‌, ಈ ಪ್ರಕರಣದಲ್ಲಿ ಲೋಕಾಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ದೂರಿನ ವಿಚಾರಣೆ ನಡೆಸಿ ಆದೇಶ ಮಾಡಿದ್ದಾರೆ. ಇಂತಹ ಆದೇಶ ಮಾಡುವ ಅಧಿಕಾರ ಹೈಕೋರ್ಟ್‌ಗೆ ಇದೆ. ಹಾಗಾಗಿ, ಲೋಕಾಯುಕ್ತರ ಆದೇಶವು ಅಸಾಂವಿಧಾನಿಕವಾಗಿದೆ. ಹೈಕೋರ್ಟ್‌ಗಳ ಅಧಿಕಾರವನ್ನು ದುರ್ಬಲಗೊಳಿಸುವ ಅಥವಾ ಪ್ರಶ್ನಿಸುವುದೇ ಆಗಿದೆ. ನ್ಯಾಯಾಲಯಕ್ಕೆ ಪರ್ಯಾಯವಾದ ಶಕ್ತಿ ರಚನೆಗೆ ಸಮನಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ನ್ಯಾಯಾಂಗ ತನಿಖೆ: ಸಿಎಂ ಬೊಮ್ಮಾಯಿ

ಬಾಗ್ಮನೆ  ಟೆಕ್‌ಪಾರ್ಕ್ ವಿರುದ್ಧ ಬಲವಂತದ ಕ್ರಮ ಬೇಡ ಎಂದಿದ್ದ ಹೈಕೋರ್ಟ್
ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್‌ ನಿರ್ಮಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ‘ಬಾಗ್ಮನೆ ಟೆಕ್ ಪಾರ್ಕ್’ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್‌ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು.

ಬೆಂಗಳೂರು ನಗರ ಜಿಲ್ಲೆಯಲ್ಲಿ 39 ಸಾವಿರ ಎಕರೆ ಸರ್ಕಾರಿ ಜಾಗ ಒತ್ತುವರಿ: ಅಶೋಕ್‌

ರಾಜಕಾಲುವೆ ಒತ್ತುವರಿ ಮಾಡಿದೆ ಎಂದು ಆರೋಪಿಸಿ ಜಾಗ ತೆರವಿಗೆ ಪಾಲಿಕೆ ಗುರುತು ಮಾಡಿರುವದನ್ನು ಪ್ರಶ್ನಿಸಿ ಬಾಗ್ಮನೆ ಟೆಕ್‌ಪಾರ್ಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತ್ತು. ಅಲ್ಲದೆ, ಸರ್ವೆ ಮತ್ತು ಭೂದಾಖಲೆಗಳ ಇಲಾಖೆಯ ವರದಿಗೆ ಬಾಗ್ಮನೆ ಟೆಕ್‌ಪಾರ್ಕ್ನಿಂದ ಪ್ರತಿಕ್ರಿಯೆ ಬರುವವರೆಗೂ ಕ್ರಮಕ್ಕೆ ಮುಂದಾಗಬಾರದು. ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಪಡಿಸಿತ್ತು.

click me!