ಚಿಕ್ಕಮಗಳೂರು ವಿದ್ಯಾರ್ಥಿನಿ ರಕ್ಷಿತಾ ಹೃದಯ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ

By Suvarna NewsFirst Published Sep 22, 2022, 8:19 PM IST
Highlights

ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ರಕ್ಷಿತಾ. ಹೃದಯ ಏರ್ಲಿಫ್ಟ್ ಮೂಲಕ ಬೆಂಗಳೂರಿಗೆ, ಕಣ್ಣು-ಕಿಡ್ನಿ-ಯಕೃತ್ ಝೀರೋ ಟ್ರಾಫಿಕ್ನಲ್ಲಿ ಮಂಗಳೂರಿಗೆ. ಹೃದಯ 12 ವರ್ಷದ ಬಾಲಕಿಗೆ ಮರುಜೀವ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಸೆ.22): ಬಸ್ಸಿಂದ ಬಿದ್ದು ಮೆದುಳು ನಿಷ್ಕ್ರೀಯತೆಗೊಳಗಾಗಿದ್ದ ವಿದ್ಯಾರ್ಥಿನಿಯ ಅಂಗಾಂಗಗಳನ್ನು ಸುಮಾರು 30 ಕ್ಕೂ ಹೆಚ್ಚು ತಜ್ಞ ವೈದ್ಯರು, ಸಿಬ್ಬಂದಿಗಳ ತಂಡ ಸುರಕ್ಷಿತವಾಗಿ ಹೊರ ತೆಗೆಯುವ ಮೂಲಕ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದರೊಂದಿಗೆ ಕಾಫಿನಾಡಿನ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಸಾವಿನಲ್ಲೂ ಸಾರ್ಥಕತೆ ಮೆರೆದರು. ಬೆಂಗಳೂರು, ಮಂಗಳೂರು ಹಾಗೂ ಮಣಿಪಾಲ್ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ವೈದ್ಯರ ಸಹಕಾರದೊಂದಿಗೆ ಸತತ 6 ಗಂಟೆಗಳ ಪ್ರಯತ್ನ ನಡೆಸಿ ಮೊದಲು ರಕ್ಷಿತಾಳ ಹೃದಯವನ್ನು ತೆಗೆದು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ರವಾನಿಸಿದರು. ನಂತರ ಲಿವರ್ ಅನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಕಿಡ್ನಿಗಳನ್ನು ಮಣಿಪಾಲ್‌ನ ಕೆಎಂಸಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ರಸ್ತೆ ಮೂಲಕ ರವಾನಿಸಲಾಯಿತು. ರಕ್ಷಿತಾಳ ಕಣ್ಣುಗಳನ್ನು ಮಾತ್ರ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಲಾಗಿದ್ದು, ಅಗತ್ಯವಿರುವರಿಗೆ ಜೋಡಿಸಲು ತೀರ್ಮಾನಿಸಲಾಗಿದೆ. ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಅಂಗಾಗಗಳನ್ನು ತೆಗೆಯುವ ಪ್ರಕ್ರಿಯೆ ಆರಂಭವಾಯಿತು. ಹಿಂದಿನ ದಿನ ರಾತ್ರಿಯೇ ಬೆಂಗಳೂರು, ಮಂಗಳೂರು ಹಾಗೂ ಮಣಿಪಾಲ್ನಿಂದ ಆಗಮಿಸಿದ್ದ ವೈದ್ಯರ ಪ್ರತ್ಯೇಕ ತಂಡಗಳು ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದವು. ಬೆಳಗ್ಗೆ 11 ಗಂಟೆ ವೇಳೆಗೆ ಹೃದಯವನ್ನು ಬೇರ್ಪಡಿಸಲಾಯಿತು. ಕೇವಲ ಐದೇ ನಿಮಿಷದಲ್ಲಿ ಜೀವಂತ ಹೃದಯವಿದ್ದ ಬಾಕ್ಸ್‌ ಅನ್ನು ಆಂಬುಲೆನ್ಸ್ನಲ್ಲಿ ಐಡಿಎಸ್ಜಿ ಕಾಲೇಜು ಹೆಲಿಪ್ಯಾಡ್ಗೆ ಕೊಂಡೊಯ್ಯಲಾಯಿತು. 

ಅಲ್ಲಿಂದ ಬೆಳಗ್ಗೆಯೇ ಬೆಂಗಳೂರಿನಿಂದ ಬಂದಿದ್ದ ಹೆಲಿಕಾಪ್ಟರ್ ಹೃದಯವನ್ನು ಹೊತ್ತು ಬೆಂಗಳೂರಿನತ್ತ ಸಾಗಿತು.ಬೆಂಗಳೂರಿನಲ್ಲಿ 12 ವರ್ಷದ ಬಾಲಕಿಗೆ  ಆ ಹೃದಯ ಮರುಜೀವ ನೀಡಿದೆ. ಅದರ ಬೆನ್ನಲ್ಲೇ ಮಂಗಳೂರು ಕೆಎಂಸಿ ಆಸ್ಪತ್ರೆ ವೈದ್ಯರ ತಂಡ ಲಿವರ್ನ್ನು ಸುರಕ್ಷಿತವಾಗಿ ತೆಗೆದು 11.45 ರ ವೇಳೆಗೆ ಆಂಬುಲೆನ್ಸ್ನಲ್ಲಿ ಮಂಗಳೂರಿನತ್ತ ಹೊತ್ತು ಸಾಗಿದರು. ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಮುಗಿಯುವವರೆಗೆ ಜಿಲ್ಲಾ ಪೊಲೀಸ್ ವತಿಯಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.ಅದಾದ ಕೆಲವೇ ನಿಮಿಷಗಳಲ್ಲಿ ಮಣಿಪಾಲ್ ಕೆಎಂಸಿ ವೈದ್ಯರು ಕಿಡ್ನಿಗಳನ್ನು ತೆಗೆದು ಸಾಗಿಸಿದರು. ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ವೈದ್ಯರು ಕಣ್ಣುಗಳನ್ನು ತೆಗೆದು ಸಂರಕ್ಷಿಸಿಟ್ಟಿದ್ದಾರೆ.

ಹೊಂದಾಣಿಕೆ ಆಗದ ಶ್ವಾಸಕೋಶ: ರಕ್ಷಿತಾಳ ಶ್ವಾಸಕೋಶವನ್ನು ಚೆನ್ನೈನ ರೋಗಿಯೊಬ್ಬರಿಗೆ ಅಳವಡಿಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಕಾನೂನಿನ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಲಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ರಕ್ಷಿತಾಳ ಶ್ವಾಸಕೋಶವು, ಚೆನ್ನೈನ ರೋಗಿಗೆ ಹೊಂದಾಣಿಕೆ ಆಗುವುದಿಲ್ಲ ಎನ್ನುವ ಮಾಹಿತಿಯನ್ನು ಅಲ್ಲಿನ ವೈದ್ಯರು ರವಾನಿಸಿದ ಹಿನ್ನೆಲೆಯಲ್ಲಿ ಅದನ್ನು ತೆಗೆಯದಿರಲು ತೀರ್ಮಾನಿಸಲಾಯಿತು.

ರಕ್ಷಿತಾಳ ಪ್ರತಿ ಅಂಗಾಂಗವನ್ನು ಆಂಬುಲೆನ್ಸ್ನಲ್ಲಿಟ್ಟು ಸಾಗಿಸುವಾಗ ಜಿಲ್ಲಾ ಆಸ್ಪತ್ರೆ ಬಳಿ ಸೇರಿದ್ದ ಆಕೆಯ ಸಬಂಧಿಕರು ಹಾಗೂ ಸಾರ್ವಜನಿಕರು ರಕ್ಷಿತಾ ಅಮರಳಾಗಲಿ ಎಂದು ಘೋಷಣೆ ಕೂಗಿ ಭಾವುಕವಾಗಿ ಬೀಳ್ಕೊಟ್ಟರು.ಅಂಗಾಂಗಳನ್ನು ಸಾಗಿಸುವಾಗ ಜೊತೆಯಲ್ಲೇ ನಿಂತಿದ್ದ ರಕ್ಷಿರಾಳ ತಾಯಿ ಲಕ್ಷ್ಮೀಬಾಯಿ ಹಾಗೂ ತಂದೆ ಶೇಖರ್ ನಾಯಕ್ ಮತ್ತು ಸಬಂಧಿಕರು ಗದ್ಗಧಿತರಾಗಿದ್ದರು. ಯಾರೊಂದಿಗೂ ಮಾತನಾಡದೆ ಮೌನಕ್ಕೆ ಶರಣಾಗಿದ್ದರು.

ಕಣ್ಣೀರು ಹಾಕಿದ ವಿದ್ಯಾರ್ಥಿಗಳು: ಹೃದಯ ಏರ್ಲಿಫ್ಟ್ ಆದರೆ, ಕಣ್ಣು-ಕಿಡ್ನಿ ಝೀರೋ ಟ್ರಾಫಿಕ್ನಲ್ಲಿ ಮಂಗಳೂರಿಗೆ ಹೋಯ್ತು. ಲಿವರ್ ಕೂಡ ಜೀರೋ ಟ್ರಾಫಿಕ್ನಲ್ಲಿ ಉಡುಪಿಗೆ ಹೋಗಿದೆ. ದಾರಿಯುದ್ಧಕ್ಕೂ ಜನ ಕೂಡ ರಕ್ಷಿತಾಳ ಆತ್ಮಕ್ಕೆ ಶಾಂತಿ ಕೋರಿ ಮತ್ತೊಂದು ಜೀವ ಉಳಿಯಲು ಶುಭಹಾರೈಸಿದರು. ಅಂಗಾಂಗ ಕಸಿ ಬಳಿಕ ರಕ್ಷಿತಾಳ ಮೃತದೇಹವನ್ನ ಸರ್ಕಾರಿ ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ಬಸವನಹಳ್ಳಿಯ ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕಿಟ್ಟು ಬಳಿಕ ಸ್ವಗ್ರಾಮ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದಲ್ಲಿ ಅಂತಿಮ ವಿಧಿ-ವಿಧಾನ ನಡೆಸಿದರು.

ಧಾರವಾಡ: ಸಾವಿನಲ್ಲೂ ಸಾರ್ಥಕತೆ, ಅಂಗಾಂಗ ದಾನ ಮಾಡಿದ ಮಹಿಳೆ

ಬಸವನಹಳ್ಳಿ ಕಾಲೇಜಿನಲ್ಲಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿದ್ಯಾರ್ಥಿನಿ ರಕ್ಷಿತಾ ಗೆ ಸಾವಿರಾರು ವಿದ್ಯಾರ್ಥಿನಿಯರು ಕಣ್ಣೀರಿನ ವಿದಾಯವನ್ನು ಹೇಳಿದರು. ಸ್ನೇಹಿತೆಯನ್ನು ಕಳೆದುಕೊಂಡು  ವಿದ್ಯಾರ್ಥಿನಿಯರು ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣೀರು ಹಾಕಿದರು.  ರಕ್ಷಿತಾಳ ಮೃತದೇಹ ನೋಡಿ ಶಿಕ್ಷಕರು ವಿದ್ಯಾರ್ಥಿನಿಯರು ಕಣ್ಣೀರಿಟ್ಟರು. ಮೃತದೇಹದ ಮುಂದೆ ರಕ್ಷಿತಾಳ ತಮ್ಮ ಅಭಿ ಹೇಳಿದ ಗೊಂಬೆ ಹೇಳುತೈತೆ ಹಾಡಿಗೆ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದರು.

ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಯಕೃತ್ ಅನ್ನು ಝೀರೋ ಟ್ರಾಫಿಕ್‌ನಲ್ಲಿ ಕೊಂಡೊಯ್ದ ವೈದ್ಯಕೀಯ ಸಿಬ್ಬಂದಿ

ನೂರಾರು ಕನಸುಗಳನ್ನು ಹೊತ್ತಿದ್ದ ರಕ್ಷಿತಾ ಬಾಯಿ ನಿಧನಕ್ಕೆ ಮರುಕಪಟ್ಟ ಜನರು, ಆಕೆ ತಾನು ಸಾವಪ್ಪಿ, ಏಳೆಂಟು ಮಂದಿಗೆ ಮರುಜೀವ ನೀಡಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಲು ಪ್ರಯತ್ನಿಸಿದರು. ಮಂಗಳೂರಿನ ಕೆಎಂಸಿ ವೈದ್ಯರ ತಂಡದಲ್ಲಿದ್ದ ಎನಪೋಯ ಆಸ್ಪತ್ರೆಯ ಡಾ.ನಿಶ್ಚಿತ್ ಮಾತನಾಡಿ, ಇದೊಂದು ಮಹತ್ವದ ದಿನ. ಇದನ್ನು ಸಾಧ್ಯವಾಗಿಸಲು ಸಹಕರಿಸಿದ ಚಿಕ್ಕಮಗಳೂರು ಜಿಲ್ಲಾಡಳಿತ, ಜಿಲ್ಲಾ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿನಿಯ ಪೋಷಕರನ್ನು ಅಭಿನಂದಿಸುತ್ತೇವೆ ಎಂದರು. ಸಾವಿನಲ್ಲೂ ಒಂಬತ್ತು ಜನರಿಗೆ ಜೀವ ನೀಡಿ ಹುಟ್ಟಿನ ಸಾರ್ಥಕತೆ ಮೆರೆದ ಆ ಯುವತಿಗೆ, ಎದೆಮಟ್ಟದ ಮಗಳ ಸಾವಿನ ನೋವಿನಲ್ಲೂ ಮತ್ತೊಂದಷ್ಟು ಜನರಿಗೆ ಜೀವ ನೀಡಿ ಒಂಬತ್ತು ಜನರಿಗೆ ಅಪ್ಪ-ಅಮ್ಮನಂತಾದ ಆಕೆಯ ಹೆತ್ತವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

click me!