ಹರಿಹರದಲ್ಲಿ ದಿಢೀರನೇ 10 ಕೊರೋನಾ ಪಾಸಿಟಿವ್‌ ಪತ್ತೆ

By Kannadaprabha News  |  First Published Jun 23, 2020, 8:43 AM IST

ಈವರೆಗೆ ಒಂದೇ ಒಂದು ಕೇಸ್‌ ಸಹ ಇಲ್ಲದಿದ್ದ ಹರಿಹರ ನಗರ, ತಾಲೂಕಿನಲ್ಲಿ ಒಟ್ಟು 10 ಕೊರೋನಾ ಪತ್ತೆಯಾಗಿವೆ. ಹರಿಹರದ ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಸೋಂಕಿತ ಮಹಿಳೆಯ ಗಂಡನ ಮನೆಯ 100 ಮೀಟರ್‌ ಪ್ರದೇಶವನ್ನು ಸೀಲ್‌ ಡೌನ್‌ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಜೂ.23): ತುಂಗಭದ್ರಾ ನದಿ ತಟದ ಪುರಾಣ ಪ್ರಸಿದ್ಧ ಹರಿಹರ ನಗರದ 6 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದೇ ತಾಲೂಕಿನ ರಾನಜಹಳ್ಳಿ ಗ್ರಾಮದ ಮೂವರಲ್ಲಿ ಸೋಂಕು ದೃಢಪಟ್ಟಿದ್ದು ತಾಲೂಕಿನ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ.

ಹರಿಹರ ತಾ. ರಾಜನಹಳ್ಳಿಯ ಒಬ್ಬ ಮಹಿಳೆ ಸೇರಿ ಮೂವರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಮಹಿಳೆ ಗಂಡನ ಮನೆ ಹರಿಹರ ನಗರದ ಶಿವಮೊಗ್ಗ ರಸ್ತೆಯಲ್ಲಿದ್ದು, ಪತಿ ಸೇರಿ ಆರು ಜನರಲ್ಲಿ ಸೋಂಕು ಇರುವುದು ಗೊತ್ತಾಗಿದೆ. ಈವರೆಗೆ ಒಂದೇ ಒಂದು ಕೇಸ್‌ ಸಹ ಇಲ್ಲದಿದ್ದ ಹರಿಹರ ನಗರ, ತಾಲೂಕಿನಲ್ಲಿ ಒಟ್ಟು 10 ಕೊರೋನಾ ಪತ್ತೆಯಾಗಿವೆ. ಹರಿಹರದ ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಸೋಂಕಿತ ಮಹಿಳೆಯ ಗಂಡನ ಮನೆಯ 100 ಮೀಟರ್‌ ಪ್ರದೇಶವನ್ನು ಸೀಲ್‌ ಡೌನ್‌ ಮಾಡಲಾಗಿದೆ.

Latest Videos

undefined

ಸೋಂಕಿತರ ಮನೆಯನ್ನು ಕೇಂದ್ರವಾಗಿಟ್ಟುಕೊಂಡು, ನಿಗದಿತ ಪ್ರದೇಶವನ್ನು ಸೀಲ್‌ ಡೌನ್‌ ಮಾಡಲಾಗಿದೆ. ಪೌರಾಯುಕ್ತರು, ಪೊಲೀಸ್‌, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ತೆರಳಿ, ಪರಿಶೀಲಿಸಿದರು. ಅಲ್ಲದೇ, ರಾಜನಹಳ್ಳಿ ಗ್ರಾಮಕ್ಕೂ ತಾಲೂಕು ಆಡಳಿತ, ಪೊಲೀಸ್‌, ಆರೋಗ್ಯಾಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು.

ಒಂದೂ ಪಾಸಿಟಿವ್‌ ಕೇಸ್‌ ಇಲ್ಲದಿದ್ದ ಹರಿಹರದಲ್ಲಿ ಏಕಾಏಕಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯು ಎರಡಂಕಿ ದಾಟಿರುವುದು ಆಡಳಿತ ಯಂತ್ರದ ಚಿಂತೆ ಹೆಚ್ಚಿಸಿದೆ. ನಗರ, ಗ್ರಾಮೀಣ ಪ್ರದೇಶವೆನ್ನದೇ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌, ಸ್ಯಾನಿಟೈಸರ್‌ ಕಡ್ಡಾಯವಾಗಿ ಬಳಸಬೇಕು. ಪದೇಪದೇ ಕೈಗಳನ್ನು ಸ್ಯಾನಿಟೈಸರ್‌ ಅಥವಾ ಸೋಪಿನಿಂದ ಸ್ವಚ್ಛ ಮಾಡಿಕೊಳ್ಳುವಂತೆ ತಿಳಿಸಲಾಯಿತು.

ದಾವಣಗೆರೆ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 38ಕ್ಕೆ ಏರಿಕೆ

ಪ್ರತಿಯೊಬ್ಬರೂ ಕೊರೋನಾ ವೈರಸ್‌ ನಿಯಂತ್ರಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್‌, ಆರೋಗ್ಯ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹರಿಹರ ನಗರದ ಶಿವಮೊಗ್ಗ ರಸ್ತೆ, ರಾಜನಹಳ್ಳಿ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ವಹಿಸಲು, ಮಾಸ್ಕ್‌ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಸರ ಅಥವಾ ಸೋಪಿನಿಂದ ಪದೇಪದೇ ಕೈ ತೊಳೆದುಕೊಳ್ಳಲು ಸೂಚಿಸಿದರು.

ತಹಸೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ಚಂದ್ರಮೋಹನ್‌, ನಗರಸಭೆ ಆಯುಕ್ತೆ ಲಕ್ಷ್ಮಿ, ಪೊಲೀಸ್‌ ಸಬ್‌ ಇನ್ಸಪೆಕ್ಟರ್‌ ಶೈಲಶ್ರೀ, ರಾಜಸ್ವ ನಿರೀಕ್ಷಕ ಆನಂದ್‌, ಗ್ರಾಮ ಲೆಕ್ಕಾಧಿಕಾರಿ ಎಚ್‌.ಜಿ.ಹೇಮಂತಕುಮಾರ, ಕಿರಿಯ ಆರೋಗ್ಯ ಸಹಾಯಕ ಎಂ.ವಿ.ಹೊರಕೇರಿ, ಎಸ್‌.ಎಸ್‌.ಬಿರಾದಾರ್‌, ನಗರಸಭೆ, ಪೊಲೀಸ್‌, ಆರೋಗ್ಯ, ತಾಲೂಕು ಆಡಳಿತ, ತಾಪಂ, ಗ್ರಾಪಂ ಅಧಿಕಾರಿಗಳು ಭೇಟಿ ನೀಡಿದ್ದರು.
 

click me!