ಒಂದೆಡೆ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು ಜಿಲ್ಲೆಯನ್ನೇ ಹೈರಾಣು ಮಾಡುತ್ತಿದ್ದರೆ, ಇನ್ನೊಂದೆಡೆ ಸಾಂಕ್ರಮಿಕ ಡೆಂಘೀ ಕಾಯಿಲೆಯೂ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದರೆ, ಜನರನ್ನು ಆತಂಕ್ಕೀಡು ಮಾಡಿದೆ.
ಉಡುಪಿ(ಜೂ.23): ಒಂದೆಡೆ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು ಜಿಲ್ಲೆಯನ್ನೇ ಹೈರಾಣು ಮಾಡುತ್ತಿದ್ದರೆ, ಇನ್ನೊಂದೆಡೆ ಸಾಂಕ್ರಮಿಕ ಡೆಂಘೀ ಕಾಯಿಲೆಯೂ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದರೆ, ಜನರನ್ನು ಆತಂಕ್ಕೀಡು ಮಾಡಿದೆ.
ಹಾಗೇ ನೋಡಿದರೆ ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಡೆಂಘೀ ನಿಯಂತ್ರಣದಲ್ಲಿದೆ. ಆದರೆ ಈ ಬಾರಿ ಮಾತ್ರ ಡೆಂಘೀ ಪ್ರಕರಣಗಳು ಹಿಂದಿನ ವರ್ಷಗಳಿಗಿಂತ ಹೆಚ್ಚಾಗುವ ಲಕ್ಷಣಗಳು ಈಗಾಗಲೇ ಕಂಡುಬಂದಿವೆ. ಇದಕ್ಕೆ ಆರೋಗ್ಯ ಇಲಾಖೆಯ ಪೂರ್ಣ ಗಮನ ಕೊರೋನಾ ಸೋಂಕಿನತ್ತ ತಿರುಗಿರುವುದು ಕಾರಣವಿರಬಹುದು.
ಸೋಂಕಿನ ಮೂಲವೇ ನಿಗೂಢ: ಸಮುದಾಯಕ್ಕೆ ಕೊರೋನಾ!
2018ರಲ್ಲಿ ಜನವರಿ-ಮೇ ವರೆಗೆ 5 ತಿಂಗಳಲ್ಲಿ 41 ಡೆಂಘೀ ಪ್ರಕರಣಗಳು, 2019ರಲ್ಲಿ 5 ತಿಂಗಳಲ್ಲಿ 53 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಆದರೆ ಈ ವರ್ಷ ಈ 5 ತಿಂಗಳಲ್ಲಿ 72 ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಆರೋಗ್ಯ ಇಲಾಖೆಗೂ ಜಿಲ್ಲೆಯ ಜನತೆಗೂ ಸ್ವಲ್ಪಮಟ್ಟಿನ ಕಳವಳಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ 2018ರಲ್ಲಿ ಪರೀಕ್ಷೆ ಮಾಡಲಾದ 3974 ಮಂದಿಯಲ್ಲಿ 228 (ಶೇ.5.73), 2019ರಲ್ಲಿ ಪರೀಕ್ಷೆ ಮಾಡಲಾದ 5294 ಮಂದಿಯಲ್ಲಿ 280 (ಶೇ.5.28) ಮಂದಿಗೆ ಡೆಂಘೀ ಇರುವುದು ಪತ್ತೆಯಾಗಿತ್ತು. ಈ ವರ್ಷ 5 ತಿಂಗಳಲ್ಲಿ 1058 ಮಂದಿಯನ್ನು ಪರೀಕ್ಷಿಸಲಾಗಿದ್ದು 72 (ಶೇ.6.80) ಮಂದಿಗೆ ಡೆಂಘೀ ದೃಢಪಟ್ಟಿದೆ.
ಕೊರೋನಾ ಮುಗಿವವರೆಗೆ ಶಾಲೆ ಆರಂಭ ಬೇಡ, ಪೋಷಕರ ವಿರೋಧ!
ವಿಚಿತ್ರ ಎಂದರೆ ಡೆಂಘೀ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಹೆಚ್ಚು ಕಂಡು ಬರುತ್ತಿದೆ. ಅದರಲ್ಲೂ ಉಡುಪಿ ನಗರಸಭಾ ವ್ಯಾಪ್ತಿಯಲ್ಲೇ ಬಹುತೇಕ ಡೆಂಘೀ ಪ್ರಕರಣಗಳಿವೆ. ಇದಕ್ಕೆ ನಗರಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರು, ಅವರ ಜೋಪಡಿಗಳ ಅಸುಪಾಸಿನಲ್ಲಿ ಡೆಂಘೀ ಹರಡುವ ಸೊಳ್ಳೆಗಳು ಹುಟ್ಟುವುದೇ ಕಾರಣವಾಗಿದೆ.
ಉಡುಪಿ ಸುತ್ತಮುತ್ತಲಿನ ಹನುಮಂತನಗರ, ಕೊಡಂಕೂರು, ನಿಟ್ಟೂರು, ಪ್ರಗತಿನಗರ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರ ಕಾಲನಿಗಳಲ್ಲಿಯೇ ಡೆಂಘೀ ಹೆಚ್ಚು ಕಂಡುಬಂದಿವೆ.
ಒಟ್ಟಿನಲ್ಲಿ ಆರೋಗ್ಯ ಇಲಾಖೆಗೆ ಕೊರೋನಾದ ಜೊತೆಗೆ ಡೆಂಘೀ ಕೂಡ ಸವಾಲಾಗುತ್ತಿದೆ. ಆದರೆ ಆರೋಗ್ಯ ಇಲಾಖೆ ಈ ಸವಾಲನ್ನು ನಿರ್ಲಕ್ಷ್ಯ ಮಾಡದೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಜನತೆ ಕೂಡ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕಾಗಿದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಡೆಂಘೀ ಅಪಾಯವಾಗುವ ಸಾಧ್ಯತೆ ಇದೆ. ಮಕ್ಕಳು, ಗರ್ಭಿಣಿಯರು, ವೃದ್ಧರು, ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಈಗಾಗಲೇ ಡೆಂಘೀ ಪ್ರಕರಣಗಳು ಪತ್ತೆಯಾಗಬಹುದಾದ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ತಡೆಯುವುದಕ್ಕೆ ಫಾಗಿಂಗ್ ಇತ್ಯಾದಿ ಕ್ರಮ ಕೈಗೊಳ್ಳಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ನಡೆಯುತ್ತಿದೆ ಎಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ತಿಳಿಸಿದ್ದಾರೆ.
ಇಸವಿ ಪ್ರಕರಣ
2017 383
2018 228
2019 280
2020 72 (ಮೇ ವರೆಗೆ)
ಕಳೆದ ವರ್ಷ ಮಾರಕ ಡೆಂಘೀಯಿಂದ ನಲುಗಿಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಕೊರೋನಾ ನಡುವೆ ಮತ್ತೆ ಡೆಂಘೀ ಹಾವಳಿ ಶುರುವಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಶಂಕಿತ ಡೆಂಘೀಯಿಂದ ಜಿಲ್ಲೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ 1539 ಡೆಂಘೀ ಪ್ರಕರಣಗಳು ದಾಖಲಾಗಿದ್ದು, ಅವರಲ್ಲಿ ಐವರು ಡೆಂಘೀಯಿಂದಲೇ ಸಾವಿಗೀಡಾಗಿದ್ದರೆ, ಇಪ್ಪತ್ತಕ್ಕೂ ಹೆಚ್ಚು ಮಂದಿ ಶಂಕಿತ ಡೆಂಘೀಗೆ ಬಲಿಯಾಗಿದ್ದರು. ಈ ವರ್ಷ ಆರೋಗ್ಯ ಇಲಾಖೆಯ ಮಾಹಿತಿಯಂತೆ 114 ಖಚಿತ ಡೆಂಘೀ ಪ್ರಕರಣಗಳು ದಾಖಲಾಗಿದ್ದರೂ 250ಕ್ಕೂ ಹೆಚ್ಚು ಶಂಕಿತ ಡೆಂಘೀ ಪ್ರಕರಣಗಳು ಕಂಡುಬಂದಿವೆ ಎಂದು ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುತ್ತೂರಿನ ಬೆಟ್ಟಂಪಾಡಿ ಡೆಂಘೀ ಹಾಟ್‌ಸ್ಪಾಟ್ ಆಗಿದ್ದು, 40ಕ್ಕೂ ಅಧಿಕ ಪ್ರಕರಣಗಳು ಈ ಗ್ರಾಮವೊಂದರಲ್ಲೇ ಕಂಡುಬಂದಿವೆ.
-ಸುಭಾಶ್ಚಂದ್ರ ಎಸ್.ವಾಗ್ಳೆ