ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ, ಚಿಗುರಿದ ಆಸೆ..!

By Kannadaprabha News  |  First Published Sep 23, 2022, 6:30 AM IST

ಸೆ. 26ರಿಂದ 29ರ ವರೆಗೆ ಕೇಂದ್ರ ಸರ್ಕಾರದ ಸಮಿತಿಯಿಂದ ಅಧ್ಯಯನ, ಹಕ್ಕೊತ್ತಾಯ ಮಂಡಿಸಲು ಕೆಸಿಸಿಐಯಿಂದ ತಯಾರಿ


ಶಿವಾನಂದ ಗೊಂಬಿ

ಹುಬ್ಬಳ್ಳಿ(ಸೆ.23):  ಬಹುದಶಕಗಳ ಕನಸಾಗಿಸರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಅನುಷ್ಠಾನ ಸಂಬಂಧ ಅಧ್ಯಯನ ನಡೆಸಲು ಕೇಂದ್ರ ಸಮಿತಿ ಬರಲಿದೆ. ಅಧ್ಯಯನ ನಡೆಸುವ ಜತೆಗೆ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರೊಂದಿಗೆ ಅಭಿಪ್ರಾಯ ಸಂಗ್ರಹಿಸಲಿದೆ. ಇದು ಯೋಜನೆ ಬಗ್ಗೆ ಇಲ್ಲಿನ ನಾಗರಿಕರಲ್ಲಿ ಆಸೆ ಚಿಗುರಿದಂತಾಗಿದೆ. ಯೋಜನೆ ಪರವಾಗಿ ಸಮಿತಿಗೆ ಈ ಭಾಗದ ಸಂಘಟನೆಗಳು ತಮ್ಮ ಹಕ್ಕೊತ್ತಾಯ ಮಂಡಿಸಲು ಮುಂದಾಗಿವೆ.

Latest Videos

undefined

ಹೀಗಿರುತ್ತೆ ಅಧ್ಯಯನ:

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬುದು ದಶಕಗಳ ಬೇಡಿಕೆ. ಈ ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ 16 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಬೆಳವಣಿಗೆ ಜತೆ ಜತೆಗೆ ಅಭಿವೃದ್ಧಿಗೆ ಈ ಮಾರ್ಗ ಪೂರಕ. ಇದನ್ನು ಮಾಡಬೇಕೆಂಬ ಬೇಡಿಕೆ ಈ ಭಾಗದ ಜನರದ್ದಾದರೆ, ಉತ್ತರ ಕನ್ನಡ ಜಿಲ್ಲೆಯ ಪರಿಸರ ಪ್ರೇಮಿಗಳ ವಿರೋಧ ಇದಕ್ಕಿದೆ. ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಕಾನೂನು ಹೋರಾಟದ ಬಳಿಕ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯ ವಾಸ್ತವ ವರದಿ ಸಲ್ಲಿಸುವಂತೆ ಹೈಕೋರ್ಚ್‌ ‘ರಾಷ್ಟ್ರೀಯ ವನ್ಯಜೀವಿ ಮಂಡಳಿ’ಗೆ 10 ವಾರಗಳ ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಸಮಿತಿಯು ಸೆ. 26ರಿಂದ 28ರ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧ್ಯಯನ ನಡೆಸಲಿದೆ. 28ರಂದು ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಸೆ. 29ರಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಿದೆ. ಇದಕ್ಕಾಗಿ ಸಾರ್ವಜನಿಕರಿಂದ, ಸಂಘಟನೆಗಳಿಂದ ಸೆ. 21ರ ವರೆಗೆ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

Hubballi KIMS: ಸತತ 6 ಗಂಟೆ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರು!

ಯೋಜನೆ ಏನು?:

ಹುಬ್ಬಳ್ಳಿ-ಅಂಕೋಲಾ ಬರೋಬ್ಬರಿ 168 ಕಿಮೀ ಉದ್ದದ ಯೋಜನೆಯಿದು. ಈಗಾಗಲೇ . 117 ಕೋಟಿ ಖರ್ಚು ಮಾಡಿ ಹುಬ್ಬಳ್ಳಿ-ಕಲಘಟಗಿ ಮಧ್ಯೆ 47 ಕಿಮೀ ಮಾರ್ಗ ಅಭಿವೃದ್ಧಿಪಡಿಸಲಾಗಿದೆ. ಆದರೆ ಮುಂದೆ ಕಾಮಗಾರಿ ಸ್ಥಗಿತಗೊಂಡಿದೆ. ಈ ಯೋಜನೆಯಿಂದ 727 ಹೆಕ್ಟೇರ್‌ ಅರಣ್ಯ ನಾಶವಾಗುತ್ತದೆ ಎಂಬ ವಾದ ಪರಿಸರ ಪ್ರೇಮಿಗಳದ್ದು. 138 ಹೆಕ್ಟೇರ್‌ ಪ್ರದೇಶ ಮಾತ್ರ ಈ ಯೋಜನೆ ವ್ಯಾಪ್ತಿಗೆ ಬರುತ್ತದೆ. 105 ಕಿಮೀ ಅರಣ್ಯವಿಲ್ಲದ ಬಯಲು ಪ್ರದೇಶವಾಗಿದೆ. 20 ಕಿಮೀ ಸುರಂಗ ಮಾರ್ಗ ಬಂದರೆ, 20 ಕಿಮೀ ಅರಣ್ಯವಿಲ್ಲದ ಗುಡ್ಡಗಾಡು ಪ್ರದೇಶ. ಇನ್ನುಳಿದ 23 ಕಿಮೀ ಅರಣ್ಯ ಪ್ರದೇಶದಲ್ಲಿ ಬರುತ್ತದೆ. ಇದರಿಂದ 138 ಹೆಕ್ಟೇರ್‌ ಅರಣ್ಯ ಪ್ರದೇಶ ಬರುತ್ತದೆ. ಆದಕಾರಣ ಈ ಯೋಜನೆಗೆ ಅಡ್ಡಿಪಡಿಸಬೇಡಿ ಎಂಬ ಬೇಡಿಕೆ ಈ ಭಾಗದ್ದು.

ತಯಾರಿ ಏನು?:

ಇದೀಗ ಅಧ್ಯಯನ ನಡೆಸಲು ಸಮಿತಿ ಆಗಮಿಸುತ್ತಿರುವುದು ಮೂರು ದಿನಗಳಲ್ಲಿ 2 ದಿನ ಉತ್ತರ ಕನ್ನಡ ಜಿಲ್ಲೆ, ಒಂದು ದಿನ ಧಾರವಾಡ ಜಿಲ್ಲೆಯಲ್ಲೂ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಿದೆ. ಈ ಕಾರಣಕ್ಕಾಗಿ ಸಮಿತಿ ಮುಂದೆ ಯಾವ್ಯಾವ ವಿಷಯಗಳನ್ನು ಇಟ್ಟುಕೊಂಡು ತಮ್ಮ ಹಕ್ಕೊತ್ತಾಯ ಮಂಡಿಸಬೇಕೆಂಬ ಬಗ್ಗೆ ತಯಾರಿಯನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಇಲ್ಲಿನ ಮುಖಂಡರು, ಸಾರ್ವಜನಿಕ ಸಂಘಟನೆಗಳು ನಡೆಸಿವೆ. ಈ ಸಮಿತಿ ಹೈಕೋರ್ಚ್‌ಗೆ ವರದಿ ಸಲ್ಲಿಸಿದ ಬಳಿಕ ಈ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ. ಈ ಯೋಜನೆಯ ಅಗತ್ಯವೇನು? ಈ ಯೋಜನೆ ಜಾರಿಯಿಂದ ಇಡೀ ಉತ್ತರ ಕರ್ನಾಟಕಕ್ಕೆ ಎಷ್ಟೆಲ್ಲ ಅನುಕೂಲಗಳಾಗಿವೆ? ಅಭಿವೃದ್ಧಿಗೆ ಹೇಗೆ ಈ ಯೋಜನೆ ಪೂರಕವಾಗಲಿದೆ? ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವವಾಗಿ ಎಷ್ಟುಅರಣ್ಯ ಪ್ರದೇಶ ನಾಶವಾಗುತ್ತದೆ. ಅದಕ್ಕೆ ಪರ್ಯಾಯ ಏನು ಮಾಡಬೇಕು? ಎಂಬುದರ ಬಗ್ಗೆ ಸಮಿತಿಗೆ ಮನದಟ್ಟು ಮಾಡಿಕೊಡಲು ಸಂಘ-ಸಂಸ್ಥೆಗಳು ಮುಂದಾಗಿವೆ.

ಬಹುನಿರೀಕ್ಷಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಗೆ ಒಂದು ಹಂತ ಮುಂದೆ ಬಂದಂತಾಗಿರುವುದು ಈ ಭಾಗದ ಜನತೆಯಲ್ಲಿ ಆಸೆ ಚಿಗುರಿದಂತಾಗಿರುವುದಂತೂ ಸತ್ಯ.

Hubballi: ರಾಷ್ಟ್ರಪತಿ ಪೌರಸನ್ಮಾನಕ್ಕೆ ಭರದಿಂದ ತಯಾರಿ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪರಿಶೀಲನೆ, ಅಧ್ಯಯನಕ್ಕೆ ಕೇಂದ್ರದ ಸಮಿತಿಯು ಆಗಮಿಸಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನ ಪ್ರವಾಸ ಮುಗಿಸಿಕೊಂಡು ಸೆ. 29ಕ್ಕೆ ಧಾರವಾಡ ಜಿಲ್ಲೆಗೆ ಆಗಮಿಸಲಿದೆ. ಇಲ್ಲೂ ಈ ವಿಷಯವಾಗಿ ಯೋಜನೆಯ ಕುರಿತು ಸಭೆ ನಡೆಸಲಿದೆ ಅಂತ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. 

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅತ್ಯಗತ್ಯ. ಈ ವಿಷಯವಾಗಿ ಅಧ್ಯಯನ ನಡೆಸಲು ಸಮಿತಿ ಬಂದಿರುವುದು ಸಂತಸಕರ. ಈ ಯೋಜನೆಯಿಂದ ಲಾಭಗಳೇನು ಎಂಬುದನ್ನು ಸಮಿತಿಗೆ ಮನದಟ್ಟು ಮಾಡಿಕೊಡಲಾಗುವುದು ಅಂತ ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಹೇಳಿದ್ದಾರೆ. 
 

click me!