ಐಸೋಲೇಷನ್‌ನಲ್ಲಿದ್ದ ವಿದ್ಯಾರ್ಥಿನಿಯರು ಕಾಂಪೌಂಡ್‌ ಹಾರಿ ಪರಾರಿ ಆಗಲು ಯತ್ನ

By Kannadaprabha NewsFirst Published Apr 10, 2021, 8:16 AM IST
Highlights

ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆದ ಘಟನೆ| ಕಾಂಪೌಂಡ್‌ ಜಿಗಿಯುವ ವಿಡಿಯೋ ವೈರಲ್‌| ಜಿಕೆವಿಕೆ ವಿದ್ಯಾರ್ಥಿ ನಿಲಯದ 20 ವಿದ್ಯಾರ್ಥಿಗಳು ಮತ್ತು 7 ಮಂದಿ ವಿದ್ಯಾರ್ಥಿನಿಯರಲ್ಲಿ ಕೊರೋನಾ ಸೋಂಕು ಪತ್ತೆ| ಹಾಸ್ಟೆಲ್‌ನಲ್ಲಿದ್ದ 2300 ವಿದ್ಯಾರ್ಥಿಗಳನ್ನು ಐಸೋಲೇಷನ್‌ನಲ್ಲಿ ಇರುವಂತೆ ಸೂಚನೆ| 

ಬೆಂಗಳೂರು(ಏ.10):  ಐಸೋಲೇಷನ್‌ನಲ್ಲಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿನಿಯರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(ಜಿಕೆವಿಕೆ) ಹಾಸ್ಟೆಲ್‌ ಕಾಂಪೌಂಡ್‌ ಹಾರಿ ಪರಾರಿಯಾಗಲು ಯತ್ನಿಸುತ್ತಿರುವ ವೀಡಿಯೋ ಶುಕ್ರವಾರ ವೈರಲ್‌ ಆದ ಘಟನೆ ನಡೆದಿದೆ.

ಕಳೆದ ಒಂದು ವಾರದ ಹಿಂದೆ ಜಿಕೆವಿಕೆ ವಿದ್ಯಾರ್ಥಿ ನಿಲಯದ 20 ವಿದ್ಯಾರ್ಥಿಗಳು ಮತ್ತು 7 ಮಂದಿ ವಿದ್ಯಾರ್ಥಿನಿಯರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿದ್ದ 2300 ವಿದ್ಯಾರ್ಥಿಗಳನ್ನು ಐಸೋಲೇಷನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೇ ಪ್ರತಿಯೊಬ್ಬರಿಗೂ ಕೋವಿಡ್‌ ಪರೀಕ್ಷೆ ನಡೆಯುತ್ತಿದ್ದು, ವರದಿ ಬರುವವರೆಗೂ ಎಲ್ಲರೂ ಐಸೋಲೇಷನ್‌ನಲ್ಲಿದ್ದು, ಆನ್‌ಲೈನ್‌ ತರಗತಿಗಳಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಆದರೆ, ಐಸೋಲೇಷನ್‌ನಲ್ಲಿ ಇರಲು ಸಾಧ್ಯವಾಗದ ಮೂರ್ನಾಲ್ಕು ಮಂದಿ ವಿದ್ಯಾರ್ಥಿನಿಯರು ಹಾಸ್ಟೆಲ್‌ ಕಾಂಪೌಂಡ್‌ ಹಾರಿ ತಮ್ಮ ಊರುಗಳಿಗೆ ಹೋಗಲು ಯತ್ನಿಸಿದ್ದರು. ಕೂಡಲೇ ಹಾಸ್ಟೆಲ್‌ ಭದ್ರತಾ ಸಿಬ್ಬಂದಿ ಅವರನ್ನು ವಾಪಸ್‌ ಕರೆತಂದಿದ್ದು, ಕೋವಿಡ್‌ ಪರೀಕ್ಷಾ ವರದಿ ಬಂದ ನಂತರ ತಮ್ಮ ಪೋಷಕರನ್ನು ಕರೆಯಿಸಿಕೊಂಡು ಅವರೊಂದಿಗೆ ಊರುಗಳಿಗೆ ತೆರಳುವಂತೆ ತಿಳಿಸಿದ್ದೆವು. ಇದೊಂದು ಘಟನೆ ಹೊರತುಪಡಿಸಿ ಯಾರು ಕೂಡ ಓಡಿಹೋಗಲು ಯತ್ನಿಸಿಲ್ಲ ಎಂದು ಕೃಷಿ ವಿವಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ಕೊರೋನಾ ಸ್ಫೋಟಕ್ಕೆ ವಲಸೆ ಕಾರ್ಮಿಕರೇ ಕಾರಣ'

ಕೃಷಿ ವಿವಿ ಸ್ಪಷ್ಟನೆ

ಘಟನೆ ಕುರಿತು ಕಿರು ವಿಡಿಯೋ ಬಿಡುಗಡೆ ಮಾಡಿರುವ ಜಿಕೆವಿಕೆ ಡೀನ್‌(ಕೃಷಿ) ಡಿ.ಎಲ್‌.ಸಾವಿತ್ರಮ್ಮ, ವಾರದ ಹಿಂದೆ 20 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಜಿಕೆವಿಕೆ ಆವರಣದಲ್ಲಿರುವ ಗೆಸ್ಟ್‌ಹೌಸ್‌ನಲ್ಲಿ ಸೋಂಕಿತರನ್ನು ಐಸೋಲೇಷನ್‌ ಮಾಡಲಾಗಿತ್ತು. ಜೊತೆಗೆ ಸೋಂಕಿತರೊಂದಿಗೆ ಒಟ್ಟಿಗೆ ಕುಳಿತ ಪಾಠ ಕೇಳಿದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಐಸೋಲೇಷನ್‌ ಮಾಡಿದ್ದೆವು. ಹಾಸ್ಟೆಲ್‌ನಲ್ಲಿ ಐಸೋಲೇಷನ್‌ನಲ್ಲಿ ಇದ್ದಂತರಿಗೆ ಪ್ರತ್ಯೇಕವಾಗಿ ಊಟ, ವಸತಿ ವ್ಯವಸ್ಥೆ ಮಾಡಲಾಗಿತ್ತು.

ಆದರೂ ಐಸೋಲೇಷನ್‌ನಲ್ಲಿ ಇದ್ದಂತ ಮೂರ್ನಾಲ್ಕು ವಿದ್ಯಾರ್ಥಿನಿಯರು ಊರಿಗೆ ಹೋಗಬೇಕೆಂದು ಅಧ್ಯಾಪಕರಿಗೆ ಗೊತ್ತಿಲ್ಲದಂತೆ ಕಾಂಪೌಂಡ್‌ ಹಾರಿದ್ದರು. ವಿಷಯ ತಿಳಿಯುತ್ತಿದ್ದಂತೆ ಆ ವಿದ್ಯಾರ್ಥಿನಿಯರನ್ನು ವಾಪಸ್‌ ಕರೆ ತರಲಾಗಿತ್ತು. ವಿದ್ಯಾರ್ಥಿಗಳು ಊರಿಗೆ ಹೋಗಲು ಇಚ್ಛಿಸಿದರೆ ಅವರ ಪೋಷಕರು ಬಂದು ಕರೆದುಕೊಂಡು ಹೋಗಬಹುದು. ಆದರೆ, ಅದಕ್ಕೂ ಮುನ್ನ ವಿವಿ ಆಡಳಿತ ಮಂಡಳಿಗೆ ಪತ್ರ ಬರೆದುಕೊಟ್ಟು ವಿದ್ಯಾರ್ಥಿಯನ್ನು ಕರೆದೊಯ್ಯುಬೇಕು ಎಂಬ ನಿಯಮ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಕೋವಿಡ್‌ ಪರೀಕ್ಷೆ

ಕಳೆದ ಮೂರು ದಿನಗಳಿಂದ ಜಿಕೆವಿಕೆಯ ಆರೋಗ್ಯಾಧಿಕಾರಿಗಳು ಮತ್ತು ಬಿಬಿಎಂಪಿ ಆರೋಗ್ಯ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಐಸೋಲೇಷನ್‌ ಮಾಡಿದ್ದು, ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆ ವರದಿಯಲ್ಲಿ ಪಾಸಿಟಿವ್‌ ಬಂದವರನ್ನು ಜಿಕೆವಿಕೆ ಆವರಣದಲ್ಲಿರುವ ಗೆಸ್ಟ್‌ಹೌಸ್‌ನಲ್ಲಿ ಐಸೋಲೇಷನ್‌ ಮಾಡಿ ಚಿಕಿತ್ಸೆ ನೀಡುತ್ತಿದ್ದೇವೆ. ಉಳಿದವರನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಐಸೋಲೇಷನ್‌ ಮಾಡಲಾಗಿದೆ. ಜಿಕೆವಿಕೆ ಆವರಣದ ಮೂರು ಕಡೆಗಳಲ್ಲಿ ನಿರಂತರವಾಗಿ ಕೋವಿಡ್‌ ಪರೀಕ್ಷೆ ನಡೆಯುತ್ತಿದೆ. ಜೊತೆಗೆ ಜಿಕೆವಿಕೆ ಆವರಣ ಮತ್ತು ತರಗತಿ ಕೊಠಡಿಗಳನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಿದ್ದೇವೆ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!