‘ಕೂಡಲೇ ರೇಷನ್‌ ಕಾರ್ಡ್‌ ಮರಳಿಸಲು ಸೂಚನೆ’

By Kannadaprabha NewsFirst Published Feb 29, 2020, 11:29 AM IST
Highlights

ಕೂಡಲೇ ನಿಮ್ಮ ರೇಷನ್ ಕಾರ್ಡ್‌ಗಳನ್ನು ವಾಪಸ್ ಮಾಡಿ. ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಕಠಿಣ ಸೂಚನೆ ನೀಡಿದ್ದಾರೆ. 

ಹಾಸನ [ಫೆ.29]: ರಾಜ್ಯಾದ್ಯಂತ ಕಾನೂನು ಬಾಹಿರವಾಗಿ ಉಳ್ಳವರು ಪಡೆದಿರುವ ಎಪಿಎಲ್‌, ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ಬರುವ ಏಪ್ರಿಲ್‌ ಒಳಗೆ ವಾಪಸ್‌ ನೀಡದಿದ್ದರೇ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ. ಗೋಪಾಲಯ್ಯ ಗಡುವು ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದೇ ವೇಳೆ ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ, ಜೋಳ ಖರೀದಿಸಲು ರೈತರು ಹೆಸರು ನೋಂದಣಿ ಮಾಡಿಸಲು ನಿಗದಿ ಮಾಡಿದ್ದ ದಿನಾಂಕ ಮಾಚ್‌ರ್‍ 15ರವರೆಗೆ ಮುಂದೂಡಲಾಗಿದೆ. ರೈತರು ಆನ್‌ಲೈನ್‌ ಮೂಲಕ ಸೂಕ್ತ ದಾಖಲೆಗಳೊಂದಿಗೆ ಹೆಸರನ್ನು ನೋಂದಣಿ ಮಾಡಿಸಬೇಕು ಎಂದರು.

ಏಪ್ರಿಲ್‌ ಒಳಗೆ ತಪ್ಪು ದಾಖಲೆ ನೀಡಿ ಪಡೆದಿರುವ ಕಾರ್ಡ್‌ ಹಿಂತಿರುಗಿಸದೆ ಪಡಿತರ ಪಡೆಯುವುದನ್ನು ಮುಂದುವರಿಸಿದರೇ ಪಡಿತರವನ್ನು ಹಿಂದಿನಿಂದ ಪಡೆದ ಪಡಿತರಕ್ಕೆ ತಗುಲುವ ಹಣವನ್ನು ವಸೂಲಿ ಮಾಡಿ ದಂಡ ವಿಧಿಸಲಾಗುವುದು. ಈ ವಿಚಾರಕ್ಕೆ ಹಂತ ಹಂತವಾಗಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆರಳ ತುದಿಯಲ್ಲೇ ಇದೆ ಭಾರೀ ಸಮಸ್ಯೆ!...

ಈಗಾಗಲೇ ರಾಜ್ಯಾದ್ಯಂತ ಕಾನೂನು ಬಾಹಿರವಾಗಿ ಪಡೆದಿದ್ದ 1 ಲಕ್ಷಕ್ಕೂ ಹೆಚ್ಚು ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗಳನ್ನು ವಶ ಪಡಿಸಿಕೊಂಡು, 96 ಲಕ್ಷ ಲಕ್ಷ ರು. ದಂಡ ವಿಧಿಸಲಾಗಿದೆ. ರಾಜ್ಯಾದ್ಯಂತ 1.27 ಕೋಟಿ ಕುಟುಂಬಗಳಿಗೆ ಪಡಿತರ ನೀಡಲಾಗುತ್ತಿದೆ. ಈ ಪೈಕಿ ಕೇಂದ್ರದಿಂದ 27 ಸಾವಿರ ಕುಟುಂಬಗಳಿಗೆ ಅಗತ್ಯವಾದ ಪಡಿತರ ನೀಡುವುದು ಕಡಿಮೆಯಾಗಿದೆ. ಅದನ್ನು ರಾಜ್ಯವೇ ಖರೀದಿಸಿ ವಿತರಿಸಲಾಗುತ್ತಿದೆ ಎಂದರು.

ಹೊಸದಾಗಿ ರಾಜ್ಯದಲ್ಲಿ 2.20 ಲಕ್ಷ ಬಿಪಿಎಲ್‌ ಕಾರ್ಡ್‌ ನೀಡಬೇಕಿದ್ದು, ಕೂಡಲೇ ಅರ್ಹರಿಗೆ ಮಾತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ನ್ಯಾಯ ಬೆಲೆ ಅಂಗಡಿಗಳು ಬೆಳಗ್ಗೆ 7 ರಿಂದ ರಾತ್ರಿ 9ರ ವರೆಗೆ ತೆರೆದು ಪಡಿತರವನ್ನು ಸೂಕ್ತ ರೀತಿಯಲ್ಲಿ ವಿತರಿಸುವ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪಡಿತರ ವಿತರಣೆಯಲ್ಲಿ ಅನ್ಯಾಯ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸದ್ಯಕ್ಕೆ ಮಾಚ್‌ರ್‍ ತಿಂಗಳ ವರೆಗೂ ಈ ಹಿಂದೆ ನೀಡುತ್ತಿರುವಂತೆಯೇ 7 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಬಗ್ಗೆ ಬಜೆಟ್‌ ಬಳಿಕ ಸಿಎಂ ಯಡಿಯೂರಪ್ಪ ರಾಜ್ಯದ ಜನರ ಅನುಕೂಲಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ರೇಷನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿದೆ. ಇಲ್ಲಿ ಸರ್ವರ್‌ ದೋಷದಿಂದ ಉಂಟಾಗಿದ್ದ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ನೋಂದಣಿ ದಿನಾಂಕ ಮುಂದೂಡಿಕೆ

ರಾಜ್ಯದಲ್ಲಿ ಬೆಂಬಲ ಬೆಲೆಯಲ್ಲಿ 1.75 ಲಕ್ಷ ಮೆಟ್ರಿಕ್‌ ಭತ್ತ, 2 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಮತ್ತು 1400 ಮೆಟ್ರಿಕ್‌ ಟನ್‌ ಜೋಳವನ್ನು ಖರೀದಿಸಲಾಗುತ್ತಿದೆ. ಫೆ.29ಕ್ಕೆ ರೈತರು ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಲು ಕೊನೆ ದಿನಾಂಕವಾಗಿತ್ತು. ಈಗ ಮಾಚ್‌ರ್‍ ರವರೆಗೆ ವಿಸ್ತರಿಸಲಾಗಿದೆ. ರೈತರು ಶೀಘ್ರವಾಗಿ ಹೆಸರನ್ನು ನೋಂದಣಿ ಮಾಡಬೇಕು ಎಂದು ಸಚಿವರು ಕೋರಿದರು.

ಕುಮಟಳ್ಳಿಗೆ ಸೂಕ್ತ ಸ್ಥಾನ:

ಶಾಸಕ ಮಹೇಶ್‌ ಕುಮಟಳ್ಳಿಯವರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಈ ಬಗ್ಗೆ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕುಮಟಳ್ಳಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂಬ ವಿಶ್ವಾಸ ಇದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಹೇಳಿದರು.

ಪೆಟ್ರೋಲ್‌ ಬಂಕ್‌ಗಳಲ್ಲಿ ಡಿಸೇಲ್‌ ಮತ್ತು ಪೆಟ್ರೋಲ್‌ ವಿತರಿಸುವ ವೇಳೆ ತೂಕ ಮತ್ತು ಅಳತೆಯಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.

- ಕೆ.ಗೋಪಾಲಯ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ

click me!