ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವ: ರೈತನ ಮಗಳಿಗೆ 15 ಚಿನ್ನದ ಪದಕ

By Kannadaprabha NewsFirst Published Feb 29, 2020, 11:20 AM IST
Highlights

ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವ| ಬಂಗಾರದ ಬೆಳೆ ತೆಗೆದ ರೈತನ ಮಗಳು| 15 ಚಿನ್ನದ ಗೆದ್ದ ಚಾಮರಾಜನಗರ ಜಿಲ್ಲೆಯ ಸಂತೆಮರ ಹಳ್ಳಿ ಗ್ರಾಮದ ಸುಷ್ಮಾ|ವಿದ್ಯಾರ್ಥಿನಿಯರ ಮೇಲುಗೈ|

ಬಾಗಲಕೋಟೆ(ಫೆ.29): ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಬಿಎಸ್ಸಿನಲ್ಲಿ 15 ಚಿನ್ನದ ಪದಕ ಪಡೆದು ಸುಷ್ಮಾ ಎಂ.ಕೆ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ.

ಚಾಮರಾಜನಗರ ಜಿಲ್ಲೆಯ ಸಂತೆಮರ ಹಳ್ಳಿ ಗ್ರಾಮದ ಸುಷ್ಮಾ ಸದ್ಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಬೀಜ ತಂತ್ರಜ್ಞಾನದ ಎಂಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿ ಅಧ್ಯಯನ ಮಾಡುತ್ತಿದ್ದಾಳೆ. ವಿದ್ಯಾರ್ಥಿನಿಯು ಬಿಎಸ್ಸಿ ಪದವಿಯನ್ನು ಮೈಸೂರಿನಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಒಟ್ಟು 15 ಬಂಗಾರದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ತಂದೆ ಕೃಷಿಕನಾಗಿದ್ದು ತನಗಿರುವ ಮೂರು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಜೀವನ ಕಂಡುಕೊಂಡಿದ್ದಾರೆ. ಪ್ರಮುಖವಾಗಿ ಬೂದಗುಂಬಳಕಾಯಿ, ಸೌತೆಕಾಯಿ, ಬೆಳೆದು ಆದಾಯ ಕಂಡುಕೊಂಡ ಈ ಕುಟುಂಬಕ್ಕೆ ಮಗಳ ಇಂದಿನ ಸಾಧನೆ ಸಂತೋಷಗೊಂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿಯೂ ಉತ್ತಮ ಸಾಧನೆ ಮಾಡಿರುವ ಸುಷ್ಮಾಗೆ ತೋಟಗಾರಿಕೆಯ ಶಿಕ್ಷಣದ ಬಗ್ಗೆ ತಂದೆ ಕುಮಾರ ಪ್ರೋತ್ಸಾಹಿಸಿದ್ದಾರೆ. ತಾವು ಅಷ್ಟೇನು ಶಿಕ್ಷಣವಂತರಲ್ಲದಿದ್ದರು ಸಹ ಮಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಿದ್ದಾರೆ. ಬರುವ ದಿನಗಳಲ್ಲಿ ಬೀಜ ತಂತ್ರಜ್ಞಾನದಲ್ಲಿ ಮತ್ತಷ್ಟು ಶೈಕ್ಷಣಿಕ ಪ್ರಗತಿ ಹೊಂದುವ ಆಸೆ ಸುಷ್ಮಾಗಿದೆ.

4 ಚಿನ್ನದ ಪದಕ ಪಡೆದ ಅನುಷಾ:

ಮಂಡ್ಯ ಜಿಲ್ಲೆಯ ಅನುಷಾ ತೋಟಗಾರಿಕೆ ವಿಜ್ಞಾನದ ಸ್ನಾತಕೋತ್ತರ ಪದವಿಯಲ್ಲಿ ಎಂಎಸ್ಸಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕಗಳೊಂದಿಗೆ 4 ಚಿನ್ನದ ಪದಕ ಪಡೆದಿದ್ದಾರೆ. ಅರ್ಧ ಎಕರೆ ಜಮೀನನ್ನು ಅವಲಂಬಿಸಿ ಜೀವನ ಕಂಡುಕೊಂಡ ಕುಟುಂಬದ ಕುಡಿ ಅನುಷಾ ತನ್ನ ಇತಿಮಿತಿಯ ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾಳೆ. ಶಿಕ್ಷಕರ ಸಹಕಾರ ಕುಟುಂಬದ ಸದಸ್ಯರು ಇಟ್ಟಭರವಸೆ ಹುಸಿಗೊಳಿಸಿಲ್ಲ. ನಂಬಿಕೆ ಆಕೆಯ ಮುಖದಲ್ಲಿ ಕಾಣುತಿತ್ತು.

ವಿದ್ಯಾರ್ಥಿನಿಯರದ್ದೇ ಮೇಲುಗೈ

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್‌ ಪಡೆದ ಐದು, ಸ್ನಾತಕೋತ್ತರ ಪಡೆದ ಹತ್ತು ಜನ ಹಾಗೂ ತೋಟಗಾರಿಕೆ ಪದವಿ ಪಡೆದ 14 ಜನ ವಿದ್ಯಾರ್ಥಿನಿಯರಿಗೆ ಬಂಗಾರದ ಪದಕ ನೀಡಿ ಗೌರವಿಸಲಾಯಿತು.

ತೋಟಗಾರಿಕೆ ಸಚಿವರು ಆಗಿರುವ ಸಹ ಕುಲಾ​ಧಿಪತಿ ಕೆ.ಸಿ.ನಾರಾಯಣಗೌಡ, ಘಟಿಕೋತ್ಸವದ ಮುಖ್ಯ ಅತಿಥಿ ಪ್ರೊ.ರಮೇಶ ಚಂದ್‌, ವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಶ ಅವರು ಬಂಗಾರ ಪದಕ ಪಡೆದ ವಿದ್ಯಾರ್ಥಿಗಳಿಗೆ ಶುಭಕೋರಿ ಪದಕಗಳನ್ನು ವಿತರಿಸಿದರು. ಹಣ್ಣು ವಿಜ್ಞಾನ, ಕೀಟ ಶಾಸ್ತ್ರ, ಜೈವಿಕ ತಂತ್ರಜ್ಞಾನ, ಔಷಧ​, ಸುಗಂ​ಧ ಬೆಳೆಗಳು, ಪುಷ್ಪ ಕೃಷಿ ಮೇಲೆ ಡಾಕ್ಟರೇಟ್‌ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಎಂಎಸ್ಸಿ ತೋಟಗಾರಿಕೆಯ ವಿದ್ಯಾರ್ಥಿಗಳು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಯಿತು. ಒಟ್ಟು 2789 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿವಿಧ ಪದವಿ, ಸ್ನಾತಕೋತ್ತರ, ಡಾಕ್ಟರೇಟ್‌ ಪಡೆದ ವಿವಿಯ ಬಂಗಾರ ಪದಕ ವಿಜೇತ 24 ಸಾಧಕರಲ್ಲಿ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿ​ಸಿದ್ದಾರೆ. ಡಾಕ್ಟರೇಟ್‌ ಪಡೆದ ಐವರಲ್ಲಿ, ನಾಲ್ವರು ವಿದ್ಯಾರ್ಥಿನಿಯರು, ಎಂಎಸ್ಸಿ ಸ್ನಾತಕೋತ್ತರದಲ್ಲಿ ಹತ್ತು ವಿದ್ಯಾರ್ಥಿಗಳಲ್ಲಿ ಎಂಟು ವಿದ್ಯಾರ್ಥಿನಿಯರು, ತೋಟಗಾರಿಕೆ ಬಿಎಸ್ಸಿ ಪದವಿ ಪಡೆದ ಬಂಗಾರದ ಪದಕ ಗಳಿಸಿದ 10 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿನಿಯರೆ ಸ್ವರ್ಣ ಪದಕಕ್ಕೆ ಭಾಜನರಾಗಿದ್ದಾರೆ

ವಿದ್ಯಾರ್ಥಿಗಳಿಗೆ ಅರ್ಥವಾಗದ ಸಚಿವ ಮಾತು

ಘಟಿಕೋತ್ಸವದಲ್ಲಿ ತೋಟಗಾರಿಕೆ ಸಚಿವರು ಸಹಕುಲಾ​ಪತಿಗಳಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಇತ್ತು. ಹೀಗಾಗಿ ಪದವಿ ಪ್ರದಾನ, ನಿರ್ದಿಷ್ಟ ಪರೀಕ್ಷೆಗಳಲ್ಲಿ ಪದವಿ ಪಡೆದವರಿಗೆ ಪ್ರಮಾಣ ಪತ್ರ ನೀಡುವ ಮುನ್ನ ಇವರ ಅನುಮತಿ ಪಡೆಯುವ ಪರಂಪರೆ ವಿವಿಯಲ್ಲಿ ಇರುವುದರಿಂದ ಸಚಿವರು ಆ ಕುರಿತು ಮುದ್ರಿತ ವಿಷಯವನ್ನು ಓದುವಾಗ ಬಹುತೇಕ ತಪ್ಪು ತಪ್ಪಾಗಿ ಓದಿದರು. ಪ್ರತಿ ಸಂದರ್ಭದಲ್ಲಿಯೂ ಸಚಿವರು ಓದುವ ಮುದ್ರಿತ ವಿಷಯವನ್ನು ತಪ್ಪಾಗಿ ಓದಿದರಲ್ಲದೆ, ಮುದ್ರಿತ ವಿಷಯವನ್ನು ಬಿಟ್ಟು ಬೇರೆ ಏನೋ ಹೇಳಿದಾಗ ಪದವಿ ಹಾಗೂ ಸ್ನಾತಕೋತ್ತರ ಪದವೀಧÜರರಿಗೆ ವಿಷಯ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಯಿತು. ನನ್ನಲಲ್ಲಿ ನಿಹಿತವಾಗಿರುವ ಅನ್ನುವ ಬದಲು ನಿಯತವಾಗಿ ಎನ್ನುವುದು, ಮತ್ತೊಂದು ಸಾರಿ ಡಾ.ಆಫ್‌ ಫಿಲಾಸಫಿ ಪ್ರದಾನ ಹಾಗೂ ಸ್ನಾತಕೋತ್ತರ ಎನ್ನುವುದನ್ನೆ ಬಿಟ್ಟು ಓದುತ್ತಿದ್ದರು. ಹೀಗಾಗಿ ಅಲ್ಲಿಯ ಸೇರಿದ್ದ ವಿದ್ಯಾರ್ಥಿಗಳಿಗೆ ಸಚಿವರು ಏನು ಮಾತನಾಡುತ್ತಿದ್ದಾರೆ ಎಂಬುವುದು ಅರ್ಥವಾಗದೇ ಮೂಕಪ್ರೇಕ್ಷರಾಗಿ ಕುಳಿತುಕೊಂಡಿದ್ದರು.

ನಾಡಗೀತೆ ಇಲ್ಲದ ಕಾರ್ಯಕ್ರಮ

ತೋಟಗಾರಿಕೆ ವಿಜ್ಞಾನಗಳ ವಿವಿಯು ಸರ್ಕಾರದ ಅನುದಾನ ಪಡೆಯುವ ಸಂಸ್ಥೆ, ಜೊತೆಗೆ ಅಲ್ಲಿ ನಡೆಯುವ ಕಾರ್ಯಕ್ರಮಗಳು ಸರ್ಕಾರದ ಶಿಷ್ಟಾಚಾರದ ಭಾಗವಾಗಿ ನಡೆಯುವ ಪದ್ಧತಿ ಇದೆಯಾದರೂ ಶುಕ್ರವಾರ ನಡೆದ 9ನೇ ಘಟಿಕೋತ್ಸವದಲ್ಲಿ ನಾಡಗೀತೆಯನ್ನು ಹಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಯಿತು. ಘಟಿಕೋತ್ಸವದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಗೂ ಕಾರ್ಯಕ್ರಮ ಮುಕ್ತಾಯದ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಮಾತ್ರ ನುಡಿಸಲಾಯಿತು. ನಾಡಗೀತೆಗೆ ಅವಕಾಶ ಮಾತ್ರ ಇರಲೇ ಇಲ್ಲ.
 

click me!