ಕಲಬುರಗಿಯಲ್ಲಿ ಏಮ್ಸ್ ಸ್ಥಾಪನೆಯ ಹಳೇ ಪ್ರಸ್ತಾವನೆ ಕೈಬಿಟ್ಟ ರಾಜ್ಯ ಸರ್ಕಾರ| ಹುಬ್ಬಳ್ಳಿ- ಧಾರವಾಡದಲ್ಲಿ ಏಮ್ಸ್ ಸಂಸ್ಥೆ ಕಟ್ಟುವ ಹೊಸ ಪ್ರಸ್ತಾವನೆ ಕೇಂದ್ರದ ಮುಂದಿಟ್ಟ ರಾಜ್ಯ| ರಾಜ್ಯದ ಮನವಿಯಂತೆ ಕೇಂದ್ರ ತಂಡದ ಭೇಟಿ, ನಿವೇಶನ ಪರಿಶೀಲನೆ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಫೆ.09): ಈಗಾಗಲೇ ಐಐಐಟಿ (ಕಲಬುರಗಿ), ಐಐಟಿ (ರಾಯಚೂರು)ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಕೈಜಾರಿ ಪರಿತಪಿಸುತ್ತಿರುವ ಹಿಂದುಳಿದ ಕಲ್ಯಾಣ ನಾಡು ಇದೀಗ ಕೇಂದ್ರದಿಂದ ಬರಬಹುದಾಗಿದ್ದ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ‘ಏಮ್ಸ್ (ಎಐಐಎಂಎಸ್) ಹೊಂದುವಲ್ಲಿಯೂ ಮುಗ್ಗರಿಸಿದೆ.
ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಏಮ್ಸ್ ಸ್ಥಾಪಿಸುವ/ ಸರ್ಕಾರಿ ವೈದ್ಯ ವಿದ್ಯಾಲಯಗಳನ್ನೇ ಈ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಕಲಬುರಗಿ ಇಎಸ್‌ಐಸಿ ವೈದ್ಯ ವಿದ್ಯಾಲಯಕ್ಕೆ ಏಮ್ಸ್ ಭಾಗ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಕೋರಿದ್ದ ರಾಜ್ಯ ಸರ್ಕಾರ ದಿಢೀರನೆ ತನ್ನ ನಿಲುವು ಬದಲಿಸಿ ಸದರಿ ಸಂಸ್ಥೆಯನ್ನು ಹುಬ್ಬಳ್ಳಿ- ಧಾರವಾಡಕ್ಕೆ ಕೊಡುವಂತೆ ಕೇಂದ್ರಕ್ಕೆ ಕೋರಿರುವ ಸಂಗತಿ ಬೆಳಕಿಗೆ ಬಂದಿದೆ.
ಏಮ್ಸ್‌ಗೆಂದೇ ರಾಜ್ಯ ಸರ್ಕಾರ ಹುಬ್ಬಳ್ಳಿ- ಧಾರವಾಡದಲ್ಲಿ ಹೊಸ ನಿವೇಶನ ತೋರಿಸಿದೆ. ರಾಜ್ಯದ ಮನವಿಯಂತೆ ಕೇಂದ್ರದ ಪರಿಣಿತರ ತಂಡವೊಂದು ಹುಬ್ಬಳ್ಳಿ- ಧಾರವಾಡಕ್ಕೆ ಭೇಟಿ ನೀಡಿ ಉದ್ದೇಶಿತ ಎಐಐಎಂಎಸ್ ಸ್ಥಾಪನೆಗಾಗಿರುವ ನಿವೇಶನದ ಪರಿಶೀಲನೆ ಸಹ ಮಾಡಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಅಶ್ವಿನ್ ಕುಮಾರ್ ಚೌಬೆ ಸಂಸತ್ತಿನಲ್ಲಿ ಸಂಸದೆ ಶೋಬಾ ಕರಂದ್ಲಾಜೆಯವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಈ ಬೆಳವಣಿಗೆ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜನರ ಏಮ್ಸ್ ಸಂಸ್ಥೆ ಹೊಂದುವ ಕನಸು ಛಿದ್ರ ಮಾಡಿದೆ. ರಾಜ್ಯ ಸರ್ಕಾರದ ಬದಲಾದ ಈ ನಿಲುವು ಶೈಕ್ಷಣಿಕವಾಗಿ ತುಂಬ ಹಿಂದುಳಿದ ನೆಲದ ಜನರ ಬಹುದಿನಗಳ ಬೇಡಿಕೆಗೇ ಮರ್ಮಾಘಾತ ನೀಡಿದೆ.
ಕಲಬುರಗಿ: ಕಲ್ಯಾಣದಲ್ಲಿ ಕಮಲ ಕಿಲಕಿಲ, ಸೌಲಭ್ಯ ವಿಲವಿಲ..!
1,400 ಕೋಟಿ ವೆಚ್ಚದಲ್ಲಿ ಕಟ್ಟಲಾಗಿರುವ ಕಲಬುರಗಿಯ ಇಎಸ್‌ಐಸಿ ಆಸ್ಪತ್ರೆ- ವೈದ್ಯವಿದ್ಯಾಲಯವನ್ನೇ ಏಮ್ಸ್ ಸಂಸ್ಥೆಯನ್ನಾಗಿ ಪರಿವರ್ತಿಸಬೇಕೆಂಬ ಪ್ರಸ್ತಾವನೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆ ತನ್ನ ಮುಂದಿದ್ದರೂ ಕೇಂದ್ರ ಆರೋಗ್ಯ ಸಚಿವಾಲಯ ಅದನ್ನು ಕೇಂದ್ರ ಅಂಗೀಕರಿಸಿರಲಿಲ್ಲ. ಆದರೀಗ ಏಕಾಏಕಿ ಕಲಬುರಗಿ ಇಎಸ್‌ಐಸಿಯನ್ನೇ ಏಮ್ಸ್ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನೇ ತಳ್ಳಿಹಾಕಲಾಗಿದೆ!
ಕಲ್ಯಾಣ ನಾಡಿಗೆ ಕೇಂದ್ರ ಸರ್ಕಾರದ ಸವಲತ್ತುಗಳು ಬಾರದೆ ಜಾರಿ ಹೋಗುತ್ತಲೇ ಇವೆ. ಹೀಗಾಗಿ ಈ ಭಾಗದ ಜನರಂತೂ ಈ ಬೆಳವಣಿಗೆ ಬಗ್ಗೆ ಕಳವಳಗೊಂಡಿದ್ದಾರೆ. ರೇಲ್ವೆ ಮೂಲ ಸವಲತ್ತಿನಲ್ಲೂ ಕಡೆಗಣನೆ, ಉನ್ನತ ಶಿಕ್ಷಣದ ಸಂಸ್ಥೆಗಳನ್ನು ಹೊಂದುವಲ್ಲಿಯೂ ಅವಗಣನೆ ಮುಂದುವರಿದಿರೋದರಿಂದ ಜನರೇ ಕೇಂದ್ರ- ರಾಜ್ಯ ಸರ್ಕಾರಗಳ ಈ ನಡೆಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಏಮ್ಸ್ ಸ್ಥಾಪನೆ ಕುರಿತಂತೆ ಕೇಳಿರುವ ಪ್ರಶ್ನೆಗೆ ಫೆ.5ರಂದು ಸಂಸತ್ತಿನಲ್ಲಿ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಲಿಕಿತ ಉತ್ತರ ನೀಡಿದ್ದು, ಅದರಲ್ಲಿ ಕರ್ನಾಟಕ ಸರ್ಕಾರ ಸಂಸ್ಥೆಯ ಸ್ಥಾಪನೆಗಾಗಿ ಹುಬ್ಬಳ್ಳಿ- ಧಾರವಾಡದಲ್ಲಿ ನಿವೇಶನ ನೀಡಿದೆ. ಕೇಂದ್ರ ತಂಡ ಅದನ್ನು ಪರಿಶೀಲನೆ ಮಾಡಿಯೂ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಲಬುರಗಿ ಪ್ರಸ್ತಾವನೆ ಇತ್ತಾದರೂ ಅದನ್ನು ಅಂಗೀಕರಿಸಿರಲಿಲ್ಲ ಎಂದು ಸಚಿವರು ಸ್ಪಷ್ಪಪಡಿಸಿದ್ದಾರೆ. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ದೇಶದುದ್ದಗಲಕ್ಕೂ 38 ಸಂಸ್ಥೆಗಳನ್ನು ಏಮ್ಸ್ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳು ಬಂದಿದ್ದವು, ಈ ಪೈಕಿ 28 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ ದೇಶದ ಹಲವೆಡೆಯಿಂದ 75 ಸಂಸ್ಥೆಗಳನ್ನು ಏಮ್ಸ್‌ಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಬಂದಿವೆ ಎಂದು ಸಚಿವರು ಉತ್ತರದಲ್ಲಿ ಹೇಳಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ರೇಲ್ವೆ ದೋಖಾ..!
ರಾಜಕೀಯ ಇಚ್ಚಾಶಕ್ತಿ ಬರ!
ಯುಪಿಎ ಸರ್ಕಾರದಲ್ಲಿ ಕಲಬುರಗಿಯವರೇ ಆಗಿದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾಗಿದ್ದಾಗ ಇಎಸ್‌ಐಸಿ ಕಲಬುರಗಿಗೆ ಒಲಿದಿತ್ತು. 1,400 ಕೋಟಿ ವೆಚ್ಚದ ಇಎಸ್‌ಐಸಿ ಮೆಡಿಕಲ್ ಹಬ್ ಮಂಜೂರಾದಾಗಲೇ ಇಲ್ಲಿನ ಜನ ಏಮ್ಸ್ ಕನಸು ಕಂಡಿದ್ದರು. ಮೆಡಿಕಲ್ ಕಾಲೇಜು, ಆಸ್ಪತ್ರೆ, ದಂತವೈದ್ಯ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕೋರ್ಸ್‌ಗಳು ಹೀಗೆ ಹಲವು ಹಂತಗಳಲ್ಲಿ ಇಎಸ್‌ಐಸಿ ಯೋಜನೆ ಅನುಷ್ಠಾನಗೊಂಡಾಗ ಇಂತಹ ಸೌಲಭ್ಯವನ್ನು ಏಮ್ಸ್ ದರ್ಜೆಗೇರಿಸಬೇಕೆಂಬ ಬೇಡಿಕೆ ಆಗಲೇ ಚಿಗುರೊಡೆದು ಹೋರಾಟದ ಸ್ವರೂಪ ತಾಳಿದಾಗ ರಾಜ್ಯ ಸರ್ಕಾರ ಅದನ್ನು ಪುರಸ್ಕರಿಸಿ ಕೇಂದ್ರಕ್ಕೂ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಈ ಭಾಗವನ್ನು ಕಾಉತ್ತಿರುವ ತೀವ್ರ ರಾಜಕೀಯ ಇಚ್ಚಾಶಕ್ತಿ ಬರದಿಂದಾಗಿ ಏಮ್ಸ್ ಕನಸು ಮುರುಟಿ ಹೋಗಿದೆ. ಕಲ್ಯಣ ನಾಡಿನ ಐವರು ಸಂಸದರು ಬಿಜೆಪಿಯವರೇ ಆಗಿದ್ದರೂ ಏಮ್ಸ್‌ನಂತಹ ಸಂಸ್ಥೆ ಕಲ್ಯಾಣದ ಕೈ ಜಾರಿದ್ದು ದುರಂತ ಎಂದು ಕೈ ಹೊಸಕಿಕೊಳ್ಳುತ್ತಿದ್ದಾರೆ.
ಕಲ್ಯಾಣ ನಾಡಿನ ದೌರ್ಭಾಗ್ಯ ಇದಾಗಿದೆ. ಈ ಮೊದಲೇ ಸರಿಯಾಗಿ ಸಂಪರ್ಕ ಸಾಧಿಸುವಲ್ಲಿ ಎಡವಿ ಇಲ್ಲಿಗೆ ಮಂಜೂರಾಗಿದ್ದ ಐಐಐಟಿ, ಐಐಟಿ ಕಳೆದುಕೊಂಡೆವು. ಈಗ ಸೌಲಭ್ಯವಿದ್ದರೂ ನಾವು ಏಮ್ಸ್ ಸಂಸ್ಥೆ ಹೊಂದುವಲ್ಲಿ ಎಡವಿದ್ದೇವೆ. ಇದು ಇಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆಗೆ ಕನ್ನಡಿ. ರಾಜ್ಯ ಬಿಜೆಪಿ ಸರ್ಕಾರ ಏಮ್ಸ್ ವಿಚಾರದಲ್ಲಿ ಪ್ರಸ್ತಾವನೆ ಬದಲಿಸಿ ಕಲಬುರಗಿ ಭಾಗಕ್ಕೆ ಧೋಕಾ ಮಾಡಿದೆ. ಇದು ಈ ಹಿಂದುಳಿದ ನೆಲದವರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಕಲಬುರಗಿ ನಗರದ ಸಾಫ್ಟವೇರ್ ಎಂಜಿನಿಯರ್/ ಸಾಮಾಜಿಕ ಕಾರ್ಯಕರ್ತ ಸುನೀಲ ಕುಲಕರ್ಣಿ ತಿಳಿಸಿದ್ದಾರೆ.