ಸಿದ್ದರಾಮುಲ್ಲಾ ಖಾನ್ ಹೇಳಿಕೆಗೆ ಸಿ ಟಿ ರವಿ ಮನೆಗೆ ಕಾಂಗ್ರೆಸ್ ಮುತ್ತಿಗೆ, ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡ

By Suvarna News  |  First Published Dec 3, 2022, 7:23 PM IST

ಕಾಫಿನಾಡಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಸಿ.ಟಿ.ರವಿ ಸಿದ್ದರಾಮಯ್ಯಗೆ ಸಿದ್ದರಾಮುಲ್ಲಾ ಖಾನ್ ಎಂದಿದ್ದನ್ನು ಖಂಡಿಸಿ ಕಾಂಗ್ರೆಸ್ ಸಿ.ಟಿ.ರವಿ ವಿರುದ್ಧ ಕೆಂಡವಾಗಿತ್ತು. ಹಾಗಾಗಿ, ಇಂದು  ಉಭಯ ಪಕ್ಷಗಳು ಪ್ರತಿಭಟನೆ  ನಡೆಸಿದ್ದರಿಂದ ಚಿಕ್ಕಮಗಳೂರು ನಗರದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಡಿ.3): ಕಾಫಿನಾಡಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಸಿ.ಟಿ.ರವಿ ಸಿದ್ದರಾಮಯ್ಯಗೆ ಸಿದ್ದರಾಮುಲ್ಲಾ ಖಾನ್ ಎಂದಿದ್ರು. ಆ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸಿ.ಟಿ.ರವಿ ವಿರುದ್ಧ ಕೆಂಡವಾಗಿತ್ತು. ಹಾಗಾಗಿ, ಇಂದು  ಕಾಂಗ್ರೆಸ್ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಬಂದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಯಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ  ಚಿಕ್ಕಮಗಳೂರು ನಗರದಲ್ಲಿ ಇಂದು ಸುಮಾರು ಒಂದೂವರೆ ಗಂಟೆಗಳ ಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಎರಡು ಪಕ್ಷಗಳ ಗುಂಪುಗಳನ್ನು  ಸ್ಥಳದಿಂದ ಚದುರಿಸಲು ಪೊಲೀಸರು ಹರ ಸಾಹಸ ಪಟ್ಟರು. ಆಗ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು, ಪೊಲೀಸರಿಗೆ ಪ್ರತಿರೋಧ ವ್ಯಕ್ತಪಡಿಸಿದರು. ಆಗ ಪೊಲೀಸರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆಗೊಳಿಸಿದರು.

Tap to resize

Latest Videos

ನಡು ರಸ್ತೆಯಲ್ಲಿ ನಾವಾ-ನೀವಾ ಅಂತ ಬಿಜೆಪಿ-ಕಾಂಗ್ರೆಸ್  ಕಾರ್ಯಕರ್ತರು 
ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸಿ.ಟಿ.ರವಿ ಅವರ ಮನೆಗೆ ಮುತ್ತಿಗೆ ಹಾಕಲು ಜಿಲ್ಲೆಯ ವಿವಿಧೆಡೆಯಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು. ಚಿಕ್ಕಮಗಳೂರು ತಾಲೂಕು ಕಚೇರಿ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಸೇರಬೇಕು, ನಂತರದಲ್ಲಿ ಅಲ್ಲಿಂದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶಾಸಕ ಸಿ.ಟಿ.ರವಿ ಅವರ ಮನೆಗೆ ಮುತ್ತಿಗೆ ಹಾಕಬೇಕೆಂದು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ತಡವಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ಗಣಪತಿ ದೇವಾಲಯದ ಎದುರು ತಡೆದರು. 

ಆದರೆ, ಕಾರ್ಯಕರ್ತರ ಸಂಖ್ಯೆ ಹೆಚ್ಚಿದ್ದರಿಂದ ಸುಮಾರು 10 ಮೀಟರ್ ದೂರದವರಿಗೆ ಮೆರವಣಿಗೆ ಸಾಗಿತು. ಇನ್ನು ಮುಂದೆ ಸಾಗಬೇಕೆನ್ನುಷ್ಟರಲ್ಲಿ ಶ್ರೀ ಓಂಕಾರೇಶ್ವರ ದೇವಾಯಲದ ಆವರಣದಿಂದ ರಾಜ್ಯ ಸ-ಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ನೇತೃತ್ವದಲ್ಲಿ ಬಿಜೆಪಿಯ ಕಾರ್ಯಕರ್ತರು ಬಸವನಹಳ್ಳಿ ರಸ್ತೆಗೆ ಎಂಟ್ರಿಯಾದರು. ಎರಡು ಪಕ್ಷಗಳ, ಪರ ವಿರೋಧ ಎರಡು ಗುಂಪುಗಳು ಮುಖಾಮುಖಿಯಾಗಿದ್ದು, ಪರಸ್ಪರ ಘೋಷಣೆ ಕೂಗಿದರು. ಆಗ ಸ್ಥಳದಲ್ಲಿಯೇ ಡಿವೈಎಸ್ಪಿ ನೇತೃತ್ವದಲ್ಲಿ ಬೆರಳೆಣಿಕೆಯಷ್ಟು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಹರ ಸಾಹಸ ಪಟ್ಟರು. ಕಡಿಮೆ ಸಂಖ್ಯೆಯಲ್ಲಿ ಇದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ವಾಹನದಲ್ಲಿ ಹತ್ತಿಸುವ ವೇಳೆಯಲ್ಲಿ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಹನ ಹತ್ತೋದಿಲ್ಲ ಎಂದು ಪಟ್ಟು ಹಿಡಿದರು. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರಿಂದ ಅವರನ್ನು ಸ್ಥಳದಿಂದ ಹಿಂದಕ್ಕೆ ಕಳುಹಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ: ಪೊಲೀಸರು ತಡೆದ ದಾರಿ ಮಧ್ಯದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗ ಸಭೆಯನ್ನು ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಮುರೊಳ್ಳಿ, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಮಹಡಿಮನೆ ಸತೀಶ್ ಮಾತನಾಡಿದರು. ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಲು ಸಿ.ಟಿ.ರವಿ ಅವರಿಗೆ ಯಾವುದೇ ನೈತಿಕತೆ ಇಲ್ಲ, ಪ್ರಬುದ್ಧರನ್ನು ಟೀಕಿಸಿದರೆ ಉನ್ನತ ಮಟ್ಟಕ್ಕೆ ಹೋಗುತ್ತೇನೆಂಬ ಅಹಂನಿಂದ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಬಹಿರಂಗ ಸಭೆಯ ಬಳಿಕ ಪೊಲೀಸರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಕರೆದುಕೊಂಡು ಹೋಗುವ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದರು.

ಬಿಜೆಪಿ ಸೇರಿದ ರೌಡಿ ಶೀಟರ್‌ ಪರ ಸಿ.ಟಿ. ರವಿ ಬ್ಯಾಟಿಂಗ್; ರೌಡಿಗಳಿಗೆ ಕ್ಲೀನ್‌ ಸರ್ಟಿಫಿಕೇಟ್‌!

ಕೆಲ ಹೊತ್ತಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಕಡೆಗೆ ಬ್ಯಾರಿಕೇಡ್‌ಗಳನ್ನು ತಳ್ಳಿ ನುಗ್ಗಲು ಯತ್ನಿಸಿದರು. ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಸುಮಾರು 100ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆಗೊಳಿಸಿದರು. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿದ್ದರು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬೆಳಿಗ್ಗೆ 11.30 ಕ್ಕೆಆರಂಭವಾದ ಪ್ರತಿಭಟನೆ, ಪರ ವಿರೋಧ ಘೋಷಣೆಗಳು ಮಧ್ಯಾಹ್ನ 1 ಗಂಟೆಯ ವೇಳೆಗೆ ಸಂಪೂರ್ಣವಾಗಿ ಹತೋಟಿಗೆ ಬಂದಿತು. ನಂತರ ಇಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿತ್ತು.

ಸಿದ್ರಾಮುಲ್ಲಾ ಖಾನ್ ಹೇಳಿಕೆ: ಸಿ.ಟಿ ರವಿ ನಿವಾಸದ ಬಳಿ ಕಾಂಗ್ರೆಸ್‌ ಪ್ರೊಟೆಸ್ಟ್

ಕೈ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ:
ಸಿದ್ರಾಮುಲ್ಲಾಖಾನ್ ಹೇಳಿಕೆ ನೀಡಿರುವುದನ್ನು ಖಂಡಿಸಿ ಶಾಸಕ ಸಿ.ಟಿ. ರವಿ ಅವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ತಾಲೂಕು ಕಚೇರಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟರು. ಆದರೆ, ಕಾಂಗ್ರೆಸ್ ಜಿಲ್ಲಾ ವಕ್ತಾರ ಹಿರೇಗಳೂರು ಪುಟ್ಟಸ್ವಾಮಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಶ್ರೀಕಾಂತ್, ಸಚಿನ್ ಸೇರಿದಂತೆ ಐದು ಮಂದಿ ಮುಖಂಡರು ಬೇರೊಂದು ಮಾರ್ಗದಲ್ಲಿ ಸಿ.ಟಿ. ರವಿ ನಿವಾಸದ ಬಳಿ ಹೋಗುತ್ತಿದ್ದಂತೆ ಶಾಸಕ ಮನೆಯೊಳಗೆ ಆವರಣದಲ್ಲಿದ್ದ ಬಿಜೆಪಿ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ಅವರಿಗೆ ಗಾಯವಾಗಿದೆ.

click me!