Bandipur: ಬೇಸಿಗೆಯಲ್ಲಿ ಜೀರೋ ಫೈರ್‌ಗೆ ಸೂಚನೆ

By Govindaraj SFirst Published Dec 3, 2022, 7:22 PM IST
Highlights

ಮುಂಬರುವ ಬೇಸಿಗೆಯಲ್ಲಿ ಬಂಡೀಪುರ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಬಂಧ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬಂಡೀಪುರ ಹುಲಿ ಯೋಜನೆ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶಕುಮಾರ್‌ ಸೂಚನೆ ನೀಡಿದ್ದಾರೆ. 

ಗುಂಡ್ಲುಪೇಟೆ (ಡಿ.03): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಅರಣ್ಯ ಹಾಗೂ ವನ್ಯಪ್ರಾಣಿ ಸಂಪತ್ತು ಬೇಸಿಗೆಯ ಕಾಲದಲ್ಲಿ ಸಂರಕ್ಷಿಸುವುದಕ್ಕಾಗಿ ಇಲಾಖೆ ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳ ಸಂಬಂಧ ಬಂಡೀಪುರ, ಗುಂಡ್ಲುಪೇಟೆ ಉಪ ವಿಭಾಗ ಬಂಡೀಪುರದಲ್ಲಿ ಹಾಗೂ ಹೆಡಿಯಾಲ ಉಪ ವಿಭಾಗ ಬೇಲದಕುಪ್ಪದೆ ಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತ್ಯೇಕವಾಗಿ ಎಸಿಎಫ್‌,ಆರ್‌ಎಫ್‌ಒ,ಗಸ್ತು ವನಪಾಲಕರು, ಅರಣ್ಯ ವೀಕ್ಷಕ ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಬಾರಿ ಬಂಡೀಪುರದಲ್ಲಿ ಜೀರೋ ಫೈರ್‌ ಮಾಡಲು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯಲ್ಲಿರುವ ಹೊಸ ಐಡಿಯಾ/ಪ್ಲಾನ್‌ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆದಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆಯಾಯ ವಲಯಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಕಾಡಂಚಿನಗಳ ಗ್ರಾಮಗಳ ಜನರ ಸಹಕಾರ ಪಡೆದು ಬೆಂಕಿ ಬೀಳದಂತೆ ಎಚ್ಚರಬೇಕು. ಗುಂಡ್ಲುಪೇಟೆ, ಬಂಡೀಪುರ, ಹೆಡಿಯಾಲ ಉಪ ವಿಭಾಗಗಳ ವಲಯಗಳ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು ಎಂದು ತಾಕೀತು ಮಾಡಿದರು. ವಲಯಗಳ ವಾಹನ,ಬಂದೂಕು, ನಿಸ್ತಂತು ಹಾಗೂ ಬೆಂಕಿ ಸಲಕರಣೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಳ್ಳಬೇಕು.ದಿನದ 24 ಗಂಟೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. 

Chamarajanagar: ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ ಹಿನ್ನೆಲೆ ಪೂರ್ವ ಸಿದ್ದತಾ ಸಭೆ

ಉಪ ವಿಭಾಗ ಹಾಗು ವಲಯವಾರು ಅ​ಧಿಕಾರಿ/ಸಿಬ್ಬಂದಿಯನ್ನೊಳಗೊಂಡ ವಾಟ್ಸಾಪ್‌ ಗ್ರೂಪ್‌ ಮಾಡಿಕೊಂಡು ಕಾಲ ಕಾಲಕ್ಕೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಬೆಂಕಿ ರಕ್ಷಣೆ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ಬೀದಿ ನಾಟಕ ಆಯೋಜಿಸಬೇಕು ಎಂದರು. ಬೇಸಿಗೆ ಹಿನ್ನಲೆ ಬೆಂಕಿ ತಡೆ ಸಂಬಂಧ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲ ಎಚ್ಚರವಹಿಸಬೇಕು.ಕಾಡಿಗೆ ಬೆಂಕಿ ಅವಘಡ ಸಂಭವಿಸದಂತೆ ನಿಗಾ ವಹಿಸಬೇಕು ಎಂದರು. ಎರಡು ಪ್ರತ್ಯೇಕ ಸಭೆಯಲ್ಲಿ ಬಂಡೀಪುರ ಎಸಿಎಫ್‌ ನವೀನ್‌,ಗುಂಡ್ಲುಪೇಟೆ ಎಸಿಎಫ್‌ ರವೀಂದ್ರ,ಹೆಡಿಯಾಲ ಎಸಿಎಫ್‌ ಕೆ.ಪರಮೇಶ್‌ ಸೇರಿದಂತೆ ಆಯಾಯ ವಲಯ ಅರಣ್ಯಾಧಿಕಾರಿಗಳಾದ ಶಶಿಧರ್‌,ನವೀನ್‌ಕುಮಾರ್‌, ನಾಗೇಂದ್ರನಾಯಕ, ಶ್ರೀನಿವಾಸನಾಯಕ, ಪುನೀತ್‌, ಸಿಬ್ಬಂದಿ ಇದ್ದರು.

Chamarajanagar: ಪೊಲೀಸ್‌ ಅಧಿಕಾರಿಗಳ ಅಮಾನತು ಖಂಡಿಸಿ ಪ್ರತಿಭಟನೆ

ಬಂಡೀಪುರದಿಂದ ಮಧ್ಯಪ್ರದೇಶಕ್ಕೆ ನಾಲ್ಕು ಸಾಕಾನೆ ರವಾನೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದ 4 ಸಾಕಾನೆಗಳನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಸೂಚನೆ ಮೇರೆಗೆ ಮಧ್ಯಪ್ರದೇಶಕ್ಕೆ ಹಸ್ತಾಂತರಿಸಲಾಗಿದೆ. ರಾಂಪುರ ಸಾಕಾನೆ ಶಿಬಿರದ ಕೃಷ್ಣ, ಗಜ, ಮಹರ್ಷಿ ಮತ್ತು ಪೂಜಾ ಹೆಸರಿನ ನಾಲ್ಕು ಆನೆಗಳನ್ನು ಮಧ್ಯ ಪ್ರದೇಶದ ಭೋಪಾಲ್‌ನ ಎಸಿಎಫ್‌ ಆಶಿಷ್‌ ಕೋಬ್ರಾಗಡೆ ಹಸ್ತಾಂತರಿಸಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದ ಹೊರಟ 4 ಸಾಕಾನೆಗಳನ್ನು ಪಶು ವೈದ್ಯಾಧಿಕಾರಿ ತಪಾಸಣೆಗೆ ಒಳಪಡಿಸಿದ ಬಳಿಕ ನಾಲ್ಕು ಸಾಕಾನೆ ಕೂಡ ಆರೋಗ್ಯವಾಗಿದೆ ಎಂದು ದೃಢಪಡಿಸಲಾಗಿದೆ. ಹಸ್ತಾಂತರ ಸಮಯದಲ್ಲಿ ಬಂಡೀಪುರ ಹುಲಿ ಯೋಜನೆ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ್‌, ಹೆಡಿಯಾಲ ಎಪಿಎಫ್‌ ಪರಮೇಶ್‌, ಕಲ್ಕರೆ ಆರ್‌ಎಫ್‌ಒ ಪುನೀತ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

click me!