ಉಡುಪಿ ಬಳಿಯ ಹೆಜಮಾಡಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೋರಾಟಕ್ಕೆ ಸ್ಥಳೀಯರ ಸಿದ್ಧತೆ. ಜಿಲ್ಲೆಯ ಸಮಾನ ಮನಸ್ಕ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು, ಸಂಸ್ಥೆಗಳಿಂದ ಟೋಲ್ ಆದೇಶದ ರದ್ದತಿ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಉಡುಪಿ (ಡಿ.3): ಉಡುಪಿ ಬಳಿಯ ಹೆಜಮಾಡಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹೋರಾಟ ಸಂಘಟಿತವಾಗುತ್ತಿದೆ . ಇಂದು ಸಮಾನ ಮನಸ್ಕ ವಿವಿಧ ಸಂಘಟನೆಗಳು, ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ನೀಡಿದ್ದು ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಹೆಸರಲ್ಲಿ ಜಿಲ್ಲಾಧಿಕಾರಿಗೆ ಮನವಿ ನೀಡಿದೆ. ಹೆಜಮಾಡಿ ಟೋಲ್ ಫ್ಲಾಜ಼ಾದಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಕ್ಕೆ ಅವಕಾಶ ನೀಡಬಾರದು, ತಕ್ಷಣವೇ ಜಿಲ್ಲಾಡಳಿತದ ಸಭೆ ನಡೆಸಬೇಕು ಎಂದು ಒತ್ತಾಯಿಸಿ ಮನವಿ ನೀಡಲಾಗಿದೆ.
ಹಲವು ವರ್ಷಗಳ ಸತತ ಹೋರಾಟದ ತರುವಾಯ ಸುರತ್ಕಲ್ ಟೋಲ್ ಗೇಟ್ ಮುಚ್ಚಲ್ಪಟ್ಟಿರುವುದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸಮಾಧಾನ ತಂದಿದೆ. ಏಳು ವರ್ಷಗಳ ಕಾಲ ಸುಂಕ ಸಂಗ್ರಹಿಸಿದ ಸುರತ್ಕಲ್ ಅಕ್ರಮ ಟೋಲ್ ಗೇಟ್ ನಿಂದ ಅತಿ ಹೆಚ್ಚು ತೊಂದರೆಗಳನ್ನು ಅನುಭವಿಸಿದ್ದು ಉಡುಪಿ ಜಿಲ್ಲೆಯ ಜನತೆ. ಮಂಗಳೂರು ನಗರವನ್ನು ಹೆಚ್ಚು ಅವಲಂಭಿಸಿರುವ ಉಡುಪಿ ಜಿಲ್ಲೆಯ ಜನರು ಪ್ರಯಾಣದ ಸಂದರ್ಭ 10 ಕಿ.ಮೀ. ಅಂತರದಲ್ಲಿ ಎರಡು ಕಡೆ ಟೋಲ್ ಕಟ್ಟುವ ಬಲವಂತಕ್ಕೆ ಒಳಗಾಗಿದ್ದರು. ಆದುದರಿಂದ ಸುರತ್ಕಲ್ ಟೋಲ್ ತೆರವು ಹೋರಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಇದೀಗ ಸುರತ್ಕಲ್ ಟೋಲ್ ಗೇಟ್ ಮುಚ್ಚುವ ಬೇಡಿಕೆ ಈಡೇರಿರುವ ಸಂದರ್ಭದಲ್ಲಿ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸಂಗ್ರಹಿಸುತ್ತಿದ್ದ ಮುಕ್ಕ, ನಂತೂರು ಪ್ರದೇಶದ 17 ಕಿ ಮೀ ಉದ್ದದ ರಸ್ತೆಯ ಸುಂಕವನ್ನು ಇನ್ನು ಮುಂದೆ ಹೆಜಮಾಡಿ ನವಯುಗ್ ಟೋಲ್ ಕೇಂದ್ರದಲ್ಲಿ ಸಂಗ್ರಹಿಸಲು ಆದೇಶ ಹೊರಡಿಸಿರುವುದು ಆತಂಕ ತಂದಿದೆ. ಹೆಜಮಾಡಿಯ ನವಯುಗ್ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆದೇಶ ಜಾರಿಯಾದಲ್ಲಿ ಎರಡೂ ಜಿಲ್ಲೆಯ ಜನರಿಗೆ ದೊಡ್ಡ ರೀತಿಯ ತೊಂದರೆ ಉಂಟಾಗಲಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಜನರ ಮೇಲೆ ಸುಂಕದ ಭಾರ ಅತ್ಯಂತ ಹೆಚ್ಚು ಭಾದಿಸಲ್ಪಡಲಿದೆ.
undefined
ಹೆಜಮಾಡಿ: ಸದ್ಯಕ್ಕಿಲ್ಲ ದುಪ್ಪಟ್ಟು ಟೋಲ್ ಸಂಗ್ರಹ
ದುಡಿಮೆಯ ಬಹುಪಾಲು ಹಣ ನಷ್ಟ: ಪಡುಬಿದ್ರೆಯಿಂದ ಮುಲ್ಕಿಯ 6 ಕಿ.ಮೀ ಏಕ ಮುಖ ಪ್ರಯಾಣಕ್ಕೆ ಕಾರಿನಲ್ಲಿ 100 ರೂ. ಪಾವತಿಸಬೇಕಾಗುತ್ತದೆ. ಇನ್ನು ಸ್ಥಳೀಯ ಕೆಂಪುಕಲ್ಲು, ಜಲ್ಲಿ ಮುಂತಾದ ನಿರ್ಮಾಣ ಸಾಮಾಗ್ರಿಗಳನ್ನು ಸುರತ್ಕಲ್, ಪಡುಬಿದ್ರೆ, ಕಾಪು, ಕಾರ್ಕಳ ಮಧ್ಯೆ ದಿನ ನಿತ್ಯ ಸಾಗಾಟ ಮಾಡುವ ವಾಹನಗಳ ಮೇಲೆ ಬೀಳುವ ದುಬಾರಿ ಟೋಲ್ ಸಾಮಾನ್ಯ ಜನರಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ರೀತಿ ಬೇರೆ ಬೇರೆ ಗೂಡ್ಸ್ ವಾಹನಗಳು, ಲೈನ್ ಸೇಲ್ ವಾಹನಗಳು ಸಣ್ಣ ಅಂತರದ ಈ ಪಟ್ಟಣಗಳ ನಡುವೆ ಪ್ರತಿದಿನ ಓಡಾಡುತ್ತವೆ. ಅವರ ದುಡಿಮೆಯ ಬಹುಪಾಲು ಟೋಲ್ ಗೇಟ್ ಗಳು ಕಬಳಿಸಿದಲ್ಲಿ ಅವರ ಬದುಕಿನ ಮೇಲೂ ದೊಡ್ಡ ಪರಿಣಾಮ ಆಗಲಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಟೋಲ್‌ಗೆ ಒಳಪಡದಿದ್ದರೂ ಶುಲ್ಕ ಪಾವತಿ: ಮುಕ್ಕ ಮತ್ತು ನಂತೂರು ರಸ್ತೆಗೆ ಸುರತ್ಕಲ್ ನಲ್ಲಿ ಟೋಲ್ ಸಂಗ್ರಹಿಸಲಾಗುತ್ತೊಇತ್ತು. ಆದರೆ, ಆ ರಸ್ತೆ ಆರಂಭಗೊಳ್ಳುವುದು ಹೆಜಮಾಡಿ ಟೋಲ್ ಪ್ಲಾಜಾದಿಂದ 10 ಕಿ ಮೀ ಅಂತರದ ನಂತರ. ಪಡುಬಿದ್ರೆ, ಉಡುಪಿ, ಕಾರ್ಕಳದಿಂದ ಮುಲ್ಕಿ, ಹಳೆಯಂಗಡಿ ಭಾಗಕ್ಕೆ ಬರುವವರು, ಅಥವಾ ಹಳೆಯಂಗಡಿ, ಮುಲ್ಕಿ ಭಾಗದಿಂದ ಉಡುಪಿ, ಕಾರ್ಕಳ ಕಡೆಗೆ ಪ್ರಯಾಣಿಸುವವರು ಸುರತ್ಕಲ್ ಟೋಲ್ ರಸ್ತೆಗೆ ಪ್ರವೇಶವನ್ನು ಮಾಡದೇ ಇದ್ದರೂ ಆ ರಸ್ತೆ ಬಳಕೆಯ ಸುಂಕವನ್ನು ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಕಟ್ಟಬೇಕಾಗುತ್ತದೆ. ಇದು ಯಾವ ನ್ಯಾಯ? ಯಾವ ನಿಯಮ ? ಎಂದು ಪ್ರಶ್ನಿಸಿದ್ದಾರೆ. ಮುಕ್ಕದಿಂದ ಹೆಜಮಾಡಿ ಭಾಗದ ರಸ್ತೆ ಮಾತ್ರ ನವಯುಗ್ ಅಧಿನದಲ್ಲಿದೆ. ಆ ಕಡೆಗೆ ಸುರತ್ಕಲ್, ನಂತೂರು ಭಾಗದ ರಸ್ತೆಗೂ ಹೆಜಮಾಡಿ ಟೋಲ್ ಪ್ಲಾಜಾಕ್ಕೂ ಯಾವುದೆ ಸಂಬಂಧ ಇಲ್ಲ. ನವಯುಗ್ ನಿರ್ವಹಿಸುವ ಉಡುಪಿ ಭಾಗದ ಹೆದ್ದಾರಿಯೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಇನ್ನೊಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸುವುದು ಎಷ್ಟು ಸರಿ? ಮಂಗಳೂರು ಭಾಗದ ಖಾಸಗಿ ವಾಹನಗಳಿಗೆ ಸುರತ್ಕಲ್ ಟೋಲ್ ಗೇಟ್ ನಲ್ಲಿ ಇದ್ದ ಟೋಲ್ ರಹಿತ ಪ್ರಯಾಣದ ಅವಕಾಶ ಹೆಜಮಾಡಿಯಲ್ಲಿ ಉಳಿಯಲಿದೆಯೆ? ಎಂಬ ಪ್ರಶ್ನೆಗಳೂ ಎದ್ದಿವೆ. ಇವೆಲ್ಲವೂ ಅಧಿಕೃತ ವೇದಿಕೆಗಳಲ್ಲಿ ಚರ್ಚೆಗೆ ಒಳಪಡಬೇಕು ಎಂದು ಆಗ್ರಹಿಸಿದೆ.
ಸುರತ್ಕಲ್ ಟೋಲ್ ಸಮಸ್ಯೆ ಪರಿಹಾರಕ್ಕೆ ಗಡ್ಕರಿ ಭೇಟಿಯಾದ ಶಾಸಕ ರಘುಪತಿ ಭಟ್
ಹೆಜಮಾಡಿ ಶುಲ್ಕದ ಆದೇಶದಿಂದ ಜನರ ಶೋಷಣೆ: ಹೆಜಮಾಡಿ ಟೋಲ್‌ನಲ್ಲಿ ಸುಂಕ ಸಂಗ್ರಹ ಆರಂಭಗೊಂಡಲ್ಲಿ ಜನರನ್ನು ಶೋಷಣೆಗೆ, ಕಷ್ಟಕ್ಕೆ ಒಡ್ಡುವ ವಿಚಾರಗಳು ಉಂಟಾಗಲಿದೆ. ನಾವು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಹೆಜಮಾಡಿ ಟೋಲ್ ಗೇಟ್ ಮುಂಭಾಗ ಸಾಮೂಹಿಕ ಧರಣಿ ನಡೆಸಿ ಹೋರಾಟಕ್ಕೆ ಚಾಲನೆ ನೀಡಿರುತ್ತೇವೆ. ಆದೇಶ ಜಾರಿಯಾದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯಲಿದೆ. ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ, ತಲಪಾಡಿ, ಬ್ರಹ್ಮರಕೂಟ್ಲುವಿನಲ್ಲಿ ಹಂಚಿಕೆಮಾಡಿ ಸಂಗ್ರಹಿಸುವ ಸಲಹೆಯನ್ನು ಉಡುಪಿಯ ಜನಪ್ರತಿನಿಧಿಗಳು ನೀಡುತ್ತಿದ್ದಾರೆ. ಸುರತ್ಕಲ್ ಟೋಲ್ ಸುಂಕವನ್ನು ಪೂರ್ತಿ ರದ್ದುಗೊಳಿಸಬೇಕೆಂಬುದು ಜನರ ಬೇಡಿಕೆಯಾಗಿದೆ ಹಾಗೂ ನ್ಯಾಯಯುತವಾಗಿದೆ. ಹಾಗಿರುತ್ತಾ ವಿವಿದೆಡೆ ಹಂಚಿಕೆ ಮಾಡಿ ಸಂಗ್ರಹಿಸುವ ಯೋಜನೆಯೂ ನ್ಯಾಯ ಸಮ್ಮತವಾದುದಲ್ಲ. ಉಡುಪಿ ಜಿಲ್ಲಾಡಳಿತ ಇಂತಹ ಪ್ರಸ್ತಾಪವನ್ನು ಹೆದ್ದಾರಿ ಪ್ರಾಧಿಕಾರದ ಮುಂದೆ ಇಡಬಾರದು ಎಂದು ವಿನಂತಿಸಲಾಗಿದೆ ಎಂದು ಸಮಿತಿ ಹೇಳಿದೆ.
ಈ ಮನವಿ ನೀಡುವ ವೇಳೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ. ಶೇಖರ ಹೆಜಮಾಡಿ,ಮಾಜಿ ಶಾಸಕ ಗೋಪಾಲ ಪೂಜಾರಿ,ಕೊಳ್ಕೆಬೈಲ್ ಕಿಶನ್ ಹೆಗ್ಡೆ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಕವಿರಾಜ್ ಎಸ್, ಪ್ರಶಾಂತ್ ಪೂಜಾರಿ, ಶರತ್ ಶೆಟ್ಟಿ, ಶ್ರೀನಿವಾಸ್ ಹೆಬ್ಬಾರ್, ಸಾಯಿರಾಜ್ ಕಿದಿಯೂರು, ಯತೀಶ್ ಕರ್ಕೇರ ಉಪಸ್ಥಿತರಿದ್ದರು.