ಗದಗ: ಮೇಲಧಿಕಾರಿಗಳ ಕಿರುಕುಳ ಆರೋಪ, ದಯಾಮರಣಕ್ಕೆ ಸಿಬ್ಬಂದಿ ಅರ್ಜಿ

By Kannadaprabha NewsFirst Published Apr 4, 2021, 2:12 PM IST
Highlights

ಆಯುಷ್‌ ಅಧಿಕಾರಿ, ಡಿಎಚ್‌ಓ ಕಿರುಕುಳಕ್ಕೆ ಬೇಸತ್ತು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ನೌಕರರು| ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಬೆಟಗೇರಿ ಆಯುಷ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ ಹುಬ್ಬಳ್ಳಿ ಮತ್ತು ಯಾವಗಲ್ಲ ಆಯುಷ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಂದಾ ಖಟವಟೆ| 

ಗದಗ(ಏ.04): ಜಿಲ್ಲಾ ಆಯುಷ್‌ ಇಲಾಖೆ ಅಧಿಕಾರಿ ಡಾ. ಸುಜಾತಾ ಪಾಟೀಲ ಹಾಗೂ ಡಿಎಚ್‌ಓ ಡಾ. ಸತೀಶ ಬಸರೀಗಿಡದ ಅವರ ಕಿರುಕುಳದಿಂದ ಬೇಸತ್ತು ಮಹಿಳಾ ಸಿಬ್ಬಂದಿಗಳಿಬ್ಬರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಘಟನೆ ನಗರದಲ್ಲಿ ವರದಿಯಾಗಿದೆ.

ಬೆಟಗೇರಿ ಆಯುಷ್‌ ಆಸ್ಪತ್ರೆಯಲ್ಲಿ ಸಿಎಸ್‌ಎಸ್‌ (ಸೆಂಟ್ರಲ್‌ ಸ್ಪಾನ್ಸರ್ಡ್‌ ಸ್ಕೀಂ) ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ ಹುಬ್ಬಳ್ಳಿ ಮತ್ತು ಯಾವಗಲ್ಲ ಆಯುಷ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಂದಾ ಖಟವಟೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.

‘ಆಯುಷ್‌ ಇಲಾಖೆ ಅಧಿಕಾರಿ ಡಾ. ಸುಜಾತಾ ಪಾಟೀಲ ಕಳೆದ 8 ತಿಂಗಳಿಂದ ಸಂಬಳ ನೀಡದೇ ವಿನಾಕಾರಣ ಕೆಲಸಕ್ಕಾಗಿ ಅಲೆದಾಡಿಸುತ್ತಿದ್ದಾರೆ. ನಮ್ಮನ್ನು ಕೆಲಸದಿಂದ ಕೈ ಬಿಡಲು ಹುನ್ನಾರ ನಡೆಸಿದ್ದಾರೆ. ಸಂಸಾರ ನಡೆಸುವುದು ಕಷ್ಟಆಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಸಿಇಓ ಅವರಿಗೂ ಮನವಿ ಮಾಡಿದ್ದೇವೆ. ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎನ್ನುವ ಕಾರಣಕ್ಕಾಗಿ ಅವರು ರಾಜ್ಯಪಾಲರಿಗೆ ದಯಾ ಮರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ರೋಣ: ನೀರಿಗಾಗಿ ಜಾನುವಾರುಗಳ ಪಾಡು ಶೋಚನೀಯ

ವ್ಯಾಪಕ ನಿಂದನೆ

ಆಯುಷ್‌ ಅಧಿಕಾರಿ ಸುಜಾತಾ ಅವರಿಗೆ ಮನವಿ ಮಾಡಿ ವಿನಾಕಾರಣ ಕಿರಿಕಿರಿ ಮಾಡಬೇಡಿ ಅಂತ ಬೇಡಿಕೊಂಡರೂ ನಮ್ಮನ್ನ ನಾಯಿ ಅಂತ ಜರೀತಾರೆ, ಆ ನಾಯಿಯನ್ನು ಹೊರಗಡೆ ಹಾಕಿ ಒಳಗಡೆ ಬಿಡಬೇಡಿ ಅಂತ ಅವಾಚ್ಚ ಶಬ್ದಗಳಿಂದ ಅವಮಾನಿಸುತ್ತಾರೆ. ಈ ವಿಷಯವಾಗಿ ನಾವು ಡಿಎಚ್‌ಓ ಡಾ. ಸತೀಶ ಬಸರೀಗಿಡದ ಅವರಿಗೆ ಹೇಳಿದರೆ, ದಯಾಮರಣಕ್ಕೆ ನೀವು ಅರ್ಜಿ ಕೋರಿದ್ದೀರಲ್ಲ, ನೀವೇ ಸಾಯ್ತಿರಾ.. ಇಲ್ಲ ನಾನೇ ಚುಚ್ಚಿ ಸಾಯಿಸಲಾ ಅಂತಾ ನೇರವಾಗಿಯೇ ಕೊಲೆ ಬೆದರಿಕೆ ಹಾಕುತ್ತಾರೆ ಎನ್ನುವುದು ನೊಂದ ಮಹಿಳಾ ಸಿಬ್ಬಂದಿಗಳ ಅಳಲು.

ರೋಣ: ಬಿಎಸ್‌ಎಫ್‌ ಸೇರಿದ ಕವಿತಾ, ಸೇನೆಗೆ ಆಯ್ಕೆಯಾದ ಗದಗ ಜಿಲ್ಲೆಯ ಪ್ರಥಮ ಯುವತಿ..!

ಈ ಹಿಂದೆಯೂ ಗದಗ ಜಿಲ್ಲಾ ಆಯುಷ್‌ ಇಲಾಖೆ ಅಧಿಕಾರಿ ತಮ್ಮ ಕಚೇರಿಯಲ್ಲಿನ ಸಿಬ್ಬಂದಿಯೋರ್ವರ ವೈಯಕ್ತಿಕ ಮೊಬೈಲ್‌ ಕರೆಗಳನ್ನು ಅವರಿಗೆ ತಿಳಿಯದಂತೆ ಟ್ರ್ಯಾಪ್‌ ಮಾಡಿಸಿ, ಅವರು ಯಾರೊಟ್ಟಿಗೆ ಮಾತನಾಡುತ್ತಾರೆ. ಅವರಿಗೆ ಯಾರೆಲ್ಲಾ ಕರೆ ಮಾಡುತ್ತಾರೆ ಎನ್ನುವ ಬಗ್ಗೆ ಪೊಲೀಸ್‌ ಇಲಾಖೆಯಿಂದ ಅಕ್ರಮ ಮಾಹಿತಿ ಸಂಗ್ರಹಿಸಿದ ಆರೋಪ ಕೂಡಾ ಇವರ ಮೇಲಿತ್ತು. ಈ ವಿಷಯವಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೋರ್ವ ಸೈಬರ್‌ ಕ್ರೈಂ ವಿಭಾಗಗಕ್ಕೆ ದೂರು ಕೂಡಾ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೇಲಧಿಕಾರಿಗಳು ಹೇಳಿದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿದರೂ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಅದಕ್ಕಾಗಿಯೇ ರೋಸಿ ಹೋಗಿದ್ದು, ಅನಿವಾರ್ಯವಾಗಿ ರಾಜ್ಯಪಾಲರಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ನೊಂದ ಸಿಬ್ಬಂದಿ ನಂದಾ ಖಟವಟೆ ಹಾಗೂ ಪಾರ್ವತಿ ಹುಬ್ಬಳ್ಳಿ ತಿಳಿಸಿದ್ದಾರೆ.
 

click me!