SSLC ಎಕ್ಸಾಮ್‌: ಪರೀಕ್ಷಾ ಕೇಂದ್ರ ಕೇಳಿದ್ದೊಂದು, ಕೊಟ್ಟಿದ್ದು ಮತ್ತೊಂದು..!

By Kannadaprabha News  |  First Published Jun 18, 2020, 8:14 AM IST

ಪಕ್ಕದಲ್ಲಿಯೇ ಇದ್ದ ಕೇಂದ್ರ ಬಿಟ್ಟು 35 ಕಿಮೀ ದೂರ ಕೊಟ್ಟ ಪ್ರೌಢಶಿಕ್ಷಣ ಇಲಾಖೆ| ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಯಡವಟ್ಟಿಗೆ ವಿದ್ಯಾರ್ಥಿನಿ ಪರೀಕ್ಷೆಯಿಂದಲೇ ವಂಚಿತವಾಗುವ ಆತಂಕ|


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.18): ಕೋವಿಡ್‌-19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯೇ ಅವಕಾಶ ನೀಡಿತ್ತು. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರವನ್ನು ಕೇಳಿದ್ದೆ ಬೇರೆ, ಕೊಟ್ಟಿರುವುದೇ ಬೇರೆ. ಹೀಗಾಗಿ, ತಮ್ಮೂರಿನ ಪಕ್ಕದಲ್ಲಿಯೇ ಪರೀಕ್ಷಾ ಕೇಂದ್ರ ಇದ್ದರೂ 35 ಕಿಲೋ ಮೀಟರ್‌ ದೂರವಿರುವ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

Tap to resize

Latest Videos

ಆಗಿದ್ದೇನು?:

ಬಳ್ಳಾರಿಯ ಹಾಸ್ಟೆಲ್‌ನಲ್ಲಿ ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಮಂಜುನಾಥ ಪಾಟೀಲ ಓದುತ್ತಿದ್ದಳು. ಆದರೆ, ಕೋವಿಡ್‌ ಇರುವುದರಿಂದ ಪರೀಕ್ಷಾ ಕೇಂದ್ರವನ್ನು ತಮ್ಮೂರಿಗೆ ಸಮೀಪದಲ್ಲಿರುವಲ್ಲಿಯೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಅದರಂತೆ ಯಲಮಗೇರಿಯ ವಿಜಯಲಕ್ಷ್ಮಿ ತಮ್ಮೂರಿಗೆ ಹತ್ತಿರದ ಇರಕಲ್‌ಗಡ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಳು. ಆದರೆ, ಈಗ ಹಾಲ್‌ಟಿಕೆಟ್‌ ಮಾತ್ರ ಹಿರೇಸಿಂದೋಗಿ ಪರೀಕ್ಷಾ ಕೇಂದ್ರದ್ದು ಬಂದಿದೆ. ಇದರಿಂದ ತಮ್ಮೂರಿನ ಪಕ್ಕದಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ಇದ್ದರೂ 35 ಕಿಲೋ ಮೀಟರ್‌ ದೂರವಿರುವ ಹಿರೇಸಿಂದೋಗಿ ಪರೀಕ್ಷಾ ಕೇಂದ್ರಕ್ಕೆ ಹಾಕಿರುವುದರಿಂದ ನಾನು ಪರೀಕ್ಷೆಗೆ ಹೋಗುವುದಿಲ್ಲ ಎನ್ನುತ್ತಿದ್ದಾಳೆ ವಿದ್ಯಾರ್ಥಿನಿ. ಅಲ್ಲದೆ ಪಾಲಕರು ಸಹ ಕೋವಿಡ್‌-19 ಭೀತಿ ಇರುವುದರಿಂದ ಸುಮಾರು 35 ಕಿಲೋ ಮೀಟರ್‌ ದೂರದ ಪರೀಕ್ಷಾ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕೊಪ್ಪಳದಲ್ಲಿ ಕೊರೋನಾಕ್ಕೆ ಮೊದಲ ಬಲಿ: ಹೆಚ್ಚಿದ ಆತಂಕ

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಯಡವಟ್ಟಿಗೆ ವಿದ್ಯಾರ್ಥಿನಿ ಪರೀಕ್ಷೆಯಿಂದಲೇ ವಂಚಿತವಾಗುವ ಆತಂಕ ಎದುರಿಸುತ್ತಿದ್ದಾಳೆ. ಇಂಥ ಅದೆಷ್ಟೋ ವಿದ್ಯಾರ್ಥಿಗಳ ಹಾಲ್‌ಟಿಕೆಟ್‌ ತಪ್ಪಾಗಿಯೇ ಬಂದಿದೆ. ಹತ್ತಿರದಲ್ಲಿಯೇ ಪರೀಕ್ಷಾ ಕೇಂದ್ರ ಇದ್ದರೂ ದೂರದ ಕೇಂದ್ರಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದೆ ಒಂದು, ಈಗ ಪರೀಕ್ಷೆಗಾಗಿ ಬಂದಿರುವ ಹಾಲ್‌ಟಿಕೆಟ್‌ನಲ್ಲಿ ಇರುವ ಪರೀಕ್ಷಾ ಕೇಂದ್ರದಲ್ಲಿ ಇರುವ ಹೆಸರೇ ಬೇರೆ.

ಯಾರು ಹೊಣೆ?:

ಇಂಥ ಸಮಸ್ಯೆಗಳಿಗೆ ಯಾರು ಹೊಣೆ? ಯಾರು ಇವರನ್ನು ಕಾಪಾಡಬೇಕು? ಹಾಗೊಂದು ವೇಳೆ ಇಲಾಖೆ ಇದನ್ನು ಮೈಮರೆತದ್ದೆ ಆದರೆ ಅದೆಷ್ಟೋ ವಿದ್ಯಾರ್ಥಿಗಳು ಪರೀಕ್ಷೆಯಿಂದಲೇ ವಂಚಿತರಾಗುತ್ತಾರೆ. ಇನ್ನು ಕಾಲ ಮಿಂಚಿಲ್ಲ, ಈಗಲಾದರೂ ತಿದ್ದುಪಡಿ ಮಾಡಿಕೊಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ನನ್ನೂರಿಗೆ ಕೇವಲ 2 ಫರ್ಲಾಂಗ್‌ ಅಂತರದಲ್ಲಿ ಪರೀಕ್ಷಾ ಕೇಂದ್ರವಿದ್ದರೂ ಈಗ ನನ್ನನ್ನು 35 ಕಿಲೋ ಮೀಟರ್‌ ದೂರದ ಪರೀಕ್ಷಾ ಕೇಂದ್ರಕ್ಕೆ ಹಾಕಲಾಗಿದೆ. ಹೀಗಾಗಿ, ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದು ವಿದ್ಯಾರ್ಥಿನಿ ಜಯಲಕ್ಷ್ಮಿ ಹೇಳಿದ್ದಾಳೆ.

ಈ ಬಗ್ಗೆ ಮಾಹಿತಿ ಪಡೆದುಕೊಂಡು ಪರೀಶೀಲನೆ ಮಾಡಲಾಗುತ್ತಿದ್ದು, ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಕೊಪ್ಪಳ ಡಿಡಿಪಿಐ ಡ್ಡಬಸಪ್ಪ ನೀರಲೂಟಿ ಅವರು ತಿಳಿಸಿದ್ದಾರೆ. 
 

click me!