
ಧಾರವಾಡ(ಜೂ.12): ಕಾಶ್ಮೀರಿ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ತನಿಖಾಧಿಕಾರಿ ಕರ್ತವ್ಯಲೋಪ ಎಸಗಿ ಆರೋಪಗಳಿಗೆ ಜಾಮೀನು ಸಿಗಲು ಸಹಕರಿಸಿದ್ದಾರೆ ಎಂದು ಆರೋಪಿಸಿ ಶ್ರೀರಾಮಸೇನಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಇಂದು(ಶುಕ್ರವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಶ್ರೀರಾಮಸೇನಾ ಸಂಘಟನೆ ಕಾರ್ಯಕರ್ತರು ತನಿಖಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮರು ತನಿಖೆ ನಡೆಸುವಂತೆ ಒತ್ತಾಯಿಸಿಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪಾಕ್ ಪರ ಘೋಷಣೆ: ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧದ ದೂರಿನಲ್ಲಿ ದೇಶದ್ರೋಹ ಕಾಣ್ತಿಲ್ಲ
ಈ ಪ್ರಕರಣದ ತನಿಖೆಯನ್ನು ಹುಬ್ಬಳ್ಳಿ ಗ್ರಾಮೀಣ ಪಿಎಸ್ಐ ಜಾಕ್ಸನ್ ಡಿಸೋಜಾ ಹಾಗೂ ಅವರ ತಂಡಕ್ಕೆ ವಹಿಸಲಾಗಿತ್ತು. ಆದ್ರೆ ಇವರು ಸಮಯಕ್ಕೆ ಸರಿಯಾಗಿ ತನಿಖೆ ಮುಗಿಸದೇ ಸೂಕ್ತ ಸಾಕ್ಷ್ಯಾಧಾರಗಳಿದ್ದರೂ ಅವುಗಳನ್ನು ಹಾಜರುಪಡಿಸದೇ ಆರೋಪಿಗಳಿಗೆ ಸಹಕರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆ ಮೂರು ಆರೋಪಿಗಳಿಗೆ ಮೊಕದ್ದಮೆ ದಾಖಲಿಸಬೇಕು. ತನಿಖಾ ತಂಡದ ವಿರುದ್ಧ ಸಹ ದೇಶದ್ರೋಹದ ಮೊಕದ್ದಮೆ ಹಾಕಬೇಕು. ಈ ಷಡ್ಯಂತ್ರದ ಹಿಂದಿರುವವರನ್ನು ಬಹಿರಂಗಪಡಿಸಬೇಕು. ಆರೋಪಿಗಳು ಸಾಕ್ಷಿ ನಾಶಪಡಿಸುವ, ಒತ್ತಡ ಹೇರುವ, ಪ್ರಭಾವ ಬೀರುವಂತಹ ಲಕ್ಷಣಗಳಿದ್ದು, ಜಾಮೀನು ರದ್ದುಗೊಳಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
"