ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಅಂಬ್ಲಿ ಆರೋಪ| ಸಂಗ್ರಹವಾದ ಮರಳನ್ನು ರಾಣಿಬೆನ್ನೂರು ಶಾಸಕರ ಹಿಂಬಾಲಕರು ಲೂಟಿಗೆ ನಿಂತಿದ್ದಾರೆ|
ಹೂವಿನಹಡಗಲಿ(ಜೂ.12): ಬಳ್ಳಾರಿ ಜಿಲ್ಲೆಯ ಹರವಿ, ಕುರುವತ್ತಿ, ಮೈಲಾರ ಸೇರಿದಂತೆ ಇತರೆ ಕಡೆಗಳಲ್ಲಿನ ಮರಳನ್ನು ರಾಣಿಬೆನ್ನೂರು ಶಾಸಕರು, ಹಾಡು ಹಗಲೇ ಲೂಟಿ ಮಾಡುತ್ತಿದ್ದಾರೆಂದು ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ ಆರೋಪಿಸಿದ್ದಾರೆ.
ಇಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಹೊಸ ಮರಳು ನೀತಿ-2020 ಕುರಿತು ಮಾತನಾಡಿ, ಹರವಿ ನದಿಯಲ್ಲಿ ಮರಳಿನ ಬ್ಲಾಕ್ ಟೆಂಡರ್ ಆಗಿಲ್ಲ. ಸಂಗ್ರಹವಾದ ಮರಳನ್ನು ರಾಣಿಬೆನ್ನೂರು ಶಾಸಕರ ಹಿಂಬಾಲಕರು ಲೂಟಿಗೆ ನಿಂತಿದ್ದಾರೆಂದು ದೂರಿದರು.
ಈ ಮಾತಿಗೆ ಧ್ವನಿಗೂಡಿಸಿದ ತಾಪಂ ಸದಸ್ಯ ಸೋಗಿ ಹಾಲೇಶ, ಹೊಸ ಮರಳು ನೀತಿಯಲ್ಲಿ ಸಾಕಷ್ಟುದೋಷಗಳಿವೆ. ಗ್ರಾಪಂ ಮಟ್ಟದ ಮರಳು ತೂಕ ಮಾಡುವ ವ್ಯವಸ್ಥೆ ಇಲ್ಲ ಎಂದ ಅವರು, ನದಿಯಿಂದ ಮಾರಾಟ ಮಾಡಿದ ರಾಜಸ್ವ ಧನ ಆಯಾ ಗ್ರಾಮ ಪಂಚಾಯಿತಿಗೆ ಸಂದಾಯವಾಗಬೇಕು. ಗ್ರಾಪಂ ಮಟ್ಟದಲ್ಲೇ ಮರಳಿನ ಸ್ಟಾಕ್‌ಯಾರ್ಡ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಹೂವಿನಹಡಗಲಿ: ದಂಧೆಕೋರರಿಗಿಲ್ಲ ಭಯ, ತೆಪ್ಪದ ಮೂಲಕ ಮರಳು ಲೂಟಿ!
ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಾಪಂ ಸದಸ್ಯ ಈಟಿ ಲಿಂಗರಾಜ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 5 ಸಾವಿರ ರುಗಳಿಗೆ ಟ್ಯಾಕ್ಟರ್ ಮರಳು ಮಾರಾಟವಾಗುತ್ತಿತ್ತು. ಈಗ ಬಿಜೆಪಿ ಸರ್ಕಾರ ಹೊಸ ಮರಳು ನೀತಿ ಜಾರಿಗೆ ತಂದು ಎಲ್ಲರೂ ಮರಳು ಸಿಗುವಂತಹ ವ್ಯವಸ್ಥೆ ತಂದಿದೆ. ಹೊಸ ಮರಳು ನೀತಿಯಲ್ಲಿ ಯಾವ ದೋಷವೂ ಇಲ್ಲ. ಗ್ರಾಪಂ ಮಟ್ಟದಲ್ಲಿ ಸರಿಯಾಗಿ ನಿರ್ವಹಣೆಯಾಗಬೇಕಿದೆ ಎಂದರು.
ತಾಪಂ ಇಒ ಯು.ಎಚ್. ಸೋಮಶೇಖರ, ಸರ್ಕಾರ ಜಾರಿಗೊಳಿಸಿದ ಹೊಸ ಮರಳು ನೀತಿಯ ಸಾಧಕ ಬಾಧಕಗಳ ವಿತರಣೆ ನೀಡುತ್ತಾ, ಗ್ರಾಪಂ ಮಟ್ಟದ 1 ಟನ್ ಮರಳಿಗೆ 350 ರು. ನಿಗಧಿಯಾಗಿದೆ. ಯಾವುದೇ ಕಾರಣಕ್ಕೂ ಜೆಸಿಬಿಯಂತಹ ಯಂತ್ರಗಳನ್ನು ಬಳಕೆ ಮಾಡುವಂತಿಲ್ಲ. ದೊಡ್ಡ ಪ್ರಮಾಣದ ವಾಹನಗಳ ಬಳಕೆ ಇಲ್ಲ. ಜತೆಗೆ ಹಳ್ಳಿಯ ಮರಳು ನಗರ ಮತ್ತು ತಾಲೂಕು ಕೇಂದ್ರಕ್ಕೆ ಪೂರೈಕೆ ಮಾಡುವಂತಿಲ್ಲ. ಗ್ರಾಪಂನಲ್ಲೇ ರಸೀದಿ ಪಡೆದು ಮರಳು ಸಾಗಾಣಿಕೆ ಮಾಡಿಕೊಳ್ಳಬೇಕೆಂಬ ಮಾಹಿತಿಯನ್ನು ಗ್ರಾಪಂ ಪಿಡಿಒ ಹಾಗೂ ತಾಪಂ ಸದಸ್ಯರಿಗೆ ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 14.37 ಲಕ್ಷ ಮಾನವ ದಿನಗಳನ್ನು ಸೃಜನೆಗೆ ಗುರಿ ನೀಡಿತ್ತು. ಇದರಲ್ಲಿ 3.53 ಲಕ್ಷ ಮಾನವ ದಿನಗಳನ್ನು ಸೃಜನೆಯಾಗಿದೆ. ಒಂದೇ ದಿನ 16680 ಕೂಲಿ ಕಾರ್ಮಿಕರು ಕೆಲಸದಲ್ಲಿದ್ದಾರೆ. ಜನರ ಬೇಡಿಕೆ ತಕ್ಕಂತೆ ಬದು ನಿರ್ಮಾಣ, ಕೃಷಿ ಹೊಂಡಗಳನ್ನು ನಿರ್ಮಾಣವಾಗುತ್ತಿವೆ ಎಂದು ತಾಪಂ ಇಒ ಯು.ಎಚ್. ಸೋಮಶೇಖರ ಮಾಹಿತಿ ನೀಡಿದರು.
ಈವರೆಗೂ ನರೇಗಾದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ 8 ದಿನಗೊಳಗೆ ಕೂಲಿ ಅವರ ಬ್ಯಾಂಕ್ ಖಾತೆಗೆ ಸಂದಾಯವಾಗಿದೆ. ಈವರೆಗೂ 9.43 ಕೋಟಿ ನೀಡಿದ್ದು, ಈವರೆಗೂ 112 ಕೃಷಿ ಹೊಂಡ ಪೂರ್ಣಗೊಂಡಿವೆ, 46 ಪ್ರಗತಿಯಲ್ಲಿವೆ, ಬದು ನಿರ್ಮಾಣ ಅಭಿಯಾನದಡಿ 654 ಬದು ನಿರ್ಮಾಣವನ್ನು ಗ್ರಾಪಂ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಕಾಮಗಾರಿ ಮಾಡುತ್ತಿದ್ದಾರೆ. ತಾಲೂಕಿನ ನರೇಗಾ ಯೋಜನೆಯಡಿಯ ತಾಲೂಕಿನ ಕಾಮಗಾರಿ ಛಾಯಾಚಿತ್ರಗಳನ್ನು ಸರ್ಕಾರ ಪ್ರಚಾರಕ್ಕಾಗಿ ಬಳಕೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.
ಬಿಇಒ ಸಿ.ನಾಗರಾಜ ಮಾತನಾಡಿ, ಜೂ. 25ರಿಂದ ಎಸ್‌ಎಸ್‌ಎಲ್ಸಿ ಪರೀಕ್ಷೆ ನಡೆಯಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದು, 9 ಪರೀಕ್ಷಾ ಕೇಂದ್ರಗಳಿವೆ, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಪ್ರತಿಯೊಂದು ಕೋಣೆಗೂ ಸ್ಯಾನಿಟೈಜರ್ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ 2 ಮಾಸ್ಕ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆ ಕೇಂದ್ರ ಕರೆ ತರಲು ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಸಂಜೀವಗೌಡ ಬಸವನಗೌಡ ಪಾಟೀಲ್ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ವಾಡಿಕೆಯಂತೆ 154 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 165 ಮಿ.ಮೀ ಮಳೆಯಾಗಿದೆ. ಇದರಿಂದ 54 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿಯಲ್ಲಿ ಈವರೆಗೂ 7513 ಹೆಕ್ಟೇರ್ ಬಿತ್ತನೆಯಾಗಿದೆ. ಉಳಿದಂತೆ ಬಿತ್ತನೆ ಬೀಜ ಮತ್ತು ರಸ ಗೊಬ್ಬರದ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆಂದು ಸಬೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ, ಉಪಾಧ್ಯಕ್ಷೆ ಪುಷ್ಪಾವತಿ ಗುದಗಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ತಾಪಂ ಇಒ ಯು.ಎಚ್. ಸೋಮಸೇಖರ ಉಪಸ್ಥಿತರಿದ್ದರು.
News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್