ಕೊಪ್ಪಳ: ಮಳೆಗಾಗಿ ಹಸೆಮಣೆ ಏರಿದ ಕಪ್ಪೆಗಳು, ಗ್ರಾಮದಲ್ಲಿ ಸಂಭ್ರಮವೋ ಸಂಭ್ರಮ..!

By Kannadaprabha NewsFirst Published Jun 12, 2020, 1:21 PM IST
Highlights

ಡೊಳ್ಳು, ಬಾಜಾ-ಭಜಂತ್ರಿಗಳ ಜತೆ ಅದ್ಧೂರಿ ಮೆರ​ವ​ಣಿ​ಗೆ| ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನಡೆದ ಮದುವೆ| ಮಹಿಳೆಯರು ಸೊಬಾನ ಪದ ಹಾಡಿದರು. ಗ್ರಾಮದ ಮಾರುತ್ತೇಶ್ವರ, ವಾಲ್ಮೀಕಿ, ಹುಲಿಗೆಮ್ಮ, ಕೆಂಚಮ್ಮ, ಮಲಿಯಮ್ಮ, ಗದ್ದೆಮ್ಮ, ಲಕ್ಷ್ಮಮ್ಮ ದೇವಸ್ಥಾನಕ್ಕೆ ತೆರಳಿ ಮಳೆಗಾಗಿ ವಿಶೇಷ ಪೂಜೆ|

ಹನುಮಸಾಗರ(ಜೂ.12): ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಇತ್ತೀ​ಚಿಗೆ ಮಳೆಗಾಗಿ ಕಪ್ಪೆಗಳ ಮದುವೆ ಮಾಡಲಾಯಿತು. ದೇವಸ್ಥಾನಕ್ಕೆ ಮದುವೆ ಮನೆಯ ಸಿಂಗಾರ ಮಾಡ​ಲಾ​ಗಿ​ತ್ತು. ಡೊಳ್ಳು, ಬಾಜಾ-ಭಜಂತ್ರಿಗಳ ಜತೆ ಮೆರವಣಿಗೆ ನಡೆ​ಯಿ​ತು. ಹಸೆಮಣೆ ಏರಿದ ಕಪ್ಪೆಗಳಿ​ಗೆ ಕಂಕಣ ಭಾಗ್ಯ ನೆರವೇರಿದೆ.

ಮಳೆಗಾಗಿ ಪ್ರಾರ್ಥಿಸಿ ಗ್ರಾಮೀಣ ಪ್ರದೇಶಗಳಲ್ಲಿ ನಡೆದ ವಿಶಿಷ್ಟ ಆಚರಣೆಯಿದು. ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯ ಅಭಾವ ಎದುರಾಗಿದ್ದು, ಬೆಳೆದ ಬೆಳೆಯೂ ಹಾಳಾಗುತ್ತಿದೆ. ಹೀಗಾಗಿ, ಕಳೆದ ಮೂರು ವರ್ಷಗಳಿಂದ ಇಲ್ಲಿ ಪ್ರತಿ ವರ್ಷವೂ ಕಪ್ಪೆಗಳ ಮದುವೆ ನಡೆಯುತ್ತಿದೆ. ಈ ಬಾರಿಯೂ ಕಪ್ಪೆಗಳ ಮದುವೆ ಅದ್ಧೂರಿಯಾಗಿ ನಡೆಯಿತು.

ಗ್ರಾಮದಲ್ಲಿಯೇ ವಧು-ವರರ ಕಡೆಯವರಾಗಿ ಎರಡು ಗುಂಪುಗಳಾಗುತ್ತವೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ ಡೊಳ್ಳಿನೊಂದಿಗೆ ಕಪ್ಪೆಗಳ ಮೆರವಣಿಗೆ ಮಾಡಲಾಯಿತು. ಸಂಪ್ರದಾಯದಂತೆ ಮದುವೆಗೆ ಎಲ್ಲರನ್ನು ಆಹ್ವಾ​ನಿ​ಸ​ಲಾ​ಗು​ತ್ತ​ದೆ. ಗ್ರಾಮದ ಮಾರುತೇಶ್ವರ ದೇವ​ಸ್ಥಾನವನ್ನು ಮದುವೆ ಮಂಟಪದಂತೆ ಸಿಂಗಾರ ಮಾಡಿ ಎರಡು ಕಪ್ಪೆಗಳನ್ನು ಹಿಡಿದು ಮೆರವಣಿಗೆ ಮಾಡಿ ಹಸೆಮಣೆಯ ಮೇಲೆಯೇ ನೀರು ಹಾಕಿದರು. 

ಪತಿ ಹತ್ಯೆಗೈದು ಮನೆಯಲ್ಲಿ ಹೂತು ಹಾಕಿದ್ದ ಪ್ರಕರಣ: 15 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್‌

ಮಹಿಳೆಯರು ಸೊಬಾನ ಪದ ಹಾಡಿದರು. ಗ್ರಾಮದ ಮಾರುತ್ತೇಶ್ವರ, ವಾಲ್ಮೀಕಿ, ಹುಲಿಗೆಮ್ಮ, ಕೆಂಚಮ್ಮ, ಮಲಿಯಮ್ಮ, ಗದ್ದೆಮ್ಮ, ಲಕ್ಷ್ಮಮ್ಮ ದೇವಸ್ಥಾನಕ್ಕೆ ತೆರಳಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಲಂಡೂರಿ ಮನೆತನದಿಂದ ಹೆಣ್ಣು ಕಪ್ಪೆ, ಗ್ವಾತಗಿ ಮನೆತನದಿಂದ ಗಂಡು ಕಪ್ಪೆಯನ್ನು ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕರೆ ತಂದು ಮದುವೆ ಮಾಡಲಾಯಿತು. ಮೂರು ದಿನಗಳ ಕಾಲ ಮದುವೆ ಕಾರ್ಯಕ್ರಮ ನಡೆಯಿತು. ಗ್ರಾಮದ ಮಹಿಳೆಯರೆ ಮುಂದೆ ನಿಂತು ಮದುವೆ ನೆರವೇರಿಸಿದರು. ಈ ರೀತಿ ಆಚರಣೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಇದೆ.

ಪ್ರಮುಖರಾದ ಗ್ರಾಪಂ ಅಧ್ಯಕ್ಷ ಹನುಮವ್ವ, ತಾಪಂ ಮಾಜಿ ಸದಸ್ಯೆ ಮಂಜುಳಾ ಎಂ. ಗ್ವಾತಗಿ, ಗ್ರಾಮದ ಹಿರಿಯರಾದ ದ್ಯಾಮಣ್ಣ ಲಂಡೂರಿ, ಮುತ್ತಪ್ಪ ಎಸ್‌. ಗ್ವಾತಗಿ, ಯಮನೂರ ಪರಸಾಪುರ, ರಾಮಣ್ಣ ನಸಗುನ್ನಿ, ಲೋಕಪ್ಪ ನಸಗುನ್ನಿ, ಮಾದವ್ವ, ಭೀಮಣ್ಣ ಗ್ವಾತಗಿ, ಬಸವರಾಜ ಗಾಣದಾಳ, ಚಂದ್ರಪ್ಪ ಗುಡೂರು, ಗುರುವಪ್ಪ ಶಲೂಡಿ, ರಂಗಪ್ಪ ನಾಯ್ಕರ, ಬಾಳನಗೌಡ ಗೌಡ್ರ, ಬಸಣ್ಣ ಬಲಕುಂದಿ ಇತರರು ಇದ್ದರು.

ಮಳೆ ಕೊರತೆ ಹೆಚ್ಚಿದ್ದು, ಗ್ರಾಮಗಳಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಹೀಗಾಗಿ, ಮೂರು ವರ್ಷದಿಂದ ಈ ರೀತಿ ಕಪ್ಪೆಗಳ ಮದುವೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ನಡೆದ ಬಳಿಕ ಹಲವು ಬಾರಿ ಮಳೆ ಬಂದಿದ್ದೂ ಇದೆ. ಹೀಗಾಗಿ ಈ ರೀತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಮರಿಕೊಪ್ಪ ಗ್ರಾಪಂ ಅಧ್ಯಕ್ಷೆ ಹನುಮವ್ವ ಅವರು ಹೇಳಿದ್ದಾರೆ. 

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!