ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯವನ್ನು ಕಲ್ಲಡ್ಕ ಪ್ರಭಾಕರ್ ಭಟ್ ಕಾಂಗ್ರೆಸ್ ಮೇಲೆ ಹೊರಿಸಿರುವುದು ತಪ್ಪು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರು (ಮೇ.20): ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿಂದೂ ಸಂಘಟನೆ ಕಾರ್ಯಕರ್ತ ಆರೋಗ್ಯ ವಿಚಾರಿಸಿದರು. ಪೊಲೀಸರ ಥರ್ಡ್ ಡಿಗ್ರಿ ಹಲ್ಲೆಯಿಂದ ವಿಪರೀತವಾಗಿ ಗಾಯಗೊಂಡು ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು: ಪುತ್ತಿಲ
ಈ ವೇಳೆ ಮಾತನಾಡಿದ ಮುತಾಲಿಕ್ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಟಾಂಗ್ ಕೊಟ್ಟಿದ್ದಾರೆ. ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಪ್ರಕರಣವನ್ನು ಕಲ್ಲಡ್ಕ ಪ್ರಭಾಕರ್ ಭಟ್ ಕಾಂಗ್ರೆಸ್ ಮೇಲೆ ಹೊರಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುತಾಲಿಕ್, ಪುತ್ತೂರಿನಲ್ಲಿ ನಡೆದ ಈ ಘಟನೆಯನ್ನ ಕಾಂಗ್ರೆಸ್ ಮೇಲೆ ಹೊರಿಸಿ ಆರೋಪ ಮಾಡೋದು ತಪ್ಪು. ಪ್ರಭಾಕರ್ ಭಟ್ ಅವರ ಮಾತು ಒಪ್ಪುವಂತದಲ್ಲ. ಯಾಕಂದ್ರೆ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸಿದ್ದು ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ಮಾಜಿ ಶಾಸಕರು, ಅವರೇ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಅಂತಾರೆ. ಆದ್ರೆ ಇದು ಕಾಂಗ್ರೆಸ್ ನವರು ಪ್ರತಿಭಟಿಸಿದ್ದಲ್ಲ. ಈ ಪ್ರಕರಣವನ್ನ ಮುಚ್ಚಿ ಹಾಕುವಂತ ಕೆಲಸ ಮಾಡಬೇಡಿ. ಅದು ಬಿಟ್ಟು ತಪ್ಪನ್ನ ಒಪ್ಪಿಕೊಂಡು ಸರಿಪಡಿಸುವ ಕೆಲಸ ಮಾಡಿ. ಜನರಿಗೆ ಸತ್ಯಗೊತ್ತಿದೆ, ಇನ್ನೇನೋ ಹೇಳೋಕೆ ಹೋಗಿ ಮತ್ತೆ ಅಪಹಾಸ್ಯಕ್ಕೀಡಾಗಬೇಡಿ ಎಂದು ಪ್ರಭಾಕರ್ ಭಟ್ ಗೆ ಪ್ರಮೋದ್ ಮುತಾಲಿಕ್ ಟಾಂಗ್ ಕೊಟ್ಟಿದ್ದಾರೆ.
ಬ್ಯಾನರ್ ಹಾಕಿದ್ದು ಒಪ್ಪಿಕೊಳ್ಳುವಂತೆ ಗನ್ ಇಟ್ಟು ಬೆದರಿಕೆ: ಹಿಂದೂ ಕಾರ್ಯಕರ್ತರೆಂದು ಚರ್ಮ ಸುಲಿದರು!
ಪುತ್ತೂರಿನಲ್ಲಿ ನಡೆದಿರುವ ಘಟನೆ ಅಮಾನುಷವಾದದ್ದು ಈ ಘಟನೆಯನ್ನ ಉಗ್ರವಾಗಿ ಖಂಡಿಸ್ತೇನೆ. ದೌರ್ಜನ್ಯಕ್ಕೊಳಗಾದ ಯುವಕರು ಬಾಲ್ಯದಿಂದಲೇ ಸ್ವಯಂ ಸೇವಕರು, ಹಿಂದುತ್ವಕ್ಕಾಗಿ ಯಾವೂದಕ್ಕೂ ಸಿದ್ಧವಾದಂತಹ ಕಾರ್ಯಕರ್ತರು. ಸಿದ್ಧಾಂತಕ್ಕೆ ಬದ್ಧವಾಗಿದ್ದಂತ ಕಾರ್ಯಕರ್ತರು. ಅಂತವರ ಮೇಲೆ ಬ್ರಿಟೀಷ್ ಮಾದರಿ ಕ್ರೌರ್ಯ ಮೆರೆದಿದ್ದು ತಪ್ಪು. ಅಷ್ಟಕ್ಕೂ ಕಾರ್ಯಕರ್ತರು ಮಾಡಿದ ತಪ್ಪಾದ್ರೂ ಏನೂ? ಚಪ್ಪಲಿ ಹಾರ ಬ್ಯಾನರ್ ಹಾಕಿದ್ದರೆ ಅನ್ನೋದು ಅಪರಾಧ. ಕಾರ್ಯಕರ್ತರು ಮಾಡಿದ್ದಾರೋ ಇಲ್ವೋ ಅನ್ನೋದು ಆಮೇಲಿನ ವಿಚಾರ. ಸಾರ್ವಜನಿಕ ಜೀವನದಲ್ಲಿರುವಾಗ ಹೂವಿನ ಹಾರ ಹಾಕೋಲ್ಲದಕ್ಕೂ, ಚಪ್ಪಲಿ ಹಾರ ಹಾಕೋಲ್ಲದಕ್ಕೂ ಸಿದ್ಧರಿರಬೇಕು. ಮಾನ, ಅಪಮಾನ, ಸನ್ಮಾನ ಅನ್ನೋದನ್ನ ಸಮಾನವಾಗಿ ಸ್ವೀಕರಿಸಬೇಕು. ಯಾಕೇ ಬ್ಯಾನರ್ ಚಪ್ಪಲಿ ಹಾರ ಹಾಕಿದ್ದಾರೇ ಅನ್ನೋದನ್ನ ಅವಲೋಕನ ಮಾಡಿಕೊಳ್ಳಬೇಕು. ಅದು ಬಿಟ್ಟು ಕಾರ್ಯಕರ್ತರ ಮೇಲೆ ಮಾಡಿಸಿದ ದೌರ್ಜನ್ಯಕ್ಕೆ ಕ್ಷಮೆ ಇಲ್ಲ. ಜನ ನಿಮ್ಗೆ ಉಗಿತಾರೆ ಎಂದು ಕಿಡಿ ಕಾರಿದ್ದಾರೆ.