ರಬಕವಿ-ಬನಹಟ್ಟಿ: ನೇಕಾರಿಕೆ ಉದ್ಯಮಕ್ಕೆ ಬಲ ತಂದ ‘ಆನೆ’..!

Published : May 20, 2023, 01:29 PM IST
ರಬಕವಿ-ಬನಹಟ್ಟಿ: ನೇಕಾರಿಕೆ ಉದ್ಯಮಕ್ಕೆ ಬಲ ತಂದ ‘ಆನೆ’..!

ಸಾರಾಂಶ

ಆಂಧ್ರ ಹಾಗೂ ತೆಲಂಗಾಣದಲ್ಲಿ ಒಂದು ವರ್ಷದಿಂದ ‘ಬಿಗ್‌ ಬಾರ್ಡರ್‌ ಮಸರಾಯಿಜ್ಡ್‌ ಸೀರೆಗಳಿಗೆ ಆನೆ ಎಂಬ ಹೆಸರಿನಲ್ಲಿ ಗ್ರಾಹಕರಿಂದ ಬಂದಿರುವ ಎಲ್ಲಿಲ್ಲದ ಬೇಡಿಕೆಯೊಂದಿಗೆ ಆನೆ ಸೀರೆಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಮೂಲಕ ದಾಪುಗಾಲು ಹಾಕುತ್ತಿದೆ. 

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಮೇ.20): ನೋಟ್‌ ಬ್ಯಾನ್‌, ಕೊರೋನಾಂತರ ಹಾಗೂ ಕಚ್ಚಾ ವಸ್ತುಗಳ ಬೆಲೆಗಳು ಏರಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರರು ಇದೀಗ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇದಕ್ಕೆ ಕಾರಣ ‘ಬಿಗ್‌ ಬಾರ್ಡರ್‌’(ಆನೆ) ಸೀರೆಗಳಿಗೆ ಬೇಡಿಕೆ ಹೆಚ್ಚಾದ ಕಾರಣ ನೇಕಾರ ವರ್ಗಕ್ಕೆ ಸಂತವುಂಟು ಮಾಡಿದೆ.

ಕಳೆದೆರಡು ದಶಕಗಳ ಹಿಂದೆ ಕೋಳಿ ನಕ್ಷೆಯಿರುವ ಬನಹಟ್ಟಿಯ ಮಸರಾಯಿಜ್ಡ ಸೀರೆಗಳಿಗೆ ಭಾರೀ ಬೇಡಿಕೆ ಬಂದಿತ್ತು. ಮಾಸದ ಬಣ್ಣ, ಅತ್ಯದ್ಭುತ ವಿನ್ಯಾಸ ಹಾಗೂ ಗುಣಮಟ್ಟದ ಸೀರೆ ಉತ್ಪಾದನೆಯಿಂದ ಮಾರುಕಟ್ಟೆಯಲ್ಲಿ ರಬಕವಿ-ಬನಹಟ್ಟಿ ಸೀರೆಗಳಿಗೆ ಭರಪೂರ ಬೇಡಿಕೆಯಿತ್ತು. ತದನಂತರದ ಕಾಲದಲ್ಲಿ ಇಲ್ಲಿನ ಸಾವಿರಾರು ನೇಕಾರರು ನೋಟ್‌ ಬ್ಯಾನ್‌ ಮತ್ತು ಹಿಂದೆಯೇ ದಾಳಿ ಮಾಡಿದ ಕೊರೋನಾ ರೋಗದ ಪೀಡನೆಯಿಂದ, ಕಚ್ಚಾನೂಲಿನ ಮತ್ತು ಬಣ್ಣ ಮೊದಲಾದ ಉತ್ಪಾದನಾ ಪರಿಕರಗಳ ಬೆಲೆ ದುಪ್ಪಟ್ಟು ಆದವು. ಇಲ್ಲಿ ಉತ್ಪಾದನೆಗೊಂಡ ಸೀರೆಗಳ ಮಾರಾಟದಲ್ಲಿನ ಬೆಲೆಯನ್ನೂ ಅನಿವಾರ್ಯವಾಗಿ ಏರಿಸಬೇಕಾದ್ದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಲ್ಲಿ ಸೀರೆಗಳನ್ನು ಖರೀದಿಸಲಾರದ ಗ್ರಾಹಕರಿಂದಾಗಿ ಮತ್ತು ಸೂರತ್‌, ಮಹಾರಾಷ್ಟ್ರ, ತಮಿಳನಾಡು ರಾಜ್ಯಗಳ ಬೇರೆ ಪ್ರದೇಶಗಳ ಸೀರೆಗಳು ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದರಿಂದ ರಬಕವಿ-ಬನಹಟ್ಟಿ ಸೀರೆಗಳು ಸಮರ್ಪಕವಾದ ಮಾರುಕಟ್ಟೆಯಿಲ್ಲದೇ ಮತ್ತು ದಿಢೀರ್‌ ಬೇಡಿಕೆ ಕುಸಿತದಿಂದ ಮಾರಾಟವಾಗುವಲ್ಲಿ ಅಧೋಗತಿಯತ್ತ ಸಾಗುವಂತಾಗಿತ್ತು.

ರಾಜ್ಯದ ನೇಕಾರರಿಗೆ ಸಿಹಿಸುದ್ದಿ: ನಾಳೆ ಬ್ಯಾಂಕ್‌ ಖಾತೆಗೆ 5 ಸಾವಿರ ರೂ. ಹಾಕುವ ಸರ್ಕಾರ

ಕೈ ಹಿಡಿದ ಆನೆ:

ಮುಂದಿನ ದಿನಗಳಲ್ಲಿನ ನಮ್ಮ ತುತ್ತಿನ ಚೀಲ ತುಂಬುವುದು ಹೇಗೆಂದು ನೇಕಾರ-ಮಾಲೀಕರು ಚಿಂತಿಸುತ್ತಿರುವಾಗ ಉತ್ತಮ ಗುಣಮಟ್ಟದ ನೂಲು, ಮಾಸದ ಬಣ್ಣ ಜೊತೆಗೆ ನವೀನ ವಿನ್ಯಾಸ ಮತ್ತು ಕೌಶಲಯುತ ನೇಯ್ಗೆಯ ಹೊಸ ಸೀರೆಗಳನ್ನು ಕೆಲ ಸಾಹಸಿ ವರ್ತಕರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನೋಡನೋಡುತ್ತಿದ್ದಂತೆ ಈ ಸೀರೆಗಳಿಗೆ ಎಲ್ಲಿಲ್ಲದ ಬೇಡಿಕೆ ಬರತೊಡಗಿತು. ಉತ್ಪಾದನೆಗಿಂತ ಬೇಡಿಕೆ ಹೆಚ್ಚಳವಾದಾಗ ಇತರೆ ನೇಕಾರರು ಕೂಡ ಬೇಡಿಕೆಗನುಗುಣವಾಗಿ ಸೀರೆಗಳನ್ನು ಉತ್ಪಾದಿಸಲಾರಂಭಿಸಿದರು. ಇದೀಗ ಆಂಧ್ರ ಹಾಗೂ ತೆಲಂಗಾಣದಲ್ಲಿ ಒಂದು ವರ್ಷದಿಂದ ‘ಬಿಗ್‌ ಬಾರ್ಡರ್‌ ಮಸರಾಯಿಜ್ಡ್‌ ಸೀರೆಗಳಿಗೆ ಆನೆ ಎಂಬ ಹೆಸರಿನಲ್ಲಿ ಗ್ರಾಹಕರಿಂದ ಬಂದಿರುವ ಎಲ್ಲಿಲ್ಲದ ಬೇಡಿಕೆಯೊಂದಿಗೆ ಆನೆ ಸೀರೆಗಳು ಮಾರುಕಟ್ಟೆಯಲ್ಲಿ ದಾಖಲೆಯ ಧೂಳೆಬ್ಬಿಸುವ ಮೂಲಕ ದಾಪುಗಾಲು ಹಾಕುತ್ತಿರುವುದು ವ್ಯಾಪಾರ ವಹಿವಾಟು ನಿಂತು ಹೋಗುವ ಭಯದಲ್ಲಿದ್ದ ಈ ಭಾಗದ ನೇಕಾರರ ಮೊಗದಲ್ಲಿ ಮಂದಹಾಸ ಮೂಡುವಲ್ಲಿ ಕಾರಣವಾಗಿದೆ.

ದಿನಕ್ಕೆ 10 ಸಾವಿರ ಸೀರೆ ಉತ್ಪಾದನೆ:

ಅತ್ಯಾಧುನಿಕ ನಕ್ಷೆಯೊಂದಿಗೆ ಅನುಭವಿ ನೇಕಾರರಿಂದ ಉತ್ಪಾದನೆಗೊಳ್ಳುತ್ತಿರುವ ಈ ಸೀರೆಗಳು ರಬಕವಿ-ಬನಹಟ್ಟಿ ಭಾಗದಿಂದ ದಿನಕ್ಕೆ 10 ಸಾವಿರ ಸೀರೆಗಳಷ್ಟು ಉತ್ಪಾದನೆಗಳಾಗುತ್ತಿದ್ದು, 1 ಸಾವಿರ ಬೆಲೆಯ ಸೀರೆಗಳಿಗೆ ಎಲ್ಲೆಡೆ ಹೆಚ್ಚಿನ ಬೇಡಿಕೆ ಇದ್ದರೂ, ಬೇಡಿಕೆಗನುಗುಣವಾಗಿ ಉತ್ಪಾದನೆಯಾಗುತ್ತಿಲ್ಲ. ಸಾಂಪ್ರದಾಯಿಕ ಸೀರೆಗಳಿಗಿಂತ ಹೆಚ್ಚು ಬಂಡವಾಳ ಹೂಡಿ ಉತ್ಪಾದನೆಯಾಗುವ ಇಲ್ಲಿನ ಸೀರೆಯೊಂದಕ್ಕೆ ಸುಮಾರು 1 ಸಾವಿರಕ್ಕೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ಸ್ಥಳೀಯ ನೇಕಾರರು ಕೈತುಂಬ ಕೆಲಸ ಸಿಕ್ಕ ಖುಷಿಯಲ್ಲಿದ್ದಾರೆ. ಕುಟುಂಬ ನಿರ್ವಹಣೆ ಹೇಗೆಂಬ ನೇಕಾರರಲ್ಲಿನ ಆತಂಕವೂ ದೂರವಾಗಿದೆ.

ಹೆಚ್ಚಿದ ಮಜೂರಿ

ಸೀರೆ ಮಾರಾಟದಲ್ಲಿ ನೆಲ ಕಚ್ಚಿದ್ದ ಎರಡು ವರ್ಷಗಳ ಹಿಂದೆ ಸಾಮಾನ್ಯ ಸೀರೆಗಳನ್ನು ನೇಯುವ ನೇಕಾರರಿಗೆ ದಿನಕ್ಕೆ ಒಂದೇ ಸೀರೆ ನೇಯಬೇಕಿತ್ತು. ಇದರಿಂದ ಆತನಿಗೆ ಕೇವಲ .85 ಮಾತ್ರ ಕೂಲಿ ಸಿಗುತ್ತಿತ್ತು. ಅದೇ ರೀತಿ ಹಳೇ ವಿನ್ಯಾಸದ ಸೀರೆಗಳನ್ನು ತಾಲೂಕಿನ ಸಾವಿರಾರು ನೇಕಾರರು ನೇಯ್ದರೂ ಬೇಡಿಕೆಗನಗುಣ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚಿದ ಆನೆಯ ಆರ್ಭಟದಿಂದ ಬೇಡಿಕೆಗನುಗುಣ ಪೂರೈಕೆ ಸಾಧ್ಯವಾಗದಿದ್ದರೂ ಇಲ್ಲಿನ ನೇಕಾರರ ಕೈಗೆ ಭರಪೂರ ಕೆಲಸ ದೊರೆಯುತ್ತಿದೆ. ಇದೀಗ ದಿನಕ್ಕೆ 3-4 ಸೀರೆಗಳನ್ನು ನೇಯುತ್ತಿರುವ ನೇಕಾರರಿಗೆ .500 ರವರೆಗೆ ನಿತ್ಯ ಮಜೂರಿ ಸಿಗುತ್ತಿರುವುದರಿಂದ ನೇಕಾರರು ಫುಲ್‌ಖುಷ್‌ ಆಗಿದ್ದಾರೆ.

ರಬಕವಿ-ಬನಹಟ್ಟಿ ಪ್ರದೇಶಗಳಲ್ಲಿ ಮೊದಲು ಉತ್ಪಾದನೆಯಾಗುತ್ತಿದ್ದ ಸಾಂಪ್ರದಾಯಿಕ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯ ಅಭಾವ ಸೃಷ್ಟಿಯಾದ ಕಾರಣ ನೇಕಾರ ಸಮುದಾಯ ಕಂಗಾಲಾಗಿತ್ತು. ಕಚ್ಚಾವಸ್ತುಗಳ ಬೆಲೆ ದುಪ್ಪಟ್ಟು ಹೆಚ್ಚಳವಾಗಿ ಉದ್ಯಮ ನಿರ್ವಹಣೆ ಕಷ್ಟವಾಗಿತ್ತು. ಸದ್ಯ ಕೌಶಲತೆ, ಉತ್ಪಾದನಾ ಹಂತದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ವಿನ್ಯಾಸದಲ್ಲಿ ಹೊಸತನದ ಲೇಪನ ಮಾಡಿರುವ ಸೃಜನಶೀಲತೆ ಕಾರಣಕ್ಕೆ ಆನೆ ಸೀರೆಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿರುವುದರಿಂದ ಹೆಚ್ಚಿನ ಬಂಡವಾಳ ಹೂಡಿ ಮಾರುಕಟ್ಟೆಯಲ್ಲಿನ ಬೇಡಿಕೆಗನುಗುಣ ಸೀರೆಗಳ ಉತ್ಪಾದನೆ ಮಾಡಲಾಗುತ್ತಿದೆ. ಹೆಚ್ಚಿನ ಬಂಡವಾಳ ಹೂಡಿಕೆಗೆ ಸರ್ಕಾರ ನೇಕಾರರಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆಗೆ ತ್ವರಿತ ಚಾಲನೆ ನೀಡುವುದು ಅಗತ್ಯವಾಗಿದೆ ಎಂದು ಬನಹಟ್ಟಿ ಪಟ್ಟಣದ ಪವರ್‌ಲೂಂ ಅಸೋಸಿಯೇಷನ್‌ ಅಧ್ಯಕ್ಷ ಶಂಕರ ಜಾಲಿಗಿಡದ ತಿಳಿಸಿದ್ದಾರೆ.  

Bagalkot : ನೇಕಾರರ ಸಮಸ್ಯೆ ಇತ್ಯರ್ಥಗೊಳಿಸಿ ಇಲ್ಲವೇ ರಾಜಿನಾಮೆ ನೀಡಿ: ಟಿರಕಿ

ಹೊಸ ಪ್ರಯೋಗವೆಂಬಂತೆ ಉದ್ಯಮಶೀಲ ಸಾಹಸಿಗಳು ಮಾಡಿರುವ ಆನೆ ಮಾದರಿ ಶೈಲಿಯ ಸೀರೆಗಳ ಉತ್ಪಾದನೆಯಿಂದ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ನೇಕಾರಿಕೆ ಉದ್ಯಮ ಉಸಿರಾಡುವಂತಾಗಿದೆ. ಉತ್ಪಾದನಾ ವಸ್ತುವಿನ ಗುಣಮಟ್ಟ, ಹೆಚ್ಚಿ ಉತ್ಪಾದನಾ ವೆಚ್ಚ, ಕೌಶಲಯುತ ನೇಯ್ಗೆ ಕ್ರಮ ಮತ್ತು ಆಕರ್ಷಣೀಯ ವರ್ಣಗಳಿಂದಾಗಿ ಹೊಸ ವಿನ್ಯಾಸದ ಸೀರೆಗಳನ್ನು ಮಾರುಕಟ್ಟೆಯಲ್ಲಿನ ಬೇಡಿಕೆಗನುಗುಣ ಉತ್ಪಾದಿಸಿ ಪೂರೈಸಬೇಕಿದೆ ಅಂತ ರಬಕವಿ ಪಟ್ಟಣದ ಪವರ್‌ಲೂಂ ಅಸೋಸಿಯೇಶನ್‌ ಅಧ್ಯಕ್ಷ ನೀಲಕಂಠ ಗೌರಿಹರ ಮುತ್ತೂರಮ ಹೇಳಿದ್ದಾರೆ. 

ನಮ್ಮಲ್ಲಿ ಬರುವ ಗ್ರಾಹಕರು ಈ ಮೊದಲಿನ ರಬಕವಿ-ಬನಹಟ್ಟಿಪಾರಂಪರಿಕ ಸೀರೆಗಳನ್ನು ಕೇಳುತ್ತಿಲ್ಲ. ಬದಲಾಗಿ ಆನೆ ಮಾದರಿ ವಿನ್ಯಾಸದ ಸೀರೆಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಅಲ್ಲದೇ ಹೊಸ ವಿನ್ಯಾಸದಲ್ಲಿ ಉತ್ಪಾದನೆಗೊಂಡಿರುವ ಇತರೆ ಸೀರೆಗಳ ಜೊತೆಗೆ ಸದ್ಯ ಹೆಚ್ಚು ಬೇಡಿಕೆ ಇರುವ ಆನೆ ಸೀರೆಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದರಿಂದ ನಮಗೆ ಈಗ ಬಂಡವಾಳ ಹೂಡಲು ಹೆಚ್ಚು ಧೈರ್ಯ ಬಂದಿದೆ ಅಂತ ರಬಕವಿ ಪಟ್ಟಣದ ಸೀರೆ ಮಾರಾಟಗಾರ ವಿನೋದ ಬಸವರಾಜ ಸಿಂದಗಿ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ