
ಹುಕ್ಕೇರಿ (ಮೇ.17): ಸಹಕಾರಿ ತತ್ವದಡಿ ವಿದ್ಯುತ್ ಪೂರೈಸುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿಂದ ಕಲ್ಪಿಸಿರುವ ಎಲ್ಲ ಮಾದರಿಯ ವಿದ್ಯುತ್ ಸಂಪರ್ಕಗಳಿಗೆ ದಿನದ 24 ಗಂಟೆ ವಿದ್ಯುತ್ ಸರಬರಾಜು ಮಾಡುವ ವಿಶೇಷ ಯೋಜನೆ ರೂಪಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಇಂಧನ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದರು.
ಇತ್ತೀಚೆಗೆ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಕ್ಷೇತ್ರದ ಶಾಸಕ ನಿಖಿಲ ಕತ್ತಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಜೋಶಿ, ಪ್ರಾಯೋಗಿಕವಾಗಿ ಸಂಸ್ಥೆ ಅಧೀನದ ಎಲ್ಲ ವಿದ್ಯುತ್ ಸಂಪರ್ಕಗಳಿಗೆ ನಿರಂತರ ವಿದ್ಯುತ್ ಪೂರೈಸುವ ವಿಶೇಷ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.
ತಾಲೂಕಿನ ಎಲ್ಲ ಮನೆಗಳಿಗೆ 24 ಗಂಟೆ ವಿದ್ಯುತ್ ಪೂರೈಕೆಗೆ ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ₹45 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿಲ್ಲ. ಹಾಗಾಗಿ ಸೋಲಾರ್ ಮತ್ತು ವಿಂಡ್ ಪವರ್ ಅಡಿ ಸ್ವ ವಿದ್ಯುತ್ ಉತ್ಪಾದನೆ ಮಾಡಿ, ಬ್ಯಾಟರಿ ಮೂಲಕ ಶೇಖರಿಸಿ, ದಿನದ 24 ಗಂಟೆ ವಿದ್ಯುತ್ ಪೂರೈಸಲು ಕೇಂದ್ರ ಸರ್ಕಾರದಿಂದ ಹುಕ್ಕೇರಿಯನ್ನು ಪೈಲಟ್ ತಾಲೂಕಾಗಿ ಘೋಷಿಸಬೇಕು ಎಂದು ಶಾಸಕ ಕತ್ತಿ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ವೇಮುಲ ಕಾಯ್ದೆ ವೋಟ್ ಬ್ಯಾಂಕ್ ರಾಜಕಾರಣದ ಭಾಗ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ತಾಲೂಕಿನ 123 ಗ್ರಾಮ, ಹುಕ್ಕೇರಿ, ಸಂಕೇಶ್ವರ ಪಟ್ಟಣ ಮತ್ತು ಕಣಗಲಾ ಕೈಗಾರಿಕೆ ಪ್ರದೇಶಗಳಿಗೆ ಸುಗಮವಾಗಿ ಹಾಗೂ ನಿರಂತರ ಜ್ಯೋತಿ ಯೋಜನೆಯಡಿ ದಿನದ 24 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಸಂಸ್ಥೆ ವ್ಯಾಪ್ತಿಯ 35 ಸಾವಿರ ಪಂಪಸೆಟ್‌ಗಳಿಗೆ 7 ಗಂಟೆ ವಿದ್ಯುತ್ ಪೂರೈಕೆಗೆ 51 ಮೆ.ವ್ಯಾಟ್ ನೀಡುತ್ತಿದ್ದು ದಿನದ 24 ಗಂಟೆ ವಿದ್ಯುತ್ ಒದಗಿಸಲು ಇನ್ನು 100 ಮೆ.ವ್ಯಾಟ್ ಹೆಚ್ಚುವರಿ ವಿದ್ಯುತ್ ಅವಶ್ಯಕತೆಯಿದೆ. ಅದೇ ರೀತಿ ಗಾಂವಠಾಣ ವ್ಯಾಪ್ತಿಯ 87 ಸಾವಿರ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ 11 ಮೆ.ವ್ಯಾಟ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ತೋಟಪಟ್ಟಿ ವ್ಯಾಪ್ತಿಯ 14 ಸಾವಿರ ಮನೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಇನ್ನೂ 5 ಮೆ.ವ್ಯಾಟ್ ವಿದ್ಯುತ್ ಅವಶ್ಯಕತೆಯಿದೆ ಎಂದು ಶಾಸಕ ಕತ್ತಿ ಅವರು ಸಚಿವ ಜೋಶಿ ಅವರಿಗೆ ವಸ್ತು ಸ್ಥಿತಿಯನ್ನು ವಿವರಿಸಿದರು.