ಕೆಳದಿ ಚನ್ನಮ್ಮ ಕೋಟೆಯ ದೇವಾಲಯ ಶಿಥಿಲ: ಸಂರಕ್ಷಣೆಗೆ ಆಗ್ರಹ, ಮನೆ, ಹಂದಿ ಶೆಡ್‌ಗಳ ಕಾಟ!

Published : May 17, 2025, 11:49 AM IST
ಕೆಳದಿ ಚನ್ನಮ್ಮ ಕೋಟೆಯ ದೇವಾಲಯ ಶಿಥಿಲ: ಸಂರಕ್ಷಣೆಗೆ ಆಗ್ರಹ,  ಮನೆ, ಹಂದಿ ಶೆಡ್‌ಗಳ ಕಾಟ!

ಸಾರಾಂಶ

ಚನ್ನಗಿರಿ ಕೋಟೆಯ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿರುವ ಭೂತರಾಯ ದೇವಾಲಯ, ಯಜ್ಞಶಾಲೆ ಶಿಥಿಲಾವಸ್ಥೆಯಲ್ಲಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಅಡ್ಡಿಪಡಿಸುತ್ತಿದೆ. ಕೋಟೆ ಸುತ್ತ ಒತ್ತುವರಿ, ಸ್ವಚ್ಛತೆ ಕೊರತೆ, ಕಾವಲುಗಾರರಿಂದ ಭಕ್ತರಿಗೆ ತೊಂದರೆ ಇದೆ ಎಂದು ಭಕ್ತರು ಆರೋಪಿಸಿದ್ದಾರೆ. ದುರಸ್ತಿಗೆ ಮನವಿ ಸಲ್ಲಿಸಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ.

ಬಾ.ರಾ.ಮಹೇಶ್, ಚನ್ನಗಿರಿ

ಚನ್ನಗಿರಿ (ಮೇ.17): ಪಟ್ಟಣದ ಇತಿಹಾಸ ಪ್ರಸಿದ್ಧ ಕೆಳದಿ ರಾಣಿ ಚನ್ನಮ್ಮ ಆಳಿದ ಕೋಟೆಯಲ್ಲಿ ನೆಲೆಸಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಅಧೀನಕ್ಕೆ ಒಳಪಟ್ಟ ಭೂತರಾಯನ ದೇವಾಲಯ, ಯಜ್ಞಶಾಲೆ, ರಥರ ಮನೆ ಶಿಥಿಲಗೊಂಡು ಬೀಳುವ ಹಂತದಲ್ಲಿದೆ. ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದರೂ ಅಭಿವೃದ್ಧಿ ವಂಚಿತವಾಗಿದೆ. ಈ ಕೋಟೆ ಪ್ರಾಚ್ಯವಸ್ತು ಪುರಾತತ್ವ ಇಲಾಖೆಗೆ ಸೇರಿದ್ದರೆ, ಕೋಟೆಯ ದೇವಾಲಯ ರಾಜ್ಯ ಮುಜರಾಯಿ ಇಲಾಖೆಗೆ ಸೇರಿದೆ. ಈ ಎರಡೂ ಇಲಾಖೆಗಳ ಸಮನ್ವಯತೆ ಕೊರತೆ ಹಿನ್ನೆಲೆ ಕೋಟೆ ಮತ್ತು ದೇವಾಲಯಗಳು ಶಿಥಿಲಗೊಳ್ಳುತ್ತಿದ್ದು, ಸಂರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕಾಗಿದೆ.

ಕೋಟೆಯಲ್ಲಿ ಶ್ರೀ ರಂಗನಾಥ, ಶ್ರೀಭೂತರಾಯನ ದೇವಾಲಯವಿದೆ. ಭೂತರಾಯನ ದೇವಾಲಯದ ಮೇಲ್ಚಾವಣಿ ಶಿಥಿಲಗೊಂಡು ಗಾರೆಯ ಚಕ್ಕಳ ಬೀಳುತ್ತಿದೆ. ರಂಗನಾಥ ದೇವಾಲಯ ಪಕ್ಕದಲ್ಲಿಯೇ ಯಜ್ಞಶಾಲೆ ಇದೆ. ದೇವಾಲಯದ ಎಲ್ಲ ಧಾರ್ಮಿಕ ಕಾರ್ಯಗಳು ಇದೇ ಯಜ್ಞಶಾಲೆಯಲ್ಲಿ ನಡೆಯುತ್ತವೆ. ಈ ಯಜ್ಞಶಾಲೆಯ ಮಹಡಿ ಗೋಡೆ ಬಿದ್ದುಹೋಗಿದ್ದು, ಮೇಲ್ಚಾವಣಿ ಹಂಚುಗಳೆಲ್ಲಾ ಹೊಡೆದುಹೋಗಿ, ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಡುತ್ತಿದೆ.

ದೇವಾಲಯದ ಭಕ್ತಾಧಿಗಳೇ ಒಂದು ಸಮಿತಿ ರಚಿಸಿಕೊಂಡಿದ್ದಾರೆ. ದೇವಾಲಯ ಅಭಿವೃದ್ಧಿ ಮತ್ತು ದೇವಾಲಯದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೋಟೆಯ ಶ್ರೀ ಭೂತರಾಯನ ದೇವಾಲಯ ಮತ್ತು ಯಜ್ಞಶಾಲೆ ಅಭಿವೃದ್ಧಿಗೆ ಭಕ್ತರಿಂದಲೇ ವಂತಿಕೆ ಸಂಗ್ರಹಿಸಿ, ಅಭಿವೃದ್ಧಿಪಡಿಸಲು ಮುಂದಾದರೆ ಅದು ಫಲ ನೀಡುತ್ತಿಲ್ಲ. ಕೋಟೆಯಲ್ಲಿರುವ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಕಾವಲು ಸಿಬ್ಬಂದಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಚಿತ್ರದುರ್ಗದ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಕಂಡು ಅಧಿಕಾರಿಯಿಂದ ದೇವಾಲಯ ದುರಸ್ತಿಪಡಿಸಲು ಅನುಮತಿ ಪತ್ರ ತೆಗೆದುಕೊಂಡು ಬಂದರೂ ಪುರಾತತ್ವ ಇಲಾಖೆ ಸಿಬ್ಬಂದಿ ಕಾಮಗಾರಿ ನಡೆಸಲು ಬಿಡುತ್ತಿಲ್ಲ ಎಂಬುದು ಭಕ್ತ ರಾಜಣ್ಣ ಅವರ ದೂರು.

ಇನ್ನು ಈ ಕೋಟೆ ಸುತ್ತಲಿನ ಪ್ರದೇಶ ಒತ್ತುವರಿ ಆಗುತ್ತಿದೆ. ಕೋಟೆಗೆ ಹಾಕಿರುವ ರಕ್ಷಣಾ ತಡೆಬೇಲಿಯ ಒಳಗಡೆಯೇ ಮನೆಗಳನ್ನು ಮತ್ತು ಹಂದಿಗಳನ್ನು ಸಾಕಣೆ ಮಾಡುವ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕೋಟೆಯ ಸುತ್ತಲೂ 300 ಮೀಟರ್ ಅಂತರದಲ್ಲಿ ಯಾವುದೇ ಮನೆಗಳನ್ನು ಮತ್ತು ಬಹು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಬಾರದು ಎಂಬ ನಿಯಮಗಳಿವೆ. ಆದರೆ, ಈ ನಿಯಮಗಳು ಕಡತಕ್ಕೆ ಮಾತ್ರ ಸೀಮಿತವಾಗಿವೆ. ಇಲ್ಲಿರುವ ಸಿಬ್ಬಂದಿ ಜನರಿಂದ ಹಣ ಪಡೆದು ಕೋಟೆಯ ಜಾಗ ಒತ್ತುವರಿ ಮಾಡಿಕೊಳ್ಳಲು ಬಿಡುತ್ತಿದ್ದಾರೆ ಎಂಬುದು ಭಕ್ತರಾದ ಬುಳ್ಳಿ ನಾಗರಾಜ್, ನಟರಾಜ್, ರಾಜಣ್ಣ, ಸಿ.ಆರ್. ಸೋಮಶೇಖರ್ ಆರೋಪಿಸುತ್ತಾರೆ.

ಚನ್ನಗಿರಿ ಕೋಟೆಯ ಸುತ್ತಲೂ ಸ್ವಚ್ಛತೆ ಮರೀಚಿಕೆಯಾಗಿದೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕವರುಗಳು ಎಸೆದಿರುವುದು ಕಾಣುತ್ತದೆ. ಭಕ್ತರು ಹೇಳುವಂತೆ ಈ ದೇವಾಲಯಕ್ಕೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭಕ್ತರು ಬರುತ್ತಾರೆ. ಕೋಟೆಯ ಕಾವಲುಗಾರರು ಸಂಜೆ 6 ಗಂಟೆಗೆ ಕೋಟೆ ಮುಖ್ಯದ್ವಾರಗಳಿಗೆ ಬೀಗ ಹಾಕಿಕೊಂಡು ಹೋಗುತ್ತಾರೆ. ಇದರಿಂದ ದೇವಾಲಯದ ಅರ್ಚಕರಾಗಲಿ, ಭಕ್ತರಿಗಾಗಲಿ ಸಂಜೆ ಹೊತ್ತು ಕೋಟೆಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಪ್ರಾಚ್ಯವಸ್ತು ಪುರಾತತ್ವ ಇಲಾಖೆಯವರು ಕೋಟೆ ಕಾಯುವ ನೆಪದಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಗಳಿವೆ.

ದೇವಾಲಯ ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಶಿಥಿಲ ದೇವಾಲಯ ದುರಸ್ತಿಪಡಿಸುವ ಬಗ್ಗೆ ತಾಲೂಕು ಮುಜರಾಯಿ ಇಲಾಖೆ ಅಧಿಕಾರಿಯೂ ಆಗಿರುವ ತಹಸೀಲ್ದಾರ್ ಅವರಿಗೆ ಮನವಿ ಮಾಡಿ, 2 ವರ್ಷಗಳೇ ಕಳೆಯುತ್ತಿವೆ. ಆದರೆ, ಇದುವರೆಗೂ ಸರ್ಕಾರ ಗಮನಹರಿಸಿಲ್ಲ.

- ಜಿ.ಎ.ನಟರಾಜ್, ಮಾಜಿ ಸದಸ್ಯ, ಪುರಸಭೆ

PREV
Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ