ಕರಗುತ್ತಿರುವ ಕೊರಗರು: ಕೊರಗರಿಗೆ ಆಸರೆಯಾಗಿದ್ದ ಯೋಜನೆ ಕೈ ಬಿಟ್ಟ ಸರಕಾರ

By Anusha KbFirst Published Aug 29, 2022, 4:40 PM IST
Highlights

ಕರಾವಳಿಯ ಅತ್ಯಂತ ಹಿಂದುಳಿದ ಆದಿವಾಸಿ ಬುಡಕಟ್ಟು ಸಮುದಾಯವಾಗಿರುವ ಕೊರಗ ಜನಾಂಗದ ವೈದ್ಯಕೀಯ ವೆಚ್ಚವನ್ನು ಸರ್ಕಾರ ಇದುವರೆಗೆ ಮರು ಪಾವತಿ ಮಾಡುತ್ತಿತ್ತು. ಆದರೆ ಈ ಸವಲತ್ತನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ

ವರದಿ:ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಮಂಗಳೂರು: ಕರಾವಳಿಯ ಅತ್ಯಂತ ಹಿಂದುಳಿದ ಆದಿವಾಸಿ ಬುಡಕಟ್ಟು ಸಮುದಾಯವಾಗಿರುವ ಕೊರಗ ಜನಾಂಗದ ಮೇಲೆ ರಾಜ್ಯ ಸರಕಾರದ ಗದಾ ಪ್ರಹಾರವಾಗಿದೆ. ಈ ಸಮುದಾಯದ ಆರೋಗ್ಯ ಗುಣಮಟ್ಟವನ್ನು ಸುಧಾರಿಸುವ ದೃಷ್ಟಿಯಿಂದ ಈವರೆಗೆ ಸಮುದಾಯದ ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡಲಾಗುತ್ತಿತ್ತು. ಆದರೆ ಸದ್ಯ ಈ ಸವಲತ್ತನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಇದರಿಂದ ಕೊರಗ ಸಮುದಾಯ ಅಳಿವಿನಂಚಿಗೆ ಸಾಗುವ ಅಪಾಯ ಉಂಟಾಗಲಿದೆ.

ಬದಲಾದ ವಾತಾವರಣ ಹಾಗೂ ಜೀವನ ಪದ್ಧತಿಯಿಂದ ಆದಿವಾಸಿ ಬುಡಕಟ್ಟು ಸಮುದಾಯವಾದ ದುರ್ಬಲ ಕೊರಗ ಸಮುದಾಯದವರ ಆರೋಗ್ಯದಲ್ಲಿ ಏರುಪೇರು ಸಾಮಾನ್ಯವಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರಗ ಸಮುದಾಯದವರು ರಕ್ತಹೀನತೆ, ಅಪೌಷ್ಟಿಕತೆ, ಟಿಬಿ, ಕ್ಯಾನ್ಸರ್ ಈ ರೀತಿ ಅನೇಕ ಮಾರಕ ಕಾಯಿಲೆಗಳಿಂದ ಬಳಲಿ ಮರಣ ಹೊಂದುವ ಪ್ರಕರಣಗಳು ಹೆಚ್ಚಾಗಿವೆ.  ಕೊರಗ ಸಮುದಾಯದ ಜೀವನಮಟ್ಟ ಸುಧಾರಿಸುವ ದೃಷ್ಟಿಯಿಂದ ಖಾಸಗಿ ವಲಯದಲ್ಲಿ ಪಡೆದ ಚಿಕಿತ್ಸೆಗೆ ವಿನಯೋಗಿಸಿದ ವೆಚ್ಚವನ್ನು ಈವರೆಗೆ ಮರುಪಾವತಿ ಮಾಡಲಾಗುತ್ತಿತ್ತು. ಐಟಿಡಿಪಿ ಇಲಾಖೆಯಿಂದ ಇದರ ನಿರ್ವಹಣೆ ನಡೆಯುತ್ತಿತ್ತು. ಆದರೆ ಇದೀಗ ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಅನುಸಾರ ವೈದ್ಯಕೀಯ ವೆಚ್ಚ ಮರುಪಾವತಿಯನ್ನು ರದ್ದು ಮಾಡಲಾಗಿದೆ. ಇದಕ್ಕೆ ಜಿಲ್ಲಾಡಳಿತ ನೀಡುತ್ತಿರುವ ಕಾರಣ ಹಾಸ್ಯಾಸ್ಪದವಾಗಿದೆ. ಈ ಸಮುದಾಯದವರು ಅನೇಕ ದುಶ್ಚಟ ಅದರಲ್ಲೂ ಮದ್ಯಪಾನದಿಂದ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಯೋಜನೆ ರದ್ದು ಮಾಡಿದ್ದೇವೆ ಎಂದು ಜಿಲ್ಲಾ ಆಡಳಿತ ಹೇಳಿರುವುದಾಗಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಆರೋಪಿಸಿದೆ.

ಈ ಆರೋಪ ಅಪ್ರಸ್ತುತವಾಗಿದ್ದು ತಕ್ಷಣವೇ ರದ್ದು ಮಾಡಿರುವ ಆದೇಶವನ್ನು ಪುನರ್ ಪರಿಶೀಲಿಸಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈವರೆಗೆ ಕೊರಗ ಸಮುದಾಯಕ್ಕೆ ನೀಡಲಾಗುತ್ತಿದ್ದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವಂತೆ ಒಕ್ಕೂಟ ಆಗ್ರಹಿಸಿದೆ.

ಇಳಿಮುಖವಾಗುತ್ತಿದೆ ಕೊರಗ ಸಮುದಾಯದ ಜನಸಂಖ್ಯೆ!

ಕರಾವಳಿಯ ಆದಿವಾಸಿ ಬುಡಕಟ್ಟು ಸಮುದಾಯವಾಗಿರುವ ದುರ್ಬಲ ಕೊರಗ ಸಮುದಾಯದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಈ ಸಮುದಾಯ ಅಳಿವಿನ ಅಂಚಿಗೆ ತಲುಪುತ್ತಿದೆ. ಇದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ. ಈ ಬಗ್ಗೆ ಸೂಕ್ತ ಅಧ್ಯಯನ ನಡೆಯಸಬೇಕೆಂದು ಕೊರಗ ಸಮುದಾಯದವರು ದಶಕಗಳಿಂದ ಆಗ್ರಹಿಸುತ್ತಾ ಬಂದಿದ್ದಾರೆ. 

Police Brutality: ಕೊರಗರ ಮದುವೆಗೆ ನುಗ್ಗಿ ಪೊಲೀಸ್‌ ದಾಂಧಲೆ: ಮಹಿಳೆಯರ ಮೇಲೂ ಮನಬಂದಂತೆ ಥಳಿತ

ಮಹಮ್ಮದ್ ಪೀರ್ ವರದಿಯಂತೆ ಮಾನವ ಶಾಸ್ತ್ರ ,ಸಮಾಜಶಾಸ್ತ್ರ, ಮನೋಶಾಸ್ತ್ರಜ್ಞರ ಸಮಿತಿ ರಚಿಸಿ ತಕ್ಷಣ ಅಧ್ಯಯನ ಪ್ರಾರಂಭಿಸಬೇಕೆಂದು ಸಮುದಾಯ ಮತ್ತೊಮ್ಮೆ ಒತ್ತಾಯಿಸಿದೆ. ಈ ಬಗ್ಗೆ ಎರಡು ದಶಕಗಳಿಂದ ಆಗ್ರಹಿಸಿದರೂ ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಸಮುದಾಯದಲ್ಲಿ ಆರೋಗ್ಯ ಹದಗೆಡುವುದು, ಮರಣ ಪ್ರಮಾಣದಲ್ಲಿ ಏರಿಕೆಯಾಗಿರುವುದು ಆತಂಕಕಾರಿಯಾಗಿದ್ದು ಈ ಹಿಂದಿನ ಜನಗಣತಿಯ ವೇಳೆ ಅಂದಾಜು 15,000 ದಷ್ಟು ಇದ್ದ ಜನಸಂಖ್ಯೆ ಸದ್ಯ 10000ಕ್ಕಿಂತಲೂ ಕಡಿಮೆಯಾಗಿದೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

ಕೊರಗ ಸಮುದಾಯದ ಮೊದಲ ಎಂಫಿಲ್ ಪದವೀಧರೆಗೆ ಬೀಡಿ ಕಟ್ಟೋದೇ ಕಾಯಕ!

ಜನಸಂಖ್ಯೆ ಇಳಿಮುಖವಾಗುತ್ತಿರುವ ವೇಳೆಯಲ್ಲಿ ಮಹತ್ವದ ಯೋಜನೆ ಯನ್ನು ಕೈಬಿಟ್ಟಿರುವುದು ಕೊರಗ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಯೋಜನೆಯನ್ನು ಮರು ಆರಂಭಿಸುವುದರ ಜೊತೆಗೆ ಕೊರಗ ಸಮುದಾಯದ ಜನಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದಕ್ಕೆ ಸೂಕ್ತ ಕಾರಣವನ್ನು ಅಧ್ಯಯನದ ಮೂಲಕ ಪತ್ತೆ ಹಚ್ಚಬೇಕೆಂದು ಒತ್ತಾಯಿಸಲಾಗಿದೆ.
 

click me!