ಕೊರಗ ಸಮುದಾಯದ ಮೊದಲ ಎಂಫಿಲ್ ಪದವೀಧರೆಗೆ ಬೀಡಿ ಕಟ್ಟೋದೇ ಕಾಯಕ!
ಎಂಎ ರ್‍ಯಾಂಕ್ ವಿಜೇತೆ, ಎಂಫಿಲ್ ಮಾಡಿದ ಕೊರಗ ಸಮುದಾಯದ ಮೊದಲ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೊತೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಯುವತಿ ಮೀನಾಕ್ಷಿ ಉದ್ಯೋಗವಿಲ್ಲದೆ ಬೀಡಿ ಕಟ್ಟೋದನ್ನು ಕಾಯಕವಾಗಿಸಿಕೊಂಡಿದ್ದಾರೆ. ಉದ್ಯೋಗ ಪಡೆದು ಹಿಂದುಳಿದ ತನ್ನ ಸಮುದಾಯದ ಜನರಿಗೆ ಮಾರಿಯಾಗಬೇಕಿತ್ತು. ಆದರೆ, ಅಷ್ಟು ಕಲಿತ ನಿನಗೇ ಉದ್ಯೋಗ ಸಿಕ್ಕಿಲ್ಲ, ಮತ್ಯಾಕೆ ಕಲಿಯೋದು ಅಂತ ಜನ ಹೇಳುವಂತಾಗಿರೋದು ವಿಪರ್ಯಾಸ.
ಮಂಗಳೂರು(ಜು.18): ಕಾಸರಗೋಡು ಜಿಲ್ಲೆಯಲ್ಲಿ ಎಂಎ, ಎಂಫಿಲ್ ಮಾಡಿದ ಕೊರಗ ಸಮುದಾಯದ ಮೊದಲ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜತೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ ಜೀವನ ಬಂಡಿ ಸಾಗಿಸಲು ಈಗ ಬೀಡಿ ಕಟ್ಟುತ್ತಿದ್ದಾರೆ ಅಂದ್ರೆ ನೀವು ನಂಬಲೇ ಬೇಕು. ಎಂಎ ರ್‍ಯಾಂಕ್ ವಿಜೇತೆಯಾಗಿರುವ ಕಾಸರಗೋಡಿನ ಮೀನಾಕ್ಷಿ ಎಂಫಿಲ್ ಪೂರೈಸಿಯೂ ಉದ್ಯೋಗವಿಲ್ಲದೆ, ಕುಟುಂಬ ನಿರ್ವಹಣೆಗೆ ಬೀಡಿ ಕಟ್ಟುತ್ತಿದ್ಧಾರೆ.
ಮೀನಾಕ್ಷಿ ಕಾಸರಗೋಡು ಜಿಲ್ಲೆ ಮಂಜೇಶ್ವರದ ವರ್ಕಾಡಿಯವರು. ವಿವಾಹವಾದ ಬಳಿಕ ಮೀಯಪದವಿನ ಕುಳೂರಿನಲ್ಲಿ ವಾಸವಾಗಿದ್ದಾರೆ. ಮಂಜೇಶ್ವರ ಗೋವಿಂದ ಪೈ ಕಾಲೇಜಿನಿಂದ ಕನ್ನಡದಲ್ಲಿ ಬಿಎ ಪದವಿ, ಕಾಸರಗೋಡು ಸರ್ಕಾರಿ ಕಾಲೇಜಿನಿಂದ 2012ರಲ್ಲಿ ಕನ್ನಡ ಎಂ.ಎ.ಯಲ್ಲಿ ಫಸ್ಟ್ ಕ್ಲಾಸ್, ಬಳಿಕ ಬಿಎಡ್, ಬಳಿಕ ಕಣ್ಣೂರು ವಿವಿಯ ಕಾಸರಗೋಡು ಕೇಂದ್ರದಲ್ಲಿ ಕನ್ನಡದಲ್ಲಿ ಎಂಫಿಲ್ ಪದವಿ ಪಡೆದಿದ್ದಾರೆ. ಎಂಫಿಲ್ ಫಲಿತಾಂಶ ಬಂದು ಎರಡು ವಾರಗಳು ಕಳೆದಿವೆ.
ಬದುಕಿನ ಬಂಡಿ ಸಾಗಿಸಲು ಬೀಡಿಯೇ ಆಸರೆ
ದೇಶದ 75 ಪ್ರಿಮಿಟಿವ್ ಟ್ರೈಬ್ಸ್‌ಗಳಲ್ಲಿ ಒಂದಾದ, ಅನಕ್ಷರಸ್ಥರೇ ಹೆಚ್ಚಾಗಿರುವ ಕೊರಗ ಸಮುದಾಯದ ಯುವತಿ ಇಷ್ಟೆಲ್ಲ ಓದಿದ್ದರೂ ಪಡೆದಿದ್ದರೂ ಆಕೆಗೆ ಕೆಲಸ ಕೊಡಿಸುವ ನಿಟ್ಟಿನಲ್ಲಿ ಯಾರೂ ಮುಂದಾಗಿಲ್ಲ. ಕೊರಗ ಸಮುದಾಯದ ಯುವತಿ ಎಂಎಯಲ್ಲಿ ಫಸ್ಟ್ ಕ್ಲಾಸ್ ಬಂದಾಗ ಎಲ್ಲರೂ ನಾಮುಂದು, ತಾಮುಂದು ಎಂದು ಸನ್ಮಾನಿಸಿದರು. 2014ರ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿತರಾಗಿದ್ದರು. ಆದರೆ ಆಕೆಯ ಜೀವನ ದಡ ತಲುಪಿಸಲು ಯಾರೂ ಆಧಾರವಾಗಲಿಲ್ಲ. ಇಷ್ಟೆಲ್ಲ ಕಲಿತರೂ ವ್ಯವಸ್ಥೆ ಎದುರು ಹೋರಾಡಲಾಗದೆ ಮೀನಾಕ್ಷಿ ಈಗ ಬದುಕಿನ ಬಂಡಿ ಸಾಗಿಸಲು ಬೀಡಿಯನ್ನೇ ನೆಚ್ಚಿಕೊಂಡಿದ್ದಾರೆ.
ಬಡತನದ ಬದುಕು:
ಮೀನಾಕ್ಷಿ ಈಗ ಪ್ರತಿದಿನ 500-600 ಬೀಡಿ ಕಟ್ಟುತ್ತಾರೆ. 1 ಸಾವಿರ ಬೀಡಿ ಕಟ್ಟಿದರೆ ಸಿಗೋದು ಕೇವಲ 150 ರು., ಸಾವಿರ ಬೀಡಿ ಕಟ್ಟಲು 2 ದಿನ ಬೇಕಾಗುತ್ತದೆ. ಅವರ ಪತಿ ರತ್ನಾಕರ ಖಾಸಗಿ ಬಸ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಅವರಿಗೆ ವಾರಕ್ಕೆ ಎರಡೇ ದಿನ ಕೆಲಸ. ಮನೆಯಲ್ಲಿ ರತ್ನಾಕರ ಅವರ ವೃದ್ಧ ತಂದೆ ತಾಯಿ ಇದ್ದಾರೆ. ಕಡು ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ.
'ಇಷ್ಟು ಕಲಿತ ನಿನಗೇ ಕೆಲಸವಿಲ್ಲ, ಮತ್ತೆ ನಾವು ಕಲಿಯೋದ್ಯಾಕೆ'..?
‘ನಮ್ಮ ಇಡೀ ಕೊರಗ ಸಮುದಾಯದಲ್ಲಿ ಡಿಗ್ರಿ ಪೂರ್ತಿ ಮಾಡಿದವರೇ ಬೆರಳೆಣಿಕೆಯಷ್ಟು. ಸರ್ಕಾರಿ ಉದ್ಯೋಗಿಗಳು ಕೂಡ ಅತಿ ಕಡಿಮೆ. ನಾನು ಎಂಎ, ಎಂಫಿಲ್ ಮಾಡಿಯೂ ಬೀಡಿ ಕಟ್ಟುತ್ತಿರುವಾಗ ನಮ್ಮ ಸಮುದಾಯದವರು ಬಂದು, ಇಷ್ಟು ಕಲಿತ ನಿನಗೇ ಕೆಲಸ ಇಲ್ಲ. ಮತ್ತೆ ನಾವ್ಯಾಕೆ ಶಾಲೆಗೆ ಅಥವಾ ಕಾಲೇಜಿಗೆ ಹೋಗಬೇಕು ಎನ್ನುತ್ತಾರೆ’ ಎಂದು ಮೀನಾಕ್ಷಿ ಕಣ್ಣೀರು ಸುರಿಸುತ್ತಾರೆ.
ಕೆಲಸಕ್ಕೆ ಅರ್ಜಿ ಹಾಕಿದರೂ ಪ್ರತಿಫಲವಿಲ್ಲ:
ಎಂಎ ಆದ ಬಳಿಕ ಪಾತೂರು ಶಾಲೆಯಲ್ಲಿ ಎರಡು ವರ್ಷ 1ನೇ ತರಗತಿ ಮಕ್ಕಳಿಗೆ ಮೀನಾಕ್ಷಿ ಪಾಠ ಮಾಡಿದ್ದಾರೆ. ಈ ನಡುವೆ ಆದಿವಾಸಿ ಅಭಿವೃದ್ಧಿ ಚೇರಿಯಲ್ಲಿ ಸಹಾಯಕಿಯಾಗಿ ಮೂರು ತಿಂಗಳು ಕೆಲಸ ಮಾಡಿದ್ದಾರೆ. ಬಳಿಕ ಎಂಫಿಲ್‌ಗೆ ಸೇರಿದ್ದು, ಎರಡು ವಾರದ ಹಿಂದಷ್ಟೆ ಅದರ ಫಲಿತಾಂಶವೂ ಬಂದಿದೆ. ಕೆಲಸಕ್ಕಾಗಿ ಕೆಲವೆಡೆ ಅರ್ಜಿ ಹಾಕಿದ್ದರೂ ಇದುವರೆಗೂ ಕೆಲಸ ಸಿಕ್ಕಿಲ್ಲ. ಹಾಗಾಗಿ ಬೀಡಿಯನ್ನೇ ನೆಚ್ಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೆಲಸ ಸಿಕ್ಕಿದರೂ ಮಾಡಲು ಸಿದ್ಧನಿದ್ದೇನೆ ಎನ್ನುತ್ತಾರವರು.
ಬಿಎಡ್ ಕಂಪ್ಲೀಟ್ ಮಾಡಲು ಅವಕಾಶವಿಲ್ಲ!
ಮೀನಾಕ್ಷಿ ಬಿಎಡ್ ಕಲಿಯುವಾಗ ಕೋರ್ಸ್ ಅವಧಿ1 ವರ್ಷವಿತ್ತು. ಮರು ವರ್ಷದಿಂದಲೇ 2 ವರ್ಷದ ಕೋರ್ಸ್ ಆರಂಭವಾಗಿತ್ತು. ಬಿಎಡ್ ಪರೀಕ್ಷೆ ಸಮಯದಲ್ಲಿ
ಗರ್ಭಿಣಿಯಾಗಿದ್ದರಿಂದ ಒಂದು ವಿಷಯ (ಸೈಕಾಲಜಿ) ಅನುತ್ತೀರ್ಣರಾಗಿದ್ದಾರೆ. ಆದರೆ ಈಗ 2 ವರ್ಷದ ಕೋರ್ಸ್ ಆರಂಭವಾಗಿದ್ದರಿಂದ ಒಬ್ಬರಿಗೋಸ್ಕರವೇ
ಪರೀಕ್ಷೆ ನಡೆಸಬೇಕಾ ಎಂದು ಕಾಲೇಜಿನವರು ಕೇಳುತ್ತಿದ್ದಾರಂತೆ. ಪರೀಕ್ಷೆ ಬರೆಯಲು ಅವಕಾಶ ನೀಡಿದರೆ ಶಾಲೆಯಲ್ಲಾದರೂ ಕೆಲಸ ಮಾಡಿ ಬದುಕುವ ಆತ್ಮವಿಶ್ವಾಸವನ್ನು ಮೀನಾಕ್ಷಿ ವ್ಯಕ್ತಪಡಿಸಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ನಿರುದ್ಯೋಗ, ರೈತರ ವಿಷಯಕ್ಕೆ ಕಾಂಗ್ರೆಸ್ ಧ್ವನಿ