* ಮೇಲ್ಸೇತುವೆ ಲೋಕಾರ್ಪಣೆ ಕಾಮಗಾರಿಯಲ್ಲಿ ಸಂಸದ ಶಿವಕುಮಾರ ಉದಾಸಿ
* ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ಕೊಟ್ಟಿದ್ದೇವೆ
* 254 ಕೋಟಿ ಅನುದಾನ ಕೇಂದ್ರ ಬಜೆಟ್‌ನಲ್ಲಿ ಕೊಡಲಾಗಿದೆ
ಹಾವೇರಿ(ಮೇ.03): ಹುಬ್ಬಳ್ಳಿ-ಬೆಂಗಳೂರು(Hubballi-Bengaluru) ಮಾರ್ಗದಲ್ಲಿ ಮುಂದಿನ ದಿನಗಳಲ್ಲಿ ವಂದೆ ಭಾರತ ರೈಲು 160 ಕಿಮೀ ವೇಗದಲ್ಲಿ ಸಂಚರಿಸಲಿದೆ. ಆರಂಭದಲ್ಲಿ ಐದಾರು ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಹೊಂದಲಿದೆ. ಶೀಘ್ರದಲ್ಲೇ ಹುಬ್ಬಳ್ಳಿ-ದಾವಣಗೆರೆಗೆ ಡೆಮೋ ರೈಲು ಸಂಚರಿಸಲಿದೆ ಎಂದು ಸಂಸದ ಶಿವಕುಮಾರ ಉದಾಸಿ(Shivakumar Udasi) ಹೇಳಿದರು.
ತಾಲೂಕಿನ ಕರಜಗಿ ಗ್ರಾಮದ ರೈಲ್ವೆ ನಿಲ್ದಾಣದ ಬಳಿ .21.13ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಳೆದ ರೈಲ್ವೆ ಬಜೆಟ್‌ನಲ್ಲಿ(Railway Budget) .2.39 ಲಕ್ಷ ಕೋಟಿ ವ್ಯಯಿಸಲಾಗುತ್ತಿದೆ. ನೈಋುತ್ಯ ರೈಲ್ವೆ ವಿಭಾಗಕ್ಕೆ .6,900 ಕೋಟಿ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 43 ಹೆಚ್ಚುವರಿಯಾಗಿ ಕೊಡಲಾಗಿದೆ. ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ಕೊಟ್ಟಿದ್ದೇವೆ. ಹೊಸ ಲೈನ್, ಡಬ್ಲಿಂಗ್‌ಗೆ .2325 ಕೋಟಿ ಕೊಟ್ಟಿದ್ದೇವೆ. ರಸ್ತೆ ಹಾಗೂ ಹಳಿ ಸುರಕ್ಷತೆಗೆ .625 ಕೋಟಿ, ಸೇತುವೆ ನಿರ್ಮಾಣಕ್ಕೆ .254 ಕೋಟಿ ಅನುದಾನವನ್ನು ಕೇಂದ್ರ ಬಜೆಟ್‌ನಲ್ಲಿ ಕೊಡಲಾಗಿದೆ ಎಂದರು.
Hindi Imposition ಭಾಷೆ ಅಂತ ಬಂದಾಗ ಮಾತೃಭಾಷೆಯೇ ಮೊದಲು: ಉದಾಸಿ
ಹಾವೇರಿ-ಸವಣೂರು(Haveri-Savanur) 20 ಕಿಮಿ ರೈಲ್ವೆ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಕರಜಗಿ ಹಾಗೂ ಹಾವೇರಿಯಲ್ಲಿ ಸ್ಟೇಷನ್ ಕಟ್ಟಡ ನಿರ್ಮಿಸಲಾಗುತ್ತಿದೆ. ಕರಜಗಿ, ಸವಣೂರಿನಲ್ಲಿ ಹೈ ಲೆವಲ್ ಪ್ಲಾಟ್‌ಫಾರಂ ಮಾಡುತ್ತಿದ್ದೇವೆ. ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ .50 ಕೋಟಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ರಾಣಿಬೆನ್ನೂರು ಪ್ಲಾಟ್‌ಫಾರಂನ ವಿಸ್ತರಣೆ ಕೆಲಸ ನಡೆದಿದೆ. ಗದಗ-ಯಲವಿಗಿ 55 ಕಿಮೀ ಉದ್ದದ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ .125 ಕೋಟಿ ಮೀಸಲಿಟ್ಟಿದೆ ಎಂದು ತಿಳಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಮೋಟೆಬೆನ್ನೂರ, ರಾಣಿಬೆನ್ನೂರ ಬಳಿ ಕಾಮಗಾರಿ ಮಂದಗತಿಯಲ್ಲಿ ನಡೆಯತ್ತಿದೆ. ಗುಣಮಟ್ಟದೊಂದಿಗೆ ಶೀಘ್ರದಲ್ಲಿ ಯಾರು ಕಾಮಗಾರಿಯನ್ನು ಪೂರ್ಣಗೊಳಿಸುತ್ತಾರೋ ಅವರಿಗೆ ಟೆಂಡರ್ ಕೊಡಿ, ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.
ಕರಜಗಿ ಗ್ರಾಮದ ಬಳಿ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಬಹುಬೇಡಿಕೆ ಇತ್ತು. ಹೀಗಾಗಿ .21.13ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದ್ದು, ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಫುಟ್‌ಪಾತ್ ಸಹ ನಿರ್ಮಿಸಲಾಗಿದೆ. 2018ರಲ್ಲಿ ಆರಂಭವಾಗಿದ್ದ ಕಾಮಗಾರಿ ಕೋವಿಡ್ ಕಾರಣದಿಂದ ಒಂದು ವರ್ಷ ತಡವಾಗಿ ಮುಗಿದಿದೆ. ಈ ವರ್ಷದ ಬಜೆಟ್‌ನಲ್ಲಿ ನಮ್ಮ ಜಿಲ್ಲೆಯ 6 ರಸ್ತೆ ಕೆಳ ಸೇತುವೆ ಹಾಗೂ ರಸ್ತೆ ಮೇಲ್ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕೆಳ ಸೇತುವೆಗಳನ್ನು ಮೇಲ್ಸೇತುವೆಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಒತ್ತು ನೀಡಲಾಗುವುದು. ನಾಗೇಂದ್ರಮಟ್ಟಿಯಲ್ಲಿ ಸೇತುವೆ ನಿರ್ಮಾಣದ ಬೇಡಿಕೆ ಇದ್ದು, ರೈಲ್ವೆ ಇಲಾಖೆಯ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿ ಡಿಪಿಆರ್(DPR) ತಯಾರಿಸಲು ಸೂಚಿಸಲಾಗಿದೆ. ರಾಣೆಬೆನ್ನೂರ-ಗುತ್ತಲ ಮಾರ್ಗದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.
Haveri: ಕಸಾಪ ವಿಶೇಷ ಸಭೆಯಲ್ಲಿ ಕೋಲಾಹಲ: ಮಹೇಶ್ ಜೋಶಿ ವಿರುದ್ಧ ಮೊಳಗಿದ ಧಿಕ್ಕಾರ
ಶಾಸಕ ನೆಹರು ಓಲೇಕಾರ ಮಾತನಾಡಿ, ಕರಜಗಿ ರಸ್ತೆ ರಸ್ತೆ ಮೇಲ್ಸೇತುವೆ ನಿರ್ಮಾಣವಾಗಿರುವುದರಿಂದ ಈ ಭಾಗದ ರೈತರಿಗೆ,ಜನತೆಗೆ ಸಾಕಷ್ಟುಅನುಕೂಲವಾಗಿದೆ. ಸಂಸದ ಶಿವಕುಮಾರ ಉದಾಸಿ ಅವರು ರೈಲ್ವೆ ಇಲಾಖೆಯ ಕೆಲಸಗಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ಮಾಡುತ್ತಿದ್ದಾರೆ. ಹೀಗಾಗಿ ಉದಾಸಿ ಅವರು ಸಂಸದರಾದ ಬಳಿಕ ಜಿಲ್ಲೆಯ ರೈಲ್ವೆ ಇಲಾಖೆಯ ಸಮಸ್ಯೆಗಳು ಬಗೆಹರಿಯುತ್ತಿವೆ. ಹಾವೇರಿಯ ನಾಗೇಂದ್ರಮಟ್ಟಿ ಬಳಿ ಕೆಳ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇದ್ದು, ಸಂಸದರು ಇದನ್ನೂ ಸಹ ಸಾಕಾರಗೊಳಿಸಬೇಕು. ಹುಬ್ಬಳ್ಳಿ-ದಾವಣಗೆರೆ ನಡುವೆ ಡೆಮೋ ರೈಲಿಗೆ ಚಾಲನೆ ನೀಡಿದರೆ ಈ ಭಾಗದ ಜನತೆಗೆ ಸಾಕಷ್ಟು ಅನುಕೂಲ ಆಗಲಿದೆ ಎಂದರು.
ಗ್ರಾಪಂ ಅಧ್ಯಕ್ಷ ಆನಂದ ಕಾಗದ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೆಡ, ಮುಖ್ಯ ಎಂಜಿನಿಯರ್ ಆನಂದ ಭಾರತಿ, ಉಪ ಮುಖ್ಯ ಎಂಜಿನಿಯರ್ ದೇವೇಂದ್ರ ಗುಪ್ತ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಹರಿತಾ ಎಸ್. ಇತರರು ಇದ್ದರು.