ಸಾಗರದಲ್ಲಿ ಶೀಘ್ರ BSNL 4G ಸೇವೆ ಆರಂಭ; ಶಾಸಕ ಹಾಲಪ್ಪ

By Kannadaprabha News  |  First Published Oct 16, 2022, 7:38 AM IST
  • ಪೈಲೆಟ್‌ ಯೋಜನೆಗೆ ಸಾಗರ ಆಯ್ಕೆ ಹೆಮ್ಮೆಯ ಸಂಗತಿ
  • ದೂರ ಸಂಪರ್ಕ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಚ್‌.ಹಾಲಪ್ಪ ಹೇಳಿಕೆ
  • ದೇಶದ 4 ತಾಲೂಕು ಮಾತ್ರ ಯೋಜನೆಗೆ ಆಯ್ಕೆ

ಸಾಗರ (ಅ.16) : ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೆ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪೈಲೆಟ್‌ ಯೋಜನೆಗೆ ಸಾಗರ ತಾಲೂಕು ಆಯ್ಕೆಯಾಗಿದೆ. ಇಡೀ ದೇಶದ ನಾಲ್ಕು ತಾಲೂಕುಗಳು ಈ ಯೋಜನೆಗೆ ಆಯ್ಕೆಯಾಗಿದ್ದು, ಇದರಲ್ಲಿ ಸಾಗರ ತಾಲೂಕು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.

5G in India : ಹೇಗಿರಲಿದೆ 5ಜಿ ದುನಿಯಾ? ಕಾರ್ಯನಿರ್ವಹಣೆ ಹೇಗೆ?

Tap to resize

Latest Videos

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ದೂರಸಂಪರ್ಕ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ಇಂಟರ್‌ನೆಟ್‌ ಸಂಪರ್ಕ ಪಡೆಯಲು ಯಾವುದೇ ವೆಚ್ಚ ಇರುವುದಿಲ್ಲ. ಮೋಡಮ್‌ ಸಹ ಉಚಿತವಾಗಿ ನೀಡಲಾಗುತ್ತಿದ್ದು, ಮೊದಲ ಎರಡೂವರೆ ತಿಂಗಳು ತಿಂಗಳಿಗೆ .110 ಶುಲ್ಕ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಕರೂರು, ಭಾರಂಗಿ ಹೋಬಳಿ ಸೇರಿದಂತೆ ನೆಟ್‌ವರ್ಕ್ ಇಲ್ಲದ ಪ್ರದೇಶಕ್ಕೆ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 2018ರಿಂದಲೂ ಪ್ರಯತ್ನ ನಡೆಸಲಾಗಿತ್ತು. ಕೇಂದ್ರ ಸರ್ಕಾರದಲ್ಲಿ ಅಂದಿನ ಸಂಪರ್ಕ ಸಚಿವರಾಗಿದ್ದ ಮನೋಜ್‌ ಕುಮಾರ್‌ ಸಿನ್ಹಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆನಂತರವೂ ಹಲವು ಬಾರಿ ತಾಲೂಕಿನ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿತ್ತು. ಈಚೆಗೆ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ನೆಟ್‌ವರ್ಕ್ ಸಮಸ್ಯೆ ಮನಮುಟ್ಟುವಂತೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರು. ಇವೆಲ್ಲದರ ಪರಿಣಾಮ ಇದೀಗ ತಾಲೂಕು ಪೈಲೆಟ್‌ ಪ್ರಾಜೆಕ್ಟ್ಗೆ ಸೇರಿಸಲಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ಸಚಿವರನ್ನು ಅಭಿನಂದಿಸುವುದಾಗಿ ಹೇಳಿದರು.

ಗ್ರಾಮೀಣ ಭಾಗಕ್ಕೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ತಾಲೂಕಿಗೆ 36 ಮೊಬೈಲ್‌ ಟವರ್‌ ಸಹ ಮಂಜೂರಾಗಿದ್ದು, ಅದನ್ನು ಶೀಘ್ರದಲ್ಲಿಯೆ ಅಳವಡಿಸಲಾಗುತ್ತದೆ. ತಾಲೂಕಿನಲ್ಲಿ ಮೊಬೈಲ್‌ ಸಿಗ್ನಲ್‌ ಇಲ್ಲದ 36 ಪ್ರದೇಶಗಳನ್ನು ಗುರುತಿಸಿದ್ದು, ಡಿ.2023ರೊಳಗೆ ಈ ಎಲ್ಲ ಪ್ರದೇಶಕ್ಕೆ 4ಜಿ ಸೇವೆ ಪ್ರಾರಂಭಿಸಲು ಅನುಮೋದನೆ ಸಿಕ್ಕಿದೆ ಎಂದರು.

ಪೈಲೆಟ್‌ ಯೋಜನೆಯಡಿ ಇಂಟರ್‌ನೆಟ್‌ ಸೌಲಭ್ಯ ಬೇಕಾದವರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕು. ನವೆಂಬರ್‌ 30ರೊಳಗೆ ಅರ್ಜಿ ಸಲ್ಲಿಸಿ ನೆಟ್‌ವರ್ಕ್ ಪಡೆಯಬೇಕು ಎಂಬ ನಿಯಮವಿದೆ. ದಿನಾಂಕವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಹ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಯೋಜನೆ ಯಶಸ್ವಿಗೊಳಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಹೇಳಿದರು.

ಕರ್ನಾಟಕ ಟೆಲಿಕಾಂ ವಿಭಾಗದ ಡೆಪ್ಯುಟಿ ಡೈರೆಕ್ಟರ್‌ ಆಫ್‌ ಜನರಲ್‌ ಸಂಜೀವ್‌ ಪಿಕಾ ಮಾತನಾಡಿ, ನವೆಂಬರ್‌ ಒಳಗೆ ಗ್ರಾಮೀಣ ಪ್ರದೇಶದ ಎಲ್ಲರಿಗೂ ಉಚಿತ ಇಂಟರ್‌ನೆಟ್‌ ಸೌಲಭ್ಯ ನೀಡಲಾಗುತ್ತದೆ. ಪ್ರಾಂಚ್ಯೆಸಿಗಳ ಮೂಲಕ ಇಂಟರ್‌ನೆಟ್‌ ಸಂಪರ್ಕ ನೀಡಲಾಗುತ್ತದೆ. ಹೆಚ್ಚುವರಿ ಶುಲ್ಕವನ್ನು ಪಡೆಯಲು ಅವಕಾಶವಿಲ್ಲ. ಒಂದೊಮ್ಮೆ ಹೆಚ್ಚುವರಿ ಶುಲ್ಕ ಪಡೆದರೆ ಅಂತಹ ಪ್ರಾಂಚ್ಯೆಸಿ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಎರಡು ಮೂರು ದಿನದೊಳಗೆ ಸಂಪರ್ಕ ನೀಡಲು ಸೂಚನೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಜರಿದ್ದು ಅರ್ಜಿಯನ್ನು ಪಡೆಯುತ್ತಾರೆ. ಅರ್ಜಿದಾರರು ಆಧಾರ್‌ ಕಾರ್ಡ್‌ ಝೆರಾಕ್ಸ್‌ ಮತ್ತು ಫೋಟೋ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಮೊಬೈಲ್‌ನಿಂದ ದೂರ, 24 ಗಂಟೆಗಳ ಡಿಜಿಟಲ್ ಉಪವಾಸ ನಡೆಸಿದ ಜೈನ ಸಮುದಾಯ

ಸುದ್ದಿಗೋಷ್ಠಿಯಲ್ಲಿ ಭಾರತ ಸಂಚಾರ್‌ ನಿಗಮದ ಜಂಟಿ ಕಾರ್ಯದರ್ಶಿ ಸುನೀಲ್‌ಕುಮಾರ್‌ ವರ್ಮ, ನಿಗಮದ ರವಿಕುಮಾರ್‌, ವೆಂಕಟೇಶ್‌, ಲಕ್ಷ್ಮೇನಾರಾಯಣ, ತಾಲೂಕು ಪಂಚಾಯಿತಿ ಇಓ ಪುಷ್ಪಾ ಕಮ್ಮಾರ್‌, ಬಿಜೆಪಿ ಪ್ರಮುಖರಾದ ವಿ.ಮಹೇಶ್‌, ಗಣೇಶಪ್ರಸಾದ್‌, ಲೋಕನಾಥ ಬಿಳಿಸಿರಿ, ದೇವೇಂದ್ರಪ್ಪ, ವಿನಾಯಕ ರಾವ್‌, ರವೀಂದ್ರ ಬಿ.ಟಿ. ಇನ್ನಿತರರು ಹಾಜರಿದ್ದರು.

ಈ ಸಂದರ್ಭದಲ್ಲಿ ಯೋಜನೆಯ ಮಾಹಿತಿ ಕರಪತ್ರವನ್ನು ಭಾರತ ಸಂಚಾರ್‌ ನಿಗಮದ ಜಂಟಿ ಕಾರ್ಯದರ್ಶಿ ಸುನೀಲ್‌ಕುಮಾರ್‌ ವರ್ಮ ಶಾಸಕರಿಗೆ ಹಸ್ತಾಂತರಿಸಿದರು. ಅಧಿಕಾರಿಗಳನ್ನು ಅಭಿನಂದಿಸಲಾಯಿತು.

click me!