ರಾಯಚೂರು: ಅರಕೇರಾದಲ್ಲಿ ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ, ಕುಂಭ, ಕಳಸ ಹೊತ್ತ ಮಹಿಳೆಯರಿಂದ ಸ್ವಾಗತ

By Kannadaprabha News  |  First Published Oct 16, 2022, 7:04 AM IST

ಕಂದಾಯ ಸಚಿವರೇ ಖುದ್ದಾಗಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅರಕೇರಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.


ಅರಕೇರಾ(ರಾಯಚೂರು)(ಅ.16):  ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಭಾಗವಾಗಿ ಜಿಲ್ಲೆಯ ಅರಕೇರಾದಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದ ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೆ ಶನಿವಾರ ಅದ್ಧೂರಿ ಸ್ವಾಗತ ನೀಡಲಾಯಿತು. ಕಂದಾಯ ಸಚಿವರೇ ಖುದ್ದಾಗಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅರಕೇರಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕಂದಾಯ ಸಚಿವರು ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಇಡೀ ಅರಕೇರಾದಲ್ಲಿ ಅಶೋಕ್‌ ಅವರನ್ನು ಸ್ವಾಗತಿಸುವ ಬ್ಯಾನರ್‌ಗಳು, ಫ್ಲೆಕ್ಸ್‌ಗಳ ಅಬ್ಬರ ಎದ್ದು ಕಾಣುತ್ತಿತ್ತು. ಅಶೋಕ್‌ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆಕರ್ಷಕವಾಗಿ ಅಲಂಕಾರ ಮಾಡಿದ್ದ ಟ್ರ್ಯಾಕ್ಟರ್‌ ಟ್ರ್ಯಾಲಿಯಲ್ಲಿ ಸಚಿವರ ಭವ್ಯ ಮೆರವಣಿಗೆ ನಡೆಸಲಾಯಿತು. ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಟ್ರ್ಯಾಕ್ಟರ್‌ ಟ್ರ್ಯಾಲಿ ಹತ್ತಿದ ಸಚಿವರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಂಚರಿಸಿದರು. ಡೊಳ್ಳು, ವಾದ್ಯಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ-ಕಳಸಗಳೊಂದಿಗೆ ಹೆಜ್ಜೆ ಹಾಕಿದರು. ನಂತರ ಸಿದ್ದಯ್ಯ ಹವಲ್ದಾರ್‌ ಸರ್ಕಾರಿ ಪ್ರೌಢ ಶಾಲಾ ಕ್ರಿಡಾಂಗಣದಲ್ಲಿ ವೇದಿಕೆ ಪಕ್ಕದಲ್ಲಿ ಹಾಕಲಾಗಿದ್ದ ವಿವಿಧ ಇಲಾಖೆಗಳ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು.

Latest Videos

undefined

ಶಾಲೆ ಬಿಟ್ಟಿದ್ದ ಬಾಲಕ; ಜಿಲ್ಲಾಧಿಕಾರಿ ವಿಶೇಷ ಕಾಳಜಿಯಿಂದ ಮತ್ತೆ ಶಾಲೆಗೆ!

ಸ್ವತಃ ಕೃತಕ ಕಾಲು ಜೋಡಿಸಿದ ಸಚಿವ

ಗ್ರಾಮವಾಸ್ತವ್ಯದ ಭಾಗವಾಗಿ ಗ್ರಾಮದ ಸಿದ್ದಯ್ಯ ಹವಲ್ದಾರ್‌ ಸರ್ಕಾರಿ ಪ್ರೌಢ ಶಾಲಾ ಕ್ರಿಡಾಂಗಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಸಲಕರಣೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ವೇದಿಕೆ ಮೇಲೆ ಫಲಾನುಭವಿಗಳನ್ನು ಕುಳ್ಳಿರಿಸಿ ಅವರ ಮುಂದಿನ ಕುರ್ಚಿಯಲ್ಲಿ ಸಚಿವರು ಕುಳಿತು ಕಾಲು ಇಲ್ಲದವರಿಗೆ ಕೃತಕ ಕಾಲು ಜೋಡಿಸಿದರು. ಕಣ್ಣು ಇಲ್ಲದವರಿಗೆ ಹೈಟೆಕ್‌ ತಂತ್ರಜ್ಞಾನದ ಕೈಕಟ್ಟಿಗೆ, ಕಿವುಡರಿಗೆ ಕಿವಿ ಯಂತ್ರಗಳನ್ನು ತಾವೇ ಇಟ್ಟು ಸಚಿವರು ಸರಳತೆ ಮೆರೆದರು.

ವೇದಿಕೆ ಕಾರ್ಯಕ್ರಮ ಸೇರಿ ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಮಸ್ಯೆ ಆಲಿಸಿದ ಸಚಿವರು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಗ್ರಾಮದ ಬಿಸಿಎಂ ಶಾಲೆಯಲ್ಲಿ ರಾತ್ರಿ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಿದರು.

ಅರಕೇರಾ ತಾಲೂಕು ಎಂದು ಅಧಿಕೃತ ಘೋಷಣೆ

ಅರಕೇರಾ: ವರ್ಷದ ಹಿಂದೆ ಸಚಿವ ಸಂಪುಟದಲ್ಲಿ ಅರಕೇರಾವನ್ನು ತಾಲೂಕಾಗಿ ಘೋಷಣೆ ಮಾಡಿದ್ದರೂ ಅದನ್ನು ಅನುಷ್ಠಾನ ಮಾಡುವಲ್ಲಿ ಆಗುತ್ತಿದ್ದ ವಿಳಂಬಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಶನಿವಾರ ಇತಿಶ್ರೀ ಹಾಡಿದರು. ಗ್ರಾಮವಾಸ್ತವ್ಯಕ್ಕೆ ಆಗಮಿಸಿದ್ದ ಅವರು ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ್ದಲ್ಲದೆ ಶೀಘ್ರದಲ್ಲೇ ಈ ಸಂಬಂಧ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ಮಾಹಿತಿ ನೀಡಿದರು.

ಇಂದು ಗ್ರಾಮ-ನಾಳೆ ತಾಲೂಕು: ಗ್ರಾಮವಾಸ್ತವ್ಯದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ್‌ ಅವರು ಇಂದು ಸಾವಿರ ಸಲ ಅರಕೇರಾ ಗ್ರಾಮ ಎಂದು ಹೇಳಿಬಿಟ್ಟುಬಿಡಿ. ನಾಳೆಯಿಂದ ಅರಕೇರಾ ತಾಲೂಕು ಎಂದು ಕರೆಯಿರಿ, ಇದು ಗ್ರಾಮಕ್ಕೆ ಕಂದಾಯ ಇಲಾಖೆಯ ಕೊಡುಗೆಯಾಗಿದೆ. ಅಷ್ಟೇ ಹೊಸ ತಾಲೂಕು ಕೇಂದ್ರಕ್ಕೆ ಒಬ್ಬ ತಹಸೀಲ್ದಾರ್‌, ತಲಾ ಇಬ್ಬರು ಗ್ರೇಡ್‌-2 ತಹಸೀಲ್ದಾರರು, ಶಿರಸ್ತೇದಾರರು, ಮೂರು ಫುಡ್‌ ಇನ್ಸ್‌ಪೆಕ್ಟರ್‌, ಬೆರಳಚ್ಚುಗಾರರು, ವಾಹನ ಚಾಲಕರು ಸೇರಿ ಒಟ್ಟು 17 ಹುದ್ದೆಗಳನ್ನು ನೀಡಲಾಗುತ್ತಿದೆ. ಇದರ ಜತೆಗೆ ಶಾಸಕ ಕೆ.ಶಿವನಗೌಡ ನಾಯಕ ಅವರ ಒತ್ತಾಸೆ ಮೇರೆಗೆ ಅರಕೇರಾದಲ್ಲಿ ಆಡಳಿತ ಭವನ ನಿರ್ಮಾಣಕ್ಕೆ ಅನುದಾನವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.

ಹುಗ್ಗಿ, ಸಾಂಬರ್‌ ಅನ್ನದ ರುಚಿ

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿಗೆ ಈ ಭಾಗದ ವಿಶೇಷವಾಗಿರುವ ಹುಗ್ಗಿ ಅನ್ನ ಸಾಂಬಾರ್‌ ಬಡಿಸಲಾಯಿತು. ಕಾರ್ಯಕ್ರಮದÜಲ್ಲಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದ್ದು, 25 ಕ್ವಿಂಟಲ್‌ ಅನ್ನ ಹಾಗೂ 7 ಕ್ವಿಂಟಲ್‌ ಹುಗ್ಗಿ ತಯಾರಿಸಿ, ಸುಮಾರು 25 ಕೌಂಟರ್‌ಗಳಲ್ಲಿ ಬಡಿಸಲಾಯಿತು. ಊಟಕ್ಕಾಗಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೌಂಟರ್‌ ಇತ್ತು. ಬೆಳಗ್ಗೆ 11ಗಂಟೆಗೆಯಿಂದ ಸಂಜೆ 5ಗಂಟೆಗೆವರೆಗೂ ಜನರಿಗೆ ಹುಗ್ಗಿ ಅನ್ನ ಸಾಂಬರ್‌ ಬಡಿಸಲಾಯಿತು.

ಗ್ರಾಮ ವಾಸ್ತವ್ಯದಲ್ಲಿ ಶಾಸಕರ ಹಾಜರಿ ಕಡ್ಡಾಯ?: ಸಚಿವ ಅಶೋಕ್‌

ಬಿಪಿ ಪರಿಶೀಲಿಸಿಕೊಂಡ ಸಚಿವ

ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿಯೇ ಹಾಕಲಾಗಿದ್ದ ಮಳಿಗೆಗಳು ಎಲ್ಲರನ್ನೂ ಆಕರ್ಷಿಸಿದವು. ಸುಮಾರು 32 ಇಲಾಖೆಗಳು ಒಂದೇ ಸೂರಿನಡಿ ಶಿಬಿರ ಆಯೋಜಿಸಿದ್ದು, ಸಚಿವ ಆರ್‌.ಅಶೋಕ್‌ ಕೌಂಟರ್‌ ಉದ್ಘಾಟನೆ ಮಾಡಿ ಸ್ವತಃ ಪ್ರತಿಯೊಂದು ಕೌಂಟರ್‌ಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ವೇಳೆ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಸ್ಟಾಲ್‌ಗೆ ಭೇಟಿ ನೀಡಿ ತಮ್ಮ ಬಿಪಿ ತಪಾಸಣೆ ಮಾಡಿಸಿಕೊಂಡರು.

1853 ಅರ್ಜಿ ಸಲ್ಲಿಕೆ, 508 ಅರ್ಜಿ ಸ್ಥಳದಲ್ಲೇ ಇತ್ಯಸ್ಥ

ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಜನರಿಂದ ಅಹವಾಲು ಸ್ವೀಕರಿಸಿ, ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು. ಸುಮಾರು ಒಂದೂವರೆ ತಾಸು ನಡೆದ ಸಭೆಯಲ್ಲಿ ಅರಕೇರಾ ಸೇರಿ ದೇವದುರ್ಗ ತಾಲೂಕಿನ ವಿವಿಧ ಗ್ರಾಮಸ್ಥರಿಂದ ಕಂದಾಯ, ಲೋಕೋಪಯೋಗಿ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಕೋರಿ ಒಟ್ಟು 1,853 ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳಲ್ಲಿ 508 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಯಿತು. ಉಳಿದ 1345 ಅರ್ಜಿಗಳನ್ನು ಆದಷ್ಟುಶೀಘ್ರ ಇತ್ಯರ್ಥ ಪಡಿಸಲು ಸೂಚಿಸಲಾಯಿತು.
 

click me!