ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ಬಾಣಾವರ ಬಳಿ ನಡೆದ ಘಟನೆ
ಹಾಸನ(ಅ.16): ಕೆಎಸ್‌ಆರ್‌ಟಿಸಿ ಬಸ್, ಕೆಎಂಎಫ್ ಹಾಲಿನ ಟ್ಯಾಂಕರ್ ಹಾಗೂ ಟಿಟಿ ವಾಹನ ನಡುವೆ ನಡೆದ ಭೀಕರ ಅಪಘಾತದಲ್ಲಿ 9 ಜನ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ಬಾಣಾವರ ಬಳಿ ನಿನ್ನೆ(ಶನಿವಾರ) ನಡೆದಿದೆ.
ಒಂದೇ ಗ್ರಾಮದ ಏಳು ಜನರು ಹಾಗೂ ಮತ್ತೊಂದು ಗ್ರಾಮದ ಇಬ್ಬರು ಸಾವನ್ನಪ್ಪಿದ್ದಾರೆ. ಸಾಲಾಪುರ ಗ್ರಾಮದ 7 ಹಾಗೂ ದೊಡ್ಡಿಹಳ್ಳಿ ಗ್ರಾಮದ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
undefined
ಮೃತರನ್ನ ದೊಡ್ಡಹಳ್ಳಿಯ ಕಂದಮ್ಮ ದೃವ(2), ತನ್ಮಯ್(10), ಸಾಲಾಪುರದ ಲೀಲಾವತಿ(50), ಚೈತ್ರ(33), ಸಮರ್ಥ(10), ಡಿಂಪಿ(12), ವಂದನ(20), ದೊಡ್ಡಯ್ಯ(60) ಹಾಗೂ ಭಾರತಿ(50) ಅಂತ ಗುರುತಿಸಲಾಗಿದೆ.
BMTC ಬಸ್‌ಗೆ ವಿದ್ಯಾರ್ಥಿನಿ ಸಾವು; ಜ್ಞಾನಭಾರತಿಯಲ್ಲಿ ವಾಹನ ವೇಗಕ್ಕೆ ಬ್ರೇಕ್
ಗಾಯಾಳುಗಳನ್ನ ಅರಿಸೀಕೆರೆ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದುರ್ಘಟನೆಯಲ್ಲಿ ಗಾಯಗೊಂಡ ನಾಲ್ವರ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಿದ್ದಾರೆ.
ಘಟನಾ ಸ್ಥಳಕ್ಕೆ ಬಾಣಾವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅರಸೀಕೆರೆ ಶವಾಗಾರದ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪುಟ್ಟ ಮಕ್ಕಳ ಮೃತದೇಹ ಕಂಡು ಸಂಬಂಧಿಕರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ರಾತ್ರಿ ಧಾರ್ಮಿಕ ಕ್ಷೇತ್ರದ ಪ್ರವಾಸ ಮುಗಿಸಿ ವಾಪಸ್ ಮರಳೋ ವೇಳೆ ಕೆಎಂಎಫ್ ಹಾಲಿನ ಟ್ಯಾಂಕರ್ ಮತ್ತು ಟಿಟಿ ವಾಹನ ಮತ್ತು ಸಾರಿಗೆ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ಭೀಕರ ದೃಶ್ಯ ಕಂಡು ಸಂಬಂಧಿಕರು ಗೋಳಾಡುತ್ತಿದ್ದಾರೆ. ನಿನ್ನೆವರೆಗೂ ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಪುಟಾಣಿಗಳು ಇಂದು ಇಹಲೋಕ ತ್ಯಜಿಸಿವೆ. ಎರಡು ದಿನದ ಹಿಂದಷ್ಟೇ ಹಬ್ಬ ಮುಗಿಸಿ ಧರ್ಮಸ್ಥಳಕ್ಕೆ ಹೋಗಿದ್ರು, ಹೀಗೆ ವಾಪಸ್ ಬಂದ್ರಲ್ಲಾ ಅಂತ ಸಂಬಂಧಿಕರು ರೋಧಿಸುತ್ತಿದ್ದಾರೆ.