ರಾಜ್ಯದ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಇಡಿಎಸ್‌ಒ ವಿದ್ಯಾರ್ಥಿ ಸಂಘಟನೆಯವರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮೈಸೂರು : ರಾಜ್ಯದ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಇಡಿಎಸ್‌ಒ ವಿದ್ಯಾರ್ಥಿ ಸಂಘಟನೆಯವರು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಜು.7ಕ್ಕೆ ರಾಜ್ಯತನ್ನ ಬಜೆಟ್ ಮಂಡನೆ ಮಾಡಲಿದೆ. ಈ ಬಜೆಟ್ ರಾಜ್ಯದ ಶಿಕ್ಷಣದ ಅಗತ್ಯಗಳು ಮತ್ತು ಶೈಕ್ಷಣಿಕ ಸವಾಲುಗಳಿಗೆ ಉತ್ತರವಾಗಿ, ವಿದ್ಯಾರ್ಥಿ ಪರವಾದ ಬಜೆಟ್ ಆಗಿ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ಇದೆ. ರಾಜ್ಯವ್ಯಾಪಿ ವಿದ್ಯಾರ್ಥಿಗಳ ಆಗ್ರಹಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದೇವೆ ಎಂದರು.
undefined
ವಿದ್ಯಾರ್ಥಿಗಳ ಬೇಡಿಕೆಗಳು:
ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಿ. ವಿದ್ಯಾಸಿರಿ ವಿದ್ಯಾರ್ಥಿವೇತನ ಯೋಜನೆಯನ್ನು ಮರು ಜಾರಿಗೊಳಿಸಿ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅನುದಾನ ಹೆಚ್ಚಿಸಿ. ಸರ್ಕಾರದ ಅನುದಾನದಿಂದಲೇ ವಿಶ್ವವಿದ್ಯಾನಿಲಯಗಳ ಆಡಳಿತ ನಿರ್ವಹಣೆಗಾಗಿ ಎಲ್ಲಾ ಸರ್ಕಾರಿ ವಿವಿಗಳಿಗೆ ಸರಿಯಾದ ಅನುದಾನವನ್ನು ಒದಗಿಸಿ.
ಸ್ಥಗಿತಗೊಂಡಿದ್ದ ಸೈಕಲ್ ವಿತರಣೆ, ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ವಿತರಣೆ ಪುನರಾರಂಭಿಸಿ. ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಒದಗಿಸಿ. ನೂತನವಾಗಿ ಘೋಷಣೆಯಾಗಿರುವ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಿ.
ನಮ್ಮ ರಾಜ್ಯದಲ್ಲಿ ಏಮ್ಸ್ ಸ್ಥಾಪನೆಗಾಗಿ ರಾಯಚೂರು ನಗರದ ಹೆಸರನ್ನು ಘೋಷಣೆ ಮಾಡಿ. ಕಲಬುರಗಿ ನಗರದ ವಾಡಿ ಪಟ್ಟಣದಲ್ಲಿ ಒಂದು ಸರ್ಕಾರಿ ಪಿಯು ಕಾಜೇಜು ಸ್ಥಾಪಿಸಿ. ನೂತನವಾಗಿ ಸ್ವಯಂ ಹಣಕಾಸು ಸಂಸ್ಥೆಗಳನ್ನಾಗಿ ರಚಿಸಿರುವ ಸರ್ಕಾರಿ ಪದವಿ ಕಾಜೇಜುಗಳು ಹಾಗೂ ಸರ್ಕಾರಿ ಕ್ಲಸ್ಟರ್ ವಿವಿಗಳಿಗೆ ಅನುದಾನ ನೀಡಿ. ಸ್ವಯಂ ಹಣಕಾಸು ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯನ್ನು ಕೈಬಿಡಿ. ಬೆಂಗಳೂರು ನಗರದ ಪ್ರತಿಷ್ಠಿತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಯುವಿಸಿಇ ಅನ್ನು ಉಳಿಸಿರಿ. ಯುವಿಸಿಇ-2021 ಕಾಯ್ದೆಯನ್ನು ರದ್ದುಗೊಳಿಸಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಎಂದು ಅವರು ಆಗ್ರಹಿಸಿದರು.
ಜಿಲ್ಲೆಯ ಪ್ರಮುಖ ಬೇಡಿಕೆಗಳು
ಮೈಸೂರಿನ ಮಹಾರಾಣಿ ಮಹಿಳಾ ಕಲಾ ಹಾಗೂ ವಿಜ್ಞಾನ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳನ್ನು ನಿರ್ಮಿಸಿ. ಕುಸಿದು ಬಿದ್ದಿದ್ದ ರಸಾಯನಶಾಸ್ತ್ರ ಪ್ರಯೋಗಾಲವನ್ನು ಪುನರ್ ನಿರ್ಮಿಸಿ. ಕಾಲೇಜಿನ ಆವರಣದೊಳಗೆ ಇಂದಿರಾ ಕ್ಯಾಂಟೀನ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅನ್ನು ಸ್ಥಾಪಿಸಿ. ಕಾಲೇಜಿಗೆ ಶೌಚಾಲಯ ಸ್ವಚ್ಛತೆ, ಕುಡಿಯುವ ನೀರು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ಒದಗಿಸಿ. ಮಹಾರಾಣಿ ವಾಣಿಜ್ಯ ಕಾಲೇಜಿಗೆ ಸೂಕ್ತ ಬಸ್ ವ್ಯವಸ್ಥೆಯನ್ನು ಕಲ್ಪಿಸಿ. ಮೈಸೂರಿನಲ್ಲಿ ಒಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.