ಐಟಿ, ಬಿಟಿ ವಲಯದಲ್ಲಿ ಬೆಂಗಳೂರು ಸಾಧನೆಗೆ ಸಿಂಗಾಪುರ ಮಾದರಿ: ಅಶ್ವತ್ಥ

Published : Aug 05, 2022, 09:33 AM ISTUpdated : Aug 05, 2022, 09:34 AM IST
ಐಟಿ, ಬಿಟಿ ವಲಯದಲ್ಲಿ ಬೆಂಗಳೂರು ಸಾಧನೆಗೆ ಸಿಂಗಾಪುರ ಮಾದರಿ: ಅಶ್ವತ್ಥ

ಸಾರಾಂಶ

ಐಟಿ ಮತ್ತು ಬಿಟಿ ವಲಯಗಳಲ್ಲಿ ಬೆಂಗಳೂರು ಸಾಧಿಸಿರುವ ಅಗಾಧ ಬೆಳವಣಿಗೆಗೆ ಸಿಂಗಾಪುರ ಮಾದರಿಯಾಗಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.  

ಕನ್ನಡಪ್ರಭ ವಾರ್ತೆ ಬೆಂಗಳೂರು

ಐಟಿ ಮತ್ತು ಬಿಟಿ ವಲಯಗಳಲ್ಲಿ ಬೆಂಗಳೂರು ಸಾಧಿಸಿರುವ ಅಗಾಧ ಬೆಳವಣಿಗೆಗೆ ಸಿಂಗಾಪುರ ಮಾದರಿಯಾಗಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಬ್ರಿಗೇಡ್‌ ಸಮೂಹವು ಸಿಂಗಾಪುರದ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆ ಎಐಸಿ ಸಹಯೋಗದಲ್ಲಿ ಕುಂದಲಹಳ್ಳಿಯ ಐಟಿಪಿಎಲ್‌ನಲ್ಲಿ ನಿರ್ಮಿಸಿರುವ ಬ್ರಿಗೇಡ್‌ ಟೆಕ್‌ ಗಾರ್ಡನ್‌ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಸಚಿವರು ಮಾತನಾಡಿದರು. ಸಿಂಗಾಪುರ ಮತ್ತು ಬೆಂಗಳೂರಿನ ಸಂಬಂಧ ಮೊದಲಿನಿಂದಲೂ ಸೌಹಾರ್ದದಿಂದ ಕೂಡಿದೆ. ಈಗಾಗಲೇ ನಗರದಲ್ಲಿ ಹಲವು ಹೆಗ್ಗುರುತುಗಳನ್ನು ಹೊಂದಿರುವ ಬ್ರಿಗೇಡ್‌ ಸಮೂಹವು ಬೆಂಗಳೂರಿನಲ್ಲಿ ನಾವೀನ್ಯತಾ ಕೇಂದ್ರವನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದರು.

ಸುಸ್ಥಿರತೆ, ಗುಣಮಟ್ಟ ಮತ್ತು ಉತ್ಕೃಷ್ಟತೆ ಇಂದಿನ ಅಭಿವೃದ್ಧಿಯಲ್ಲಿ ಆಧಾರಸ್ತಂಭಗಳಾಗಿವೆ. ಕರ್ನಾಟಕ ಮತ್ತು ಬೆಂಗಳೂರು ಅತ್ಯುತ್ತಮ ಹೂಡಿಕೆ ತಾಣವಾಗಿದ್ದು, ಸಿಂಗಪುರದ ಉದ್ಯಮಿಗಳು ಇದನ್ನು ಉಪಯೋಗಿಸಿ ಕೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ ಐಟಿ, ಐಟಿಇಎಸ್‌ ಮತ್ತು ಬಿಟಿ ಕ್ಷೇತ್ರಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ನೀತಿಗಳು ಮತ್ತು ಉಪಕ್ರಮಗಳನ್ನು ರಾಜ್ಯ ಸರ್ಕಾರ ಪರಿಚಯಿಸಿದೆ. ಕೌಶಲ ಅಭಿವೃದ್ಧಿಯನ್ನು ಪ್ರೋತ್ಸಾಹಿಸಿ ನವೀನತೆಗೆ ಸೂಕ್ತವಾದ ವಾತಾವರಣ ಸೃಷ್ಟಿಸುವುದು ಸರ್ಕಾರದ ಕರ್ತವ್ಯವಾಗಿದೆ. ಬೆಂಗಳೂರನ್ನು ಮತ್ತಷ್ಟುಆಕರ್ಷಕವಾಗಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮೆಟ್ರೋ ಮತ್ತು ಸಬರ್ಬನ್‌ ರೈಲ್ವೆ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ ಎಂದು ವಿವರಿಸಿದರು.

ಅರ್ಹತೆ ಇದ್ದವರು ಸಿಎಂ ಆಗಲಿ: ಸಚಿವ ಅಶ್ವತ್ಥ್ ನಾರಾಯಣ್

ಬ್ರಿಗೇಡ್‌ ಟೆಕ್‌ ಗಾರ್ಡನ್ಸ್‌ ಮುಖ್ಯಸ್ಥ ಎಂ.ಆರ್‌.ಜೈಶಂಕರ್‌ ಮಾತನಾಡಿ, ಸುಸ್ಥಿರ ಮತ್ತು ಭವಿಷ್ಯದ ದೃಷ್ಟಿಯಿಂದ ಬ್ರಿಗೇಡ್‌ ಟೆಕ್‌ ಗಾರ್ಡನ್ಸ್‌ ಕಚೇರಿ ರೂಪಿಸಲಾಗಿದೆ. 20ಕ್ಕೂ ಹೆಚ್ಚಿನ ಜಾಗತಿಕ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಇದು ಐಟಿ ಮತ್ತು ಐಟಿಇಎಸ್‌ ವಲಯಕ್ಕೆ ಪೂರಕವಾಗಿದೆ. ಜತೆಗೆ ನಗರದ ಆರ್ಥಿಕತೆ ಬಲವರ್ಧನೆ ಸಹಕಾರಿಯಾಗಲಿದೆ ಎಂದರು. ಈ ವೇಳೆ ಶಾಸಕ ಅರವಿಂದ ಲಿಂಬಾವಳಿ, ಫಿಡೆಲಿಟಿ ನ್ಯಾಷನಲ್‌ ಫೈನಾನ್ಷಿಯಲ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಗಿಡ್ಡಿಂಗ್‌, ಜಿಐಸಿನ ರಿಯಲ್‌ ಎಸ್ಟೇಟ್‌ ವಿಭಾಗದ ಮುಖ್ಯ ಹೂಡಿಕೆ ಅಧಿಕಾರಿ ಲೀ ಕೊಕ್‌ ಸನ್‌, ಮರ್ಸಿಡಿಸ್‌-ಬೆಂಜ್ ಆರ್‌ ಆ್ಯಂಡ್‌ ಡಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನು ಸಾಲೆ ಮೊದಲಾದವರಿದ್ದರು.

ಹತ್ಯೆಯಾದ ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕ 10 ಲಕ್ಷ ರೂ. ನೆರವು ಘೋಷಿಸಿದ ಅಶ್ವತ್ಥ ನಾರಾಯಣ

ಸಿಎಂ ಅಭಿನಂದನೆ

ತನ್ನ ತಂತ್ರಜ್ಞಾನ ಶಕ್ತಿಯಿಂದ ಕರ್ನಾಟಕ ಖ್ಯಾತಿ ಪಡೆದಿದೆ. ಬೆಂಗಳೂರು ನಗರವು ಸಿಲಿಕಾನ್‌ ವ್ಯಾಲಿ ಎಂಬ ಬಿರುದನ್ನು ಪಡೆದಿದೆ. ಕರ್ನಾಟಕ ಹೂಡಿಕೆಯ ನೆಚ್ಚಿನ ತಾಣವಾಗಿದೆ. ಹೆಚ್ಚಿನ ಸಂಖ್ಯೆಯ ಅಂತಾರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ರಾಜ್ಯದಲ್ಲಿವೆ. ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ಜಾಗತಿಕ ಕೇಂದ್ರವಾಗಿದೆ. ತನ್ನ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬ್ರಿಗೇಡ್‌ ಟೆಕ್‌ ಗಾರ್ಡನ್ಸ್‌ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಕ್ಕೆ ಬ್ರಿಗೇಡ್‌ ಗ್ರೂಪ್‌ನ ತಂಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಮೂಲಕ ಅಭಿನಂದಿಸಿದ್ದಾರೆ.
 

PREV
click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?