Siddaramaiah: ಅಚ್ಚೇ ದಿನ್ ಎಲ್ಲಿ, 15 ಲಕ್ಷ ಎಲ್ಲಿ? ಬಿಜೆಪಿಗೆ ಸವಾಲೆಸೆದು ತಮ್ಮ ರಾಜೀನಾಮೆ ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ!

Published : Sep 05, 2026, 04:43 PM IST
siddaramaih

ಸಾರಾಂಶ

ಬೀರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು, ಪ್ರಧಾನಿ ಮೋದಿಯವರ 'ಅಚ್ಚೇ ದಿನ್' ಮತ್ತು 15 ಲಕ್ಷದ ಭರವಸೆಗಳನ್ನು ಪ್ರಶ್ನಿಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ತಮ್ಮ ಮುಖ್ಯಮಂತ್ರಿ ಸ್ಥಾನದ ರಾಜೀನಾಮೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಬೀರೂರು (ಚಿಕ್ಕಮಗಳೂರು); ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭಕ್ತ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸ್ವಾತಂತ್ರ್ಯ ಹೋರಾಟ ಮಾಡಿದ್ರಾ?

ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, "ನಾನು ಯಾವುದೋ ಒಂದು ದೇವಸ್ಥಾನಕ್ಕೆ ಹೋದಾಗ ಕೆಲವರು ಮೋದಿ... ಮೋದಿ... ಎಂದು ಘೋಷಣೆ ಕೂಗುತ್ತಿದ್ದರು. ನನಗೆ ಅರ್ಥವಾಗುತ್ತಿಲ್ಲ, ಈ ಮೋದಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರಾ? ಅಥವಾ ಸಂಗೊಳ್ಳಿ ರಾಯಣ್ಣನ ತರ ದೇಶಕ್ಕಾಗಿ ಹೋರಾಟ ನಡೆಸಿದ್ದಾರಾ? ಜನರು ಸುಮ್ಮನೆ ವಿಷಯ ತಿಳಿಯದೆ ಮೋದಿ... ಮೋದಿ... ಎಂದು ಜಪಿಸುತ್ತಿದ್ದಾರೆ" ಎಂದು ಆಕ್ರೋಶ ಹೊರಹಾಕಿದರು. ಮುಂದುವರಿದು ಕೇಂದ್ರ ಸರ್ಕಾರದ ವಚನಭ್ರಷ್ಟತೆಯನ್ನು ನೆನಪಿಸಿದ ಅವರು, "ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ಎಲ್ಲಿ ಹೋಯ್ತು ಆ ಕೆಲಸಗಳು? ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಮಾಡಿದ್ರಾ? ಪ್ರಧಾನಿಯಾಗಿ 12 ವರ್ಷಗಳೇ ಕಳೆದುಹೋದವು. ವಿದೇಶದಲ್ಲಿದ್ದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದಿದ್ದರು, ಯಾರ ಖಾತೆಗಾದರೂ ಒಂದು ರೂಪಾಯಿ ಬಿತ್ತಾ? ಹೀಗಿರುವಾಗ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಜನ ಏಕೆ ಮತ ಹಾಕಬೇಕು? ಬಿಜೆಪಿ ನಾಯಕರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ" ಎಂದು ಕಿಡಿಕಾರಿದರು.

ಸಿ.ಟಿ. ರವಿಗೆ 'ಲೂಟಿ ರವಿ' ಎಂದು ಕಟು ಟೀಕೆ!

ಇದೇ ವೇಳೆ ಸ್ಥಳೀಯ ನಾಯಕರಾದ ವೈ.ಎಸ್.ವಿ. ದತ್ತಾ ಅವರ ವಿರುದ್ಧ ಗೆದ್ದ ಸಿ.ಟಿ. ರವಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, "ತಮ್ಮಯ್ಯಾ... ಯಾರಯ್ಯಾ ನಿನ್ನ ಮೇಲೆ ಸೋತದ್ದು? ಸಿ.ಟಿ. ರವಿನಾ?" ಎಂದು ಪ್ರಶ್ನಿಸಿದರು. "ಸಿ.ಟಿ. ರವಿ ಮೊನ್ನೆ ಏನೋ ಹೇಳುತ್ತಿದ್ದನಂತೆ. ನಾನು ಆ ಪದವನ್ನು ಬಳಸಲ್ಲ, ಆದರೆ ನಮ್ಮ ಕಡೆಯಲ್ಲಿ ಅವರನ್ನು 'ಲೂಟಿ ರವಿ' ಎಂದು ಕರೆಯುತ್ತಾರೆ. ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆ ನೀಡಲಿಲ್ಲ, ಅದಕ್ಕೇ ನನ್ನ ಸಿಎಂ ಸ್ಥಾನ ಹೋಯ್ತು ಎಂದು ಅವನು ಹೇಳುತ್ತಿದ್ದಾನಂತೆ" ಎಂದು ವ್ಯಂಗ್ಯವಾಡಿದರು.

"ಕೊಟ್ಟ ಮಾತು ಉಳಿಸಿಕೊಂಡಿದ್ದು ಸಿದ್ದರಾಮಯ್ಯ ಸರ್ಕಾರ"!

ತಮ್ಮ ಮುಖ್ಯಮಂತ್ರಿ ಸ್ಥಾನದ ರಾಜೀನಾಮೆ ಪ್ರಸಂಗವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, "ನಾನು ರಾಹುಲ್ ಗಾಂಧಿಯವರಿಗೆ ಮಾತು ಕೊಟ್ಟಿದ್ದೆ. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದ ತಕ್ಷಣ ರಾಜೀನಾಮೆ ಕೊಟ್ಟೆ. ಆ ಸಮಯದಲ್ಲಿ ಬಹಳ ಜನ ನಾಯಕರು 'ಸರ್, ರಾಜೀನಾಮೆ ನೀಡಬೇಡಿ' ಎಂದು ಮನವಿ ಮಾಡಿದರು. ಆದರೆ ನಾನು ಮಾತು ಕೊಟ್ಟಿದ್ದೇನೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಸ್ಥಾನ ತ್ಯಾಗ ಮಾಡಿದೆ. ಕರ್ನಾಟಕ ರಾಜಕೀಯದ ಇತಿಹಾಸದಲ್ಲೇ ಕೊಟ್ಟ ಮಾತನ್ನು ಶೇಕಡಾ ನೂರರಷ್ಟು ಉಳಿಸಿಕೊಂಡ ಯಾವುದಾದರೂ ಸರ್ಕಾರ ಇದ್ದರೆ, ಅದು ನಮ್ಮ ಸಿದ್ದರಾಮಯ್ಯ ಸರ್ಕಾರ" ಎಂದು ಹೆಮ್ಮೆಯಿಂದ ಹೇಳಿದರು.

PREV
Read more Articles on
click me!

Recommended Stories

Gowrishankar SRG: ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ, 'ಕೆರೆಬೇಟೆ' ಸಿನಿಮಾ ನಾಯಕನಿಗೆ ಫಿಲ್ಮ್‌ಫೇರ್
ಬೆಂಗಳೂರಲ್ಲಿ ಭಯಾನಕ ಹಾರರ್ : ಮಧ್ಯರಸ್ತೆಯಲ್ಲಿ ಗಂಡನ ಎದುರಲ್ಲೇ ನಡೀತು ಲೈಂ*ಕ ದೌರ್ಜನ್ಯ