ಸರ್ಕಾರಿ ಶಾಲೆಯಲ್ಲೊಂದು ಹ್ಯಾಪಿ ಇಂಗ್ಲಿಷ್ ಲ್ಯಾಬ್: ಹಳ್ಳಿ ಮಕ್ಕಳ ಭಯ ಓಡಿಸಿದ ಶಿಕ್ಷಕ!

Published : Sep 05, 2026, 02:48 PM IST
Teacher

ಸಾರಾಂಶ

ಉಡುಪಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಾದ ಅಶೋಕ್ ತೆಕ್ಕಟ್ಟೆ ಮತ್ತು ಸುರೇಶ್ ಮರಕಾಲ ಅವರ ವಿನೂತನ ಬೋಧನಾ ಕ್ರಮಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿವೆ. ಅಶೋಕ್ ಅವರು 'ಹ್ಯಾಪಿ ಇಂಗ್ಲೀಷ್ ಲ್ಯಾಬ್' ಮೂಲಕ ಮಕ್ಕಳ ಇಂಗ್ಲೀಷ್ ಭೀತಿ ಹೋಗಲಾಡಿಸಿದರೆ, ಸುರೇಶ್ ಅವರ 'ಜೀವನ ಶಿಕ್ಷಣ' ಪ್ರಯೋಗವು ವಿದ್ಯಾರ್ಥಿಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

ಸುಭಾಶ್ಚಂದ್ರ ವಾಗ್ಳೆ

ಉಡುಪಿ: ಇವತ್ತಿಗೂ ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳ ವಿದ್ಯಾರ್ಥಿಗಳ‍ ದೊಡ್ಡ ಸಮಸ್ಯೆ ಇಂಗ್ಲೀಷ್ ಭಾಷೆ, ಹಳ್ಳಿಯ ಮಕ್ಕಳು ಹೈಸ್ಕೂಲು ಮುಗಿದು ನಗರದ ಕಾಲೇಜಿಗೆ ಸೇರಿದಾಗ ಅಲ್ಲಿ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳ ಮುಂದೆ ಕಾಡುವ ಕೀಳರಿಮೆ, ಇಂಗ್ಲೀಷಿನಲ್ಲಿ ಪ್ರಾಧ್ಯಾಪಕರ ಪಾಠಗಳನ್ನು ಅರ್ಥ ಮಾಡಿಕೊಳ್ಳಲಾಗದ ಆಸಹಾಯಕತೆ, ಇಂಗ್ಲೀಷ್‌ನಲ್ಲಿ ಪ್ರಶ್ನೆಗೆ ಉತ್ತರಿಸಲಾಗದ ಆತಂಕ, ಇಂಗ್ಲೀಷಿನಲ್ಲಿ ಮಾತನಾಡಿದರೇ ಉಚ್ಛಾರ, ವ್ಯಾಕರಣ ತಪ್ಪಾಗುವ ಹೆದರಿಕೆ - ಇವುಗಳನ್ನು ದೂರ ಮಾಡುವುದಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹ್ಯಾಪಿ ಇಂಗ್ಲೀಷ್ ಲಾಂಗ್ವೆಜ್ ಲ್ಯಾಬ್‌ನ್ನು ಆರಂಭಿಸಲಾಗಿದೆ. ಈ ಯಶಸ್ವಿ ಪ್ರಯೋಗದ ಹಿಂದಿರುವವರು ಇಲ್ಲಿನ ಶಿಕ್ಷಕ ಅಶೋಕ್ ತೆಕ್ಕಟ್ಟೆ.

ಬಹುಶಃ ರಾಜ್ಯದಲ್ಲಿಯೇ ಇದೊಂದು ಅಪರೂಪದ ಪ್ರಯೋಗ, ದಾನಿಗಳ ನೆರವಿನಿಂದ ಆರಂಭಿಸಲಾದ ಈ ಪ್ರಯೋಗಾಲಯದಲ್ಲಿ ಉತ್ತಮ ಪೀಠೋಪಕರಣಗಳು, 30 ಕಂಪ್ಯೂಟರ್‌ಗಳು, ಅವುಗಳಿಗೆ ಗುಣಮಟ್ಟದ ಹೆಡ್‌ಫೋನ್‌ಗಳಿವೆ.

ಹೆಸಕುತ್ತೂರು ಗ್ರಾಮದ ಸುತ್ತಮುತ್ತಲಿನ 10 ಕಿಮಿ ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಅವರನ್ನು ಕಾಡುವ ಇಂಗ್ಲೀಷ್ ಭಾಷಾ ಕೀಳರಿಮೆ, ಭಯವನ್ನು ಹೋಗಲಾಡಿಸುವುದಕ್ಕಾಗಿ ಮತ್ತು ಗುಣಮಟ್ಟದ, ವ್ಯಾಕರಣಬದ್ಧ ಇಂಗ್ಲೀಷ್ ಭಾಷೆಯನ್ನು ಕಲಿಸುವುದಕ್ಕಾಗಿ ಪ್ರತಿದಿನ ಒಂದು ಗಂಟೆ ಕಾಲ ಅಶೋಕ್ ಅವರು ಈ ಲ್ಯಾಬ್‌ನಲ್ಲಿ ಪಾಠ ಮಾಡುತ್ತಾರೆ.

ಇಲ್ಲಿ ಕಂಪ್ಯೂಟರ್‌ಗಳಿಗೆ ಲ್ಯಾಂಗ್ವೆಜ್ ಲ್ಯಾಬ್ ಸಾಪ್ಟ್‌ವೇರನ್ನು ಅಳವಡಿಸಲಾಗಿದೆ. ಅವುಗಳ ಮೂಲಕ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯನ್ನು ಕಲಿಸುವ ರೈಮ್ಸ್‌, ಸ್ಟೊರೀಸ್, ಶಬ್ದಕೋಶ, ಸ್ಪೋಕನ್ ಇಂಗ್ಲೀಷ್, ಕಾರ್ಟೂನ್‌, ಸಿನೆಮಾಗಳಿವೆ. ಆದ್ದರಿಂದ ಇಲ್ಲಿ ವಿದ್ಯಾರ್ಥಿಗಳು ಕೇವಲ ಇಂಗ್ಲೀಷನ್ನು ಓದುವುದು ಅಥವಾ ಕೇಳುವುದು ಮಾಡುವುದಿಲ್ಲ, ನೋಡುತ್ತಾರೆ ಮತ್ತು ಕಂಪ್ಯೂಟರ್ ಜೊತೆ ಮಾತನಾಡುತ್ತಾರೆ, ತಪ್ಪಾದರೇ ತಿದ್ದಿಕೊಳ್ಳುತ್ತಾರೆ ಕೂಡ.

ಈ ಪ್ರಯೋಗಾಲಯದಿಂದ ಇಲ್ಲಿನ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್‌ನಲ್ಲಿ ಬರೆಯುವ ಓದುವ ಜೊತೆಗೆ ಜೊತೆಗೆ ವ್ಯಾಕರಣಬದ್ಧ ಸರಿಯಾದ ಉಚ್ಚಾರಸಹಿತ ಮಾತನಾಡುವ ಕೌಶಲ್ಯ, ಆತ್ಮಸ್ಥೈರ್ಯ ಗಣನೀಯವಾಗಿ ಹೆಚ್ಚಿದೆ, ಇದರಿಂದ ಫಲಿತಾಂಶದಲ್ಲಿಯೂ ಸುಧಾರಣೆಯಾಗಿದೆ, ಕೀಳರಿಮೆ ಕಡಿಮೆಯಾಗಿದೆ.

ಶಿಕ್ಷಕ ಅಶೋಕ್ ಅವರ ಈ ಸಾಧನೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿತ್ತು, ರಾಷ್ಟ್ರೀಯ ಪ್ರಶಸ್ತಿಗೆ ಅವರ ಹೆಸರು ಅಂತಿಮ ಸುತ್ತಿಗೂ ತಲುಪಿತ್ತು.

ವಿದ್ಯಾರ್ಥಿಗಳನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಾಧಕ ಶಿಕ್ಷಕ ಸುರೇಶ್ ಮರಕಾಲ

‘ಕಾಲೇಜಿನಲ್ಲಿ ಫೇಲಾಗಿದ್ದ ಹುಡುಗ, ಶಿಕ್ಷಕನಾಗಿ ಎರಡೆರಡು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ, ಜೊತೆಗೆ ತನ್ನ ಐದು ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ, ಇಬ್ಬರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಾಧನಾಗಾಥೆಯ ನಾಯಕ ಈ ಸುರೇಶ್ ಮರಕಾಲ.

ಪಿಯುಸಿಯಲ್ಲಿ ಫೇಲಾಗಿ, 3 ವರ್ಷ ಅಲ್ಲಿ ಇಲ್ಲಿ ದುಡಿಮೆ ಮಾಡಿ, ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ದ್ವಿತೀಯ ಪದವಿಯಲ್ಲೇ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿ, ಎಸ್ಪಿ ಕಚೇರಿಯಲ್ಲಿ ಕಂಪ್ಯೂಟರ್ ಎಕ್ಸ್‌ಪರ್ಟ್, ಗೂಗಲ್ ಅರ್ಥ್ ಸ್ಪೆಷಲಿಸ್ಟ್ ಆಗಿ 8 ವರ್ಷ ಸೇವೆ ಸಲ್ಲಿಸಿ, ಶಿಕ್ಷಕನಾಗಬೇಕೆಂಬ ಬಾಲ್ಯದಾಸೆ ಈಡೇರಿಸಿಕೊಳ್ಳಲು, ಬಿಎಡ್ ಪದವಿಗೆ ಸೇರಿ ಪ್ರಥಮ ರಾಂಕ್, 4 ಚಿನ್ನದ ಪದಕಗಳೊಂದಿಗೆ ಪಾಸಾಗಿ, ಸಮಾಜವಿಜ್ಞಾನ ಶಿಕ್ಷಕರಾಗಿ ಕೊಡಗಿನ ಸೋಮವಾರಪೇಟೆ, ಬೆಸೂರು, ಕುಂದಾಪುರ ತಾಲೂಕಿನ ಚಾರ್ಮಕ್ಕಿ, ಅಲ್ಬಾಡಿ-ಆರ್ಡಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಕಾರ್ಕಳ ತಾಲೂಕಿನ ಸರ್ಕಾರಿ ಪಪೂ ಕಾಲೇಜಿನಲ್ಲಿ ಶಿಕ್ಷಕರಾಗಿದ್ದಾರೆ.

ಅವರು ತಮ್ಮ ಸಮಗ್ರ ಸಾಧನೆಗೆ 2010ರಲ್ಲಿ ಪ್ರಧಾನ ಮಂತ್ರಿ ಪುರಸ್ಕಾರ‌ವನ್ನು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್‌ ಅವರಿಂದ ಸ್ವೀಕರಿಸಿದ್ದಾರೆ.

ಶಾಲೆಯ ಔಪಚಾರಿಕಾ ಶಿಕ್ಷಣವನ್ನು ಲವಲವಿಕೆಗೊಳಿಸುವುದಕ್ಕಾಗಿ, ಮಕ್ಕಳಿಗೆ ಶಾಡೋಪ್ಲೇ, ತಲೆಕೆಳಗಾಗಿ ಬರೆಯುವ ಕನ್ನಡಿ ಬರಹ, ಪಿಯಾನೋ ಕೊಳಲು ಕೀಬೋರ್ಡ್, ಅಭಿನಯ, ತೋಟ-ಗಾರೆ-ಪ್ಲಬಿಂಗ್ ತರಬೇತಿ, ಕ್ಯಾಲಿಗ್ರಫಿ, ಗೋಡೆ ಪೈಂಟಿಂಗ್, ವಿಜ್ಞಾನ ಮಾಡೆಲ್ ತಯಾರಿ, ಟ್ಯಾಬ್ಲೋ ರಚನೆ, ಕಂಪ್ಯೂಟರ್ ಶಿಕ್ಷಣ ಇತ್ಯಾದಿಗಳನ್ನೊಳಗೊಂಡ ‘ಜೀವನ ಶಿಕ್ಷಣ’ ಎಂಬ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಕೊಡಗಿನ ಬೆಸೂರು ಶಾಲೆಯಲ್ಲಿದ್ದಾಗ ಈ ‘ಜೀವನ ಶಿಕ್ಷಣ’ಕ್ಕಾಗಿ 2019ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಅತ್ಯುನ್ನತ ಶಿಕ್ಷಕ ರಾಷ್ಟ್ರಪ್ರಶಸ್ತಿ ಲಭಿಸಿತ್ತು.

2022ರಲ್ಲಿ ಚಾರ್ಮಕ್ಕಿ ಶಾಲೆಯಲ್ಲಿದ್ದಾಗ ಸುರೇಶ್ ಅವರಿಂದ ತರಬೇತಿ ಪಡೆದ ತಯಾರಿಸಿದ ವಿಜ್ಞಾನ ಮಾದರಿಗಳಿಗೆ, ಅತ್ಯಂತ ಹಿಂದುಳಿದ ಕುಡುಬಿ ಜನಾಂಗದ ವಿದ್ಯಾರ್ಥಿಗಳಾದ ರಕ್ಷಿತಾ ನಾಯ್ಕ - ಅನುಷಾ ನಾಯ್ಕ ರಾಷ್ಟ್ರಮಟ್ಟದ ಸಿಎಸ್‌ಐಆರ್ ಇನ್ನೊವೇಶನ್ ನ್ಯಾಷನಲ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ್ರನ್ ಸ್ಪರ್ಧೆಯಲ್ಲಿ ಗೆದ್ದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಪ್ರಶಸ್ತಿ ಪಡೆದರು.

ಪ್ರಸ್ತುತ ಕುಕ್ಕುಜೆ ಶಾಲೆಯಲ್ಲಿ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಸುರೇಶ್ ತರಬೇತಿ ನೀಡಿದ ಅಮೂಲ್ಯ ಹೆಗ್ಡೆ, ನಿಕಿತಾ, ಶ್ರೇಯಾ, ಅನಿಶ್ ಪೂಜಾರಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದರು. ಅಮೂಲ್ಯ, ನಿಕಿತಾ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿ, ಅಮೂಲ್ಯ ಕಂಚಿನ ಪದಕ ಗೆದ್ದುಕೊಂಡಳು ಅಲ್ಲದೇ ಅಮೂಲ್ಯ, ನಿಕಿತಾ ಜಪಾನ್‌ನ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನ ಸುಕೂರಾಕ್ಕೂ ಆಯ್ಕೆಯಾಗಿದ್ದಾರೆ.

PREV
Read more Articles on
click me!

Recommended Stories

Belagavi: ಕಾಡಿನಲ್ಲೊಂದು ಗುರುದೀಪ: ಅಕ್ಷರ ಸಂತ ನಿಂಗಪ್ಪ ಮೇಷ್ಟ್ರು, 29 ವರ್ಷಗಳಿಂದ ಸೇವೆ
ಬೆಳಗಾವಿ ಚಿನ್ನದ ನಿಧಿಯಲ್ಲಿ ರೋಚಕ ಟ್ವಿಸ್ಟ್: ನಿಧಿಯನ್ನು ಮನೆಗೆ ಕೊಂಡೊಯ್ದಿದ್ದ ಕಾರ್ಮಿಕ ಹೇಳಿದ್ದೇನು?