
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತೆ ಪ್ರಶ್ನೆಗೊಳಗಾಗಿದೆ. ನಗರದ ಹೃದಯಭಾಗದಲ್ಲೇ ಮುಂಜಾನೆ ದಂಪತಿಯನ್ನು ಅಡ್ಡಗಟ್ಟಿ ರಾಬರಿ ಮಾಡಿ, ಪತಿಯ ಮುಂದೆಯೇ ಪತ್ನಿಗೆ ಲೈಂಗಿಕ ಕಿರುಕುಳ ನೀಡಿರುವ ಅತ್ಯಂತ ಕರಾಳ ಘಟನೆ ಬೆಳಕಿಗೆ ಬಂದಿದೆ.
ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಸಿ ಫ್ಲೈ ಓವರ್ (ITC Flyover) ಮೇಲೆ ಮುಂಜಾನೆ ಆಘಾತಕಾರಿ ಘಟನೆ ನಡೆದಿದೆ. ದಂಪತಿಯು ಸ್ನೇಹಿತರ ಮನೆಗೆ ಭೇಟಿ ನೀಡಿ, ಅಲ್ಲಿಂದ ಆಟೋದಲ್ಲಿ ತಮ್ಮ ಮನೆಗೆ ವಾಪಸ್ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ದಂಪತಿ ಪ್ರಯಾಣಿಸುತ್ತಿದ್ದ ಆಟೋ ಫ್ಲೈ ಓವರ್ ಮೇಲೆ ಸಾಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಐದಾರು ಮಂದಿ ಪುಂಡರ ಗ್ಯಾಂಗ್ ಆಟೋವನ್ನು ಅಡ್ಡಗಟ್ಟಿದೆ. ಆಟೋ ನಿಲ್ಲಿಸುತ್ತಿದ್ದಂತೆ ಮಾರಕಾಸ್ತ್ರ (ಚಾಕು) ತೋರಿಸಿ ಹೆದರಿಸಿದ ದುಷ್ಕರ್ಮಿಗಳು, ಆಟೋ ಚಾಲಕ ಹಾಗೂ ದಂಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರಿಂದ ಮೊಬೈಲ್ ಫೋನ್‌ಗಳು, ಕೈಯಲ್ಲಿದ್ದ ಬ್ರಾಸ್‌ಲೆಟ್ ಹಾಗೂ ಪರ್ಸ್ ಅನ್ನು ದೋಚಿದ್ದಾರೆ.
ದರೋಡೆ ಮಾಡಿ ಹಣ, ಒಡವೆ ದೋಚಿದ ಮೇಲೂ ಪುಂಡರ ಅಟ್ಟಹಾಸ ನಿಂತಿಲ್ಲ. ದುಷ್ಕರ್ಮಿಗಳು ಮಹಿಳೆಯನ್ನು ಆಟೋದಿಂದ ಹೊರಕ್ಕೆ ಎಳೆದು, ಆಕೆಯ ಪತಿಯ ಎದುರಲ್ಲೇ ಲೈಂ*ಕ ದೌರ್ಜನ್ಯ ಎಸಗಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಮಹಿಳೆ ತೀವ್ರವಾಗಿ ಕಿರುಚಾಡಲು ಪ್ರಾರಂಭಿಸಿದಾಗ ಸ್ಥಳೀಯರು ಅಥವಾ ಪೊಲೀಸರು ಬರಬಹುದು ಎಂಬ ಭಯದಿಂದ ಪುಂಡರು ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ದಂಪತಿ ನೇರವಾಗಿ ಪುಲಕೇಶಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಲೆಮರೆಸಿಕೊಂಡಿರುವ ಐದಾರು ಮಂದಿ ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.