
ಹುಬ್ಬಳ್ಳಿ(ಜು.12): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಆರೋಪ ಮಾಡಿದ್ದಾರೆ. ಅವರ ಆರೋಪ ಮಾಡಿದ ನಂತರ ಸರ್ಕಾರವಾಗಲಿ ಅಥವಾ ಗಣಿ ಇಲಾಖೆ ಆದ್ರೂ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕಾಗಿತ್ತು. ಆದರೆ, ಇವತ್ತಿನವರೆಗೂ ಏನೂ ಆಗಿಲ್ಲ ಎಂದು ಹೇಳುವ ಮೂಲ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಲತಾ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ. ಕೆಆರ್‌ಎಸ್ ಸುತ್ತಮುತ್ತಲಿನ 20 ಕೀಲೋ ಮೀಟರ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಜೆಡಿಎಸ್ ನಾಯಕರ ಗಣಿ ಕಂಪನಿಗಳು ಇವೆ ಅಂತ ಎಂದು ಸುಮಲತಾ ಆರೋಪಿಸಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಆಡಳಿತ ಪಕ್ಷ ಭಾಗಿಯಾಗಿದ್ದಕ್ಕೆ ಸರ್ಕಾರ ಧ್ವನಿ ಎತ್ತುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ನಾನು ಬಾದಾಮಿಯಿಂದ ಶಾಸಕನಾಗಿರುವೆ, ಮುಂದೆ ಕೂಡ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ. ನನಗೆ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಇರೋದು ನಿಜ ಎಂದು ಹೇಳಿದ್ದಾರೆ.
ಕೈ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಸಿದ್ದು ವಿರುದ್ಧ ಬಿಜೆಪಿ ವಾಗ್ದಾಳಿ
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರಕ್ಕೆ ಮಾನ, ಮರ್ಯಾದೆ, ನಾಚಿಕೆ ಯಾವುದು ಇಲ್ಲ. ಮಾಲಿನ್ಯ ಮಂಡಳಿಯ ಅಧಿಕಾರಿಯನ್ನ ವರ್ಗಾವಣೆ ಮಾಡೋಕೆ 16 ಕೋಟಿ ಡೀಲಿಂಗ್ ಮಾಡಿದ್ದು ಸುಳ್ಳಾ..?. ಸರ್ಕಾರಕ್ಕೆ ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ಮಾಡೋಕೆ ಅನೂಕೂಲವಾಗಿದೆ. ಕೋವಿಡ್ ಸಂದರ್ಭದಲ್ಲಿ ಪ್ರತಿಪಕ್ಷಗಳು ಸಹ ಪ್ರತಿಭಟನೆ ಮಾಡೋಕೆ ಬರಲ್ಲ ಅನ್ನೋದು ಗೊತ್ತಿದೆ. ಹೀಗಾಗಿ ಸರ್ಕಾರ ಭ್ರಷ್ಟಾಚಾರ ಮಾಡಲು ಸಹಕಾರಿಯಾಗಿದೆ ಎಂದು ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಮ್ಮಲ್ಲಿ ಯಾವುದೇ ಬಣಗಳು ಸಹ ಇಲ್ಲ. ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ನಿಗದಿಯಾದ ನಂತರ ಅಭ್ಯರ್ಥಿಗಳ ಹೆಸರುಗಳನ್ನ ಘೋಷಣೆ ಮಾಡುತ್ತೇವೆ. ಜಾತಿ ಸಮೀಕ್ಷೆ ನಡೆದು ಎರಡೂವರೆ ಆಯ್ತು, ವರದಿ ಸಹ ಸಲ್ಲಿಕೆ ಮಾಡಲಾಗಿದೆ. ಆ ಕುರಿತು ಸದನದಲ್ಲಿ ಚರ್ಚೆ ಆಗುತ್ತಿಲ್ಲ. ಚರ್ಚೆ ಮಾಡಿದ್ರೆ ಸಾಮಾಜಿಕ ನ್ಯಾಯ ಒದಗಿಸಬೇಕಾಗುತ್ತದೆ. ಹೀಗಾಗಿ ಆ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.