ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್‌: ಬೇಡಿಕೆ ಮೇರೆಗೆ ಎರಡು ಹೊಸ ರೈಲುಗಳ ಘೋಷಣೆ...! ಇಲ್ಲಿದೆ ನೋಡಿ ಸಂಪೂರ್ಣ ರೈಲ್ವೆ ವೇಳಾಪಟ್ಟಿ

Kannadaprabha News   | Kannada Prabha
Published : Aug 29, 2026, 11:43 AM IST
Shivamogga Railway Station

ಸಾರಾಂಶ

ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಕಟಣೆಯಂತೆ, ಶಿವಮೊಗ್ಗ ಮತ್ತು ಆಂಧ್ರಪ್ರದೇಶದ ಮಚಿಲಿಪಟ್ಟಣಂ ಹಾಗೂ ಗುಂತಕಲ್ ನಡುವೆ ವಿಶೇಷ ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ. ಈ 'ಬೇಡಿಕೆಯ ಮೇರೆಗೆ ರೈಲು' (TOD) ಸೇವೆಯು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಆಂಧ್ರದೊಂದಿಗೆ ಸಂಪರ್ಕವನ್ನು ಸುಲಭಗೊಳಿಸಲಿದೆ.

ಶಿವಮೊಗ್ಗ: ಶಿವಮೊಗ್ಗ ಜನತೆಗೆ ಮತ್ತೊಂದು ವಿಶೇಷ ಸಿಹಿಸುದ್ದಿ ದೊರೆತಿದ್ದು, ಆಂಧ್ರ ಪ್ರದೇಶದ ಮಚಿಲಿಪಟ್ಟಣಂ ಮತ್ತು ಶಿವಮೊಗ್ಗ ನಡುವೆ ಹಾಗೂ ಆಂಧ್ರ ಪ್ರದೇಶದ ಗುಂತಕಲ್ ಮತ್ತು ಶಿವಮೊಗ್ಗ ಮಾರ್ಗಗಳಲ್ಲಿ ವಿಶೇಷ ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ದಕ್ಷಿಣ ಮಧ್ಯ ರೈಲ್ವೆ ಹಾಗೂ ನೈಋತ್ಯ ರೈಲ್ವೆಯ ಸಮನ್ವಯದಲ್ಲಿ ಬೇಡಿಕೆಯ ಮೇಲೆ ರೈಲು [Train on Demand - TOD] ಅನ್ವಯ ಎರಡು ವಿಶೇಷ ರೈಲ್ವೆ ಸೇವೆಗಳನ್ನು ಘೋಷಿಸಿದೆ. ಶಿವಮೊಗ್ಗ ಹಾಗೂ ಆಂಧ್ರ ಪ್ರದೇಶದ ಪ್ರಮುಖ ನಗರಗಳ ನಡುವಿನ ಪ್ರಯಾಣಿಕರಿಗೆ ಇದು ಅನುಕೂಲ ಕಲ್ಪಿಸಲಿದೆ. ಒಟ್ಟು 20 ಬೋಗಿಗಳ ರೈಲು ಇದಾಗಿದ್ದು. ಇದರಲ್ಲಿ 1 ಫಸ್ಟ್ ಎಸಿ/ಸೆಕೆಂಡ್ ಎಸಿ ಸಂಯೋಜಿತ ಬೋಗಿ, 1 ಸೆಕೆಂಡ್ ಎಸಿ, 2 ಥರ್ಡ್ ಎಸಿ, 9 ಸ್ಲೀಪರ್, 5 ಜನರಲ್ ಹಾಗೂ 2 SLR (Seating-cum-Luggage Rake) ಬೋಗಿಗಳು ಇರಲಿವೆ.

ರೈಲುಗಳ ವೇಳಾಪಟ್ಟಿ:

1. ಮಚಿಲಿಪಟ್ಟಣಂ–ಶಿವಮೊಗ್ಗ–ಮಚಿಲಿಪಟ್ಟಣಂ ವಿಶೇಷ ರೈಲು (07217/07218):

ರೈಲು ಸಂಖ್ಯೆ 07217 (ಮಚಿಲಿಪಟ್ಟಣಂ ಇಂದ ಶಿವಮೊಗ್ಗ ವರೆಗೆ): ಆ.30 ರಂದು ಮಚಿಲಿಪಟ್ಟಣಂನಿಂದ ಮಧ್ಯಾಹ್ನ 3.55ಕ್ಕೆ ಹೊರಟು, ಆ. 31 ಮಧ್ಯಾಹ್ನ 3ಕ್ಕೆ ಶಿವಮೊಗ್ಗ ತಲುಪಲಿದೆ.

ರೈಲು ಸಂಖ್ಯೆ 07218 (ಶಿವಮೊಗ್ಗದಿಂದ ಮಚಿಲಿಪಟ್ಟಣಂ ವರೆಗೆ): ಸೆ. 2 ರಂದು ಶಿವಮೊಗ್ಗದಿಂದ ಸಂಜೆ 5.40ಕ್ಕೆ ಹೊರಟು, ಸೆ.3 ಮಧ್ಯಾಹ್ನ 3.55ಕ್ಕೆ ಮಚಿಲಿಪಟ್ಟಣಂ ತಲುಪಲಿದೆ.

2. ಶಿವಮೊಗ್ಗ–ಗುಂತಕಲ್–ಶಿವಮೊಗ್ಗ ವಿಶೇಷ ರೈಲು (07219/07220):

ರೈಲು ಸಂಖ್ಯೆ 07219 (ಶಿವಮೊಗ್ಗದಿಂದ ಗುಂತಕಲ್ ವರೆಗೆ): ಆ.31ರಂದು ಶಿವಮೊಗ್ಗದಿಂದ ಸಂಜೆ 5.40ಕ್ಕೆ ಹೊರಟು, ಸೆ.1ರ ಬೆಳಗ್ಗೆ 7ಕ್ಕೆ ಗುಂತಕಲ್ ತಲುಪಲಿದೆ.

ರೈಲು ಸಂಖ್ಯೆ 07220 (ಗುಂತಕಲ್ ಇಂದ ಶಿವಮೊಗ್ಗವರೆಗೆ): ಸೆ. 2ರಂದು ಗುಂತಕಲ್‌ನಿಂದ ರಾತ್ರಿ 1.45ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 3ಕ್ಕೆ ಶಿವಮೊಗ್ಗ ತಲುಪಲಿದೆ.

ಈ ವಿಶೇಷ ರೈಲುಗಳು ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಹಾಗೂ ಅನಂತಪುರ ಸೇರಿದಂತೆ ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು, ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಆಂಧ್ರ ಪ್ರದೇಶದೊಂದಿಗೆ ರೈಲು ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿವೆ.

ಈ ವಿಶೇಷ ರೈಲುಗಳ ವೇಳಾಪಟ್ಟಿ ಹಾಗೂ ಕಾಯ್ದಿರಿಸುವಿಕೆಯ ಸೌಲಭ್ಯ ICMS ಮತ್ತು NTES ವ್ಯವಸ್ಥೆಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರು ಮುಂಗಡ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಹಬ್ಬದ ವೇಳೆ ಶಿವಮೊಗ್ಗ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳ ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ಈ ವಿಶೇಷ ರೈಲು ಸೇವೆಗಳು ಹೆಚ್ಚಿನ ಅನುಕೂಲವನ್ನು ಒದಗಿಸಲಿವೆ. ವಿಶೇಷವಾಗಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಯಾತ್ರಾರ್ಥಿಗಳಿಗೆ ಇದು ಉಪಯುಕ್ತವಾಗಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ವಿನಂತಿಸುತ್ತೇನೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮನವಿಗೆ ಸ್ಪಂದಿಸಿ ಈ ವಿಶೇಷ ರೈಲು ಸೇವೆಗಳನ್ನು ಒದಗಿಸಿರುವುದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಜಿ ಮತ್ತು ಶ್ರೀ ರವನೀತ್ ಸಿಂಗ್ ಬಿಟ್ಟು ಜಿ ಅವರಿಗೆ ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಂಸದರು ತಿಳಿಸಿದ್ದಾರೆ.

ಶಿವಮೊಗ್ಗದ ಜನತೆಗೆ ಇನ್ನಷ್ಟು ಉತ್ತಮ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿರಲಿವೆ. ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ಈ ಮಾರ್ಗಗಳಿಗೆ ಉತ್ತಮ ಸ್ಪಂದನೆ ದೊರೆತಲ್ಲಿ ಮುಂದೆ ನಿಯತವಾಗಿ ಈ ಮಾರ್ಗಗಳಲ್ಲಿ ರೈಲು ಸೇವೆ ಒದಗಿಸಲು ಅಗತ್ಯ ಕ್ರಮಕ್ಕಾಗಿ ಒತ್ತಾಯಿಸಲಾಗುವುದು ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬಾಡಿಗೆದಾರರ ಆಧಾರ್ ಕಾರ್ಡ್‌ ಬಳಸಿ ₹4 ಲಕ್ಷ ಸಾಲ ಪಡೆದ ಮನೆ ಮಾಲೀಕ! ಬ್ಯಾಂಕ್‌ ನೋಟೀಸ್ ನೋಡಿ ಕುಟುಂಬ ಶಾಕ್!
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿವಾದಿತ ಪೆಪ್ಟೈಡ್ ಪಾರ್ಟಿ ರದ್ದು, ಆಯೋಜಕರಿಗೆ ಎಫ್‌ಡಿಎ ಶೋಕಾಸ್ ನೋಟಿಸ್