
ಶಿವಮೊಗ್ಗ (ಜ.23): ಮನೆಯಿಂದ ತೋಟಕ್ಕೆ ಹೋಗುತ್ತೇನೆಂದು ಮನೆಯಿಂದ ಹೊರಗೆ ಹೋದ ವ್ಯಕ್ತಿ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಇಂದು (ಶುಕ್ರವಾರ) ತುಂಗಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಕುರುವಳ್ಳಿಯ ನಿವಾಸಿ ವಸಂತ (31) ಎಂದು ಗುರುತಿಸಲಾಗಿದೆ.
ವಸಂತ ಅವರು ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಹೋಗುತ್ತೇನೆ ಎಂದು ಹೇಳಿ ತೆರಳಿದ್ದರು. ಆದರೆ, ರಾತ್ರಿಯಾದರೂ ಮನೆಗೆ ವಾಪಾಸ್ ಬಾರದಿದ್ದಾಗ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು. ಇಂದು ಶುಕ್ರವಾರ ಹುಣಸವಳ್ಳಿ ಸಮೀಪದ ಭೂ ವರಹ ದೇವಸ್ಥಾನದ ಹತ್ತಿರ ನದಿ ತೀರದಲ್ಲಿ ಚಪ್ಪಲಿಗಳು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದಾಗ ವಸಂತ ಅವರ ಶವ ಪತ್ತೆಯಾಗಿದೆ.
ಇನ್ನು ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತುಂಗಾ ನದಿಯಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಡಿಸೆಂಬರ್ 23 ರಂದು ಶಿವಮೊಗ್ಗ ತಾಲೂಕಿನ ಪಿಳ್ಳಂಗೆರೆ ಗ್ರಾಮದ ಸಮೀಪ ನದಿಯಲ್ಲಿ ಈಜಲು ತೆರಳಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರೇಮ್‌ಕುಮಾರ್ (17) ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದನು. ಡಿವಿಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಈತ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಬಂದಾಗ ಈ ದುರ್ಘಟನೆ ಸಂಭವಿಸಿತ್ತು. ನದಿ ತೀರದ ನಿವಾಸಿಗಳು ಮತ್ತು ಪ್ರವಾಸಿಗರು ನೀರಿನ ಸೆಳೆತದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.