ಕೇರಳ ಬಳಿಕ ವೈರಲ್ ವಿಡಿಯೋಗೆ ಉತ್ತರ ಕನ್ನಡದ ಮತ್ತೊಬ್ಬ ವ್ಯಕ್ತಿ ಬಲಿ; ತುಳಸಿ ಗಿಡದ ಮುಂದೆ ಪ್ರಾಣಬಿಟ್ಟ ವ್ಯಕ್ತಿ!

Published : Jan 23, 2026, 01:06 PM IST
Uttara Kannada Raju Pikaale

ಸಾರಾಂಶ

ಕಾರವಾರದ ಪಿಕಳೆ ನರ್ಸಿಂಗ್ ಹೋಂ ಸಿಬ್ಬಂದಿ ರಾಜು ಪಿಕಳೆ, ಅವಧಿ ಮೀರಿದ ಮಾತ್ರೆ ನೀಡಿದ ಆರೋಪದ ವಿಡಿಯೋ ವೈರಲ್ ಆದ ಬಳಿಕ ತೀವ್ರ ಮಾನಸಿಕ ಖಿನ್ನತೆಯಿಂದ ಅಂಕೋಲಾದ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಕ್ಕೆ ಕನ್ನಡಿ ಹಿಡಿದಿದೆ.

ಉತ್ತರ ಕನ್ನಡ (ಜ.23): ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರತಿಷ್ಠಿತ ಪಿಕಳೆ ನರ್ಸಿಂಗ್ ಹೋಂನ ಹಿರಿಯ ಸಿಬ್ಬಂದಿಯೊಬ್ಬರು ಅಂಕೋಲಾ ತಾಲೂಕಿನ ಅವರ್ಸಾದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕಾರವಾರ ನಗರಸಭೆಯ ಮಾಜಿ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವರ ಸಂಬಂಧಿ ರಾಜು ಪಿಕಳೆ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ

ರಾಜು ಪಿಕಳೆ ಅವರು ಕಾರವಾರದ ಪಿಕಳೆ ನರ್ಸಿಂಗ್ ಹೋಂನ ಔಷಧಿ ವಿತರಣಾ ವಿಭಾಗದಲ್ಲಿ ಹಲವು ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಆದರೆ, ಸುಮಾರು 15 ದಿನಗಳ ಹಿಂದೆ ಅಪರಿಚಿತ ರೋಗಿಯ ಸಂಬಂಧಿಯೊಬ್ಬರು ರಾಜು ಪಿಕಳೆ ಅವರು ಅವಧಿ ಮೀರಿದ (Expired) ಮಾತ್ರೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ, ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.

ಮಾನಸಿಕ ಖಿನ್ನತೆ ಮತ್ತು ಕ್ಷಮೆಯಾಚನೆ

ವಿಡಿಯೋ ವೈರಲ್ ಆದ ನಂತರ ರಾಜು ಪಿಕಳೆ ಅವರು ತೀವ್ರವಾಗಿ ನೊಂದಿದ್ದರು. ಇದು ಕೇವಲ ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಅವರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳು ಮತ್ತು ತೇಜೋವಧೆಯಿಂದ, ಕಳೆದ ಎರಡು ವಾರಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.

ದುರಂತದ ವಿವರ

ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಅಂಗಳದ ತುಳಸಿಕಟ್ಟೆಯ ಮುಂಭಾಗವೇ ರಾಜು ಪಿಕಳೆ ಅವರು ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿಕೊಂಡು ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಅಕ್ಕಪಕ್ಕದವರು ಧಾವಿಸಿ ಬರುವಷ್ಟರಲ್ಲೇ ಕೊನೆಯುಸಿರೆಳೆದಿದ್ದರು. ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದ ವ್ಯಕ್ತಿ, ಕೇವಲ ಒಂದು ವಿಡಿಯೋ ವೈರಲ್ ಆದ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದು ಜಿಲ್ಲೆಯಾದ್ಯಂತ ವಿಷಾದ ಮೂಡಿಸಿದೆ.

ಪೊಲೀಸ್ ಭೇಟಿ ಮತ್ತು ತನಿಖೆ

ವಿಷಯ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಡಬಲ್ ಬ್ಯಾರಲ್ ಗನ್ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವಿಡಿಯೋಗಳು ವ್ಯಕ್ತಿಯ ಜೀವನದ ಮೇಲೆ ಎಂತಹ ಭೀಕರ ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ಮಂಗಳೂರು: ಉರ್ವ ಸ್ಟೋರ್ ಬಳಿ 29 ವರ್ಷಗಳ ಹಿಂದೆ ನಡೆದ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನ ಬಂಧನ
ಶಿಕ್ಷಕರು ಬೈದಿದ್ದಕ್ಕೆ ಬೇಸತ್ತು ವಿದ್ಯಾರ್ಥಿ ದುರಂತ ಅಂತ್ಯ? ಶಾಲಾ ಆವರಣದಲ್ಲೇ ಒಂಬತ್ತನೇ ತರಗತಿ ಬಾಲಕ ಸಾವು