ಶಿವಮೊಗ್ಗದಲ್ಲಿ ಭಾನುವಾರ ಪೊಲೀಸ್ ಕಾನ್‌ಸ್ಟೇಬಲ್ ಎಕ್ಸಾಂ: ಸುಸೂತ್ರವಾಗಿ ಪರೀಕ್ಷೆ ನಡೆಸಲು ಡಿಸಿ ತಾಕೀತು

Kannadaprabha News   | Kannada Prabha
Published : Sep 05, 2026, 07:51 AM IST
Shivamogga DC

ಸಾರಾಂಶ

ಶಿವಮೊಗ್ಗದಲ್ಲಿ ಸೆ.6 ರಂದು ನಡೆಯಲಿರುವ ಸಿಎಆರ್/ಡಿಎಆರ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 7651 ಅಭ್ಯರ್ಥಿಗಳು ಭಾಗವಹಿಸುವ ಈ ಪರೀಕ್ಷೆಗಾಗಿ 19 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸಿ, ಝೆರಾಕ್ಸ್‌ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಶಿವಮೊಗ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಸೆ.6 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ ಸಿಎಆರ್/ಡಿಎಆರ್ ಪೋಲಿಸ್ ಕಾನ್‌ಸ್ಟೇಬಲ್ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಯು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿಎಆರ್/ಡಿಎಆರ್ ಪೋಲಿಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ 1 ಇಂಜಿನಿಯರಿಂಗ್ ಕಾಲೇಜು, 3 ಡಿಗ್ರಿ, 2 ಹೈಸ್ಕೂಲ್‌ಗಳು ಮತ್ತು 13 ಪದವಿ ಪೂರ್ವ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಈ ಪರೀಕ್ಷೆಗೆ 7651 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಸೆ.6 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 6 ವಿತರಕ ಮಾರ್ಗಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.

ಅದಕ್ಕಾಗಿ ತ್ರಿಸದಸ್ಯ ಸಮಿತಿ ನೇಮಿಸಿ ಆದೇಶಿಸಲಾಗಿದೆ. ಮುಖ್ಯ ಅಧೀಕ್ಷಕ ವೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಮತ್ತು ಜಾಗೃತದಳದ ಸದಸ್ಯರ ನೇಮಕಗೊಳಿಸಿ ಆದೇಶಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವ ತ್ರಿಸದಸ್ಯ ಸಮಿತಿ ವಾಹನಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಹಾಗೂ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ನೀಡುವಂತೆಯೂ ಸೂಚಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಅಭಿಯಂತರರಿಗೆ ಸೂಚಿಸಲಾಗಿದೆ ಎಂದರು.

ನಿಯಮಾನುಸಾರ ಪರೀಕ್ಷಾರ್ಥಿಗಳು ನಿಗದಿತ ಸಮಯಕ್ಕೆ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಸ್ವತಃ ಸ್ವಯಂ ತಪಾಸಣೆಗೆ ಒಳಪಡಿಸಿಕೊಂಡು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯಿಂದಲೇ ವೆಬ್ ಕ್ಯಾಸ್ಟಿಂಗ್, ಮತ್ತು ಡ್ರೆಸ್ ಕೋಡ್ ಪರಿಶೀಲಿಸಿ ಕೊಠಡಿಯೊಳಗೆ ಬಿಡಲು ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ಝೆರಾಕ್ಸ್‌ ಮುಚ್ಚಲು ಆದೇಶ:

ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ.ಪ್ರದೇಶದ ವ್ಯಾಪ್ತಿಯಲ್ಲಿ ಬಿ.ಎನ್.ಎಸ್ ಸೆಕ್ಷನ್ 143 ಜಾರಿಗೊಳಿಸಿ ಆದೇಶಿಸಲಾಗಿದೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಜನರು ಗುಂಪುಗೂಡುವುದನ್ನು, ಅನಗತ್ಯವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸುವುದನ್ನು ಹಾಗೂ ಸಭೆ, ಸಮಾರಂಭ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೇ ಅಲ್ಲಿನ ಕಂಫ್ಯೂಟರ್, ಝೆರಾಕ್ಸ್‌ ಅಂಗಡಿಗಳನ್ನು ಮುಚ್ಚುವಂತೆಯೂ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಎಸ್ಪಿ ಬಿ.ನಿಖಿಲ್, ಎಡಿಸಿ ಅಭಿಷೇಕ್‌ವಿ.,ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಉಪನ್ಯಾಸಕ ಐ.ಎಫ್.ಕುಟ್ರಿ. ಜಿಲ್ಲಾ ಖಜಾನಾಧಿಕಾರಿ ಎಚ್.ಎಸ್. ಸಾವಿತ್ರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ದದ ಅಧಿಕಾರಿಗಳು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.

ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್‌ಗಳು, ಮೈಕ್ರೋಫೋನ್, ಪೇಜರ್, ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಪೆನ್ ಡ್ರೈವ್‌ಗಳು, ಎಲೆಕ್ಟ್ರಾನಿಕ್ ಪೆನ್/ಸ್ಕ್ಯಾನರ್, ಕೈಗಡಿಯಾರ, ಸ್ಮಾರ್ಟ್, ಸ್ಮಾರ್ಟ್ ವಾಚ್, ಆಧುನಿಕ ಸಂವಹನ ಸಾಧನಗಳು, ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತು ಶುದ್ಧ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಲು ಹಾಗೂ ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರ, ಕ್ಯಾಮೆರಾ ಕಣ್ಗಾವಲು ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

-ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

PREV
Read more Articles on
click me!

Recommended Stories

ಕೊರತೆಗಳ ಕುಂಪೆಯಾಗಿದ್ದ ಸರ್ಕಾರಿ ಶಾಲೆಗೆ ಎಐ, ಇಂಟರ್‌ನೆಟ್ ಎಲ್ಲ ಅಳವಡಿಸಿ ಹೈಟೆಕ್ ಸ್ಪರ್ಶ ನೀಡಿದ ಶಿಕ್ಷಕ!
2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ